‘ಕೈ’ ಶಾಸಕರಿಗೆ ‘ಕಮಲ’ ಬಲೆ

7
ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಷಡ್ಯಂತ್ರ: ಜೆಡಿಎಸ್‌–ಕಾಂಗ್ರೆಸ್ ನಾಯಕರ ಕಿಡಿ

‘ಕೈ’ ಶಾಸಕರಿಗೆ ‘ಕಮಲ’ ಬಲೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತ್ರ ಹೆಣೆದಿದೆ ಎಂದು ಜೆಡಿಎಸ್‌–ಕಾಂಗ್ರೆಸ್ ನಾಯಕರು ಆರೋಪಿಸಿರುವ ಬೆನ್ನಲ್ಲೇ, ‘ಕೈ’ ಶಾಸಕರನ್ನು ಸೆಳೆಯಲು ‘ಕಮಲ’ ಪಕ್ಷ ಬಲೆ ಬೀಸಿದೆ.

ಒಂದು ವಾರದಿಂದ ಈಚೆಗೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದ್ದ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳಕರ ಮಧ್ಯದ ಕದನಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಆದರೆ, ಪಿಎಲ್‌ಡಿ ಬ್ಯಾಂಕಿನ ಸೋಲಿನ ಕಹಿ ಉಂಡಿರುವ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಮತ್ತು ಸಚಿವ ರಮೇಶ ಜಾರಕಿಹೊಳಿ ಸ್ವಪಕ್ಷದ ವಿರುದ್ಧವೇ ತಿರುಗಿ ಬೀಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಶಾಸಕಿ ಹಾಗೂ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಬೆಂಬಲಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬೆಳಗಾವಿ ಜಿಲ್ಲೆಯ ಲಿಂಗಾಯತ ಸಮುದಾಯಕ್ಕೆ ಸೇರಿರುವ ಜನಪ್ರತಿನಿಧಿಗಳು ನಿಂತಿರುವುದು ಜಾರಕಿಹೊಳಿ ಸಹೋದರರನ್ನು ಕೆರಳಿಸಿದೆ. ನಾಯಕ ಜನಾಂಗದ ಮೇಲೆ ತಮ್ಮದೇ ಪ್ರಭಾವ ಹೊಂದಿರುವ ಈ ಸಹೋದರರು, ಕಾಂಗ್ರೆಸ್ ನಾಯಕತ್ವ ತಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಅಂದಾಜಿಸಿದ್ದರು. ಆದರೆ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಚುನಾವಣೆ ದಿನ ಪಕ್ಷದ ವರಿಷ್ಠರ ಸೂಚನೆಯಂತೆ ಬೆಳಗಾವಿಗೆ ಧಾವಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹೆಬ್ಬಾಳಕರ ಬೆಂಬಲಕ್ಕೆ ನಿಂತರು. ಇದರ ಹಿಂದೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಂತ್ರ ಕೆಲಸ ಮಾಡಿದೆ ಎಂಬುದೂ ಜಾರಕಿಹೊಳಿ ಸಹೋದರರ ಸಿಟ್ಟಿಗೆ ಕಾರಣ ಎನ್ನಲಾಗಿದೆ.

‘ಅಸಹನೆಯಿಂದ ಕುದಿಯುತ್ತಿರುವ ಜಾರಕಿಹೊಳಿ ಸಹೋದರರಿಗೆ ವಿವಿಧ ಆಮಿಷವೊಡ್ಡಿ ಪಕ್ಷಕ್ಕೆ ಕರೆತರುವ ಯತ್ನ ನಡೆದಿದೆ. ಅವರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಏನೂ ಆಗಬಹುದು’ ಎಂದು ಬಿಜೆಪಿ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೇಗೆ ಕೆಡುವುತ್ತಾರೆ–ಎಚ್‌ಡಿಕೆ ಸವಾಲು: ‘ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೇಗೆ ಕೆಡವುತ್ತಾರೆ ನೋಡೋಣ’ ಎಂದು ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

‘ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ವ್ಯರ್ಥ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯದ ರಾಜಕಾರಣ ಎಲ್ಲಿಗೆ ಹೋಗಿ ಮುಟ್ಟುತ್ತೆ ನೋಡೋಣ’ ಎಂದರು.

‘ಸಮ್ಮಿಶ್ರ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಏಳು ಶಾಸಕರಿಗೆ ಗಾಳ ಹಾಕಿರುವ ಆ ಪಕ್ಷದ ನಾಯಕರು, ಭಾರಿ ಆಮಿಷ ಒಡ್ಡುತ್ತಿದ್ದಾರೆ’ ಎಂದೂ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.

‘ಪಕ್ಷಕ್ಕೆ ಸೇರಿಕೊಳ್ಳಿ ಎನ್ನುವುದೂ ಸೇರಿದಂತೆ ಹಲವು ವಿಧದ ಒತ್ತಡಗಳನ್ನು ಬಿಜೆಪಿ ನಾಯಕರು ನನ್ನ ಹಾಗೂ ಶಿವಕುಮಾರ್ ಮೇಲೆ ತರುತ್ತಿದ್ದಾರೆ. ವಿವಿಧ ಹಂತಗಳಲ್ಲಿ ನಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ’ ಎಂದು ಹೇಳಿದರು.

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು...
‘ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು...’ ಎಂಬ ಸಿನಿಮಾ ಹಾಡಿನಂತೆ ನಮ್ಮ ಸರ್ಕಾರ. ಬಿಜೆಪಿ ಏನೇ ಪ್ರಯತ್ನ ಮಾಡಿದರೂ ಸರ್ಕಾರ ಉರುಳಿ ಹೋಗುವುದಿಲ್ಲ. ಏನೇ ಅಡೆತಡೆ ಬಂದರೂ ಎದುರಿಸಿ ಐದು ವರ್ಷ ಸುಭದ್ರ ಸರ್ಕಾರ ನೀಡಲಿದ್ದೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ’ ಎಂದು ಆರೋಪಿಸಿದರು.

ವದಂತಿಯದ್ದೇ ಕಾರುಬಾರು!
ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬ ವದಂತಿ ಶನಿವಾರವಿಡೀ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಹರಿದಾಡಿ, ತಲ್ಲಣ ಮೂಡಿಸಿತ್ತು.

‌‘ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಇ.ಡಿ ಅಧಿಕಾರಿಗಳು ಅವರನ್ನು ಬಂಧಿಸಲು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ’ ಎಂಬ ಸುದ್ದಿ ಹರಡಿತು. ಆ ಬೆನ್ನಲ್ಲೇ ಮಾಧ್ಯಮಗೋಷ್ಠಿ ನಡೆಸಿದ ಅವರ ತಮ್ಮ ಸುರೇಶ್, ಕೇಂದ್ರದ ವಿರುದ್ಧ ಹರಿಹಾಯ್ದರು.

ಬಿಜೆಪಿ ಕಾರ್ಯಕಾರಿಣಿಗೆ ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ದಿಢೀರ್‌ ರಾಜಧಾನಿಗೆ ವಾಪಸ್ ಆಗಿದ್ದು ಸರ್ಕಾರದ ಪತನದ ಸುದ್ದಿಗೆ ರೆಕ್ಕೆಪುಕ್ಕ ಕಟ್ಟಿಕೊಟ್ಟಿತು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರಸ್ವಾಮಿ, ‘ಸರ್ಕಾರವನ್ನು ಬದಲಿಸಿ ಪ್ರಮಾಣ ವಚನ ಸ್ವೀಕರಿಸಲು ಯಡಿಯೂರಪ್ಪ ಬಂದಿರಬೇಕು’ ಎಂದು ವ್ಯಂಗ್ಯವಾಡಿದರು.

ಇದಾಗುತ್ತಿದ್ದಂತೆ, ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯನ್ನು ಮುಖ್ಯಮಂತ್ರಿ ಕರೆದಿದ್ದಾರೆ. ಏನೋ ಪ್ರಮುಖ ನಿರ್ಣಯ ಆಗಲಿದೆ ಎಂಬ ಸುದ್ದಿಗಳೂ ಓಡಾಡಿದವು. ‘ಇದೇ 6ರಂದು ಈ ಸಭೆ ನಿಗದಿಯಾಗಿತ್ತು. ರಾಜಕೀಯ ಬೆಳವಣಿಗೆಗೂ ಸಭೆಗೂ ಸಂಬಂಧವಿಲ್ಲ’ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !