ಭಾನುವಾರ, ಆಗಸ್ಟ್ 25, 2019
20 °C
ಡಿ.ಕೆ. ಶಿವಕುಮಾರ್‌ ಟೀಕೆ

‘ರಾಷ್ಟ್ರ ಧ್ವಜಾರೋಹಣ ಮಾಡೋರೇ ಇಲ್ಲ’

Published:
Updated:

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರು ಬಹಳ ಆತುರದಲ್ಲಿ ಅಧಿಕಾರ ವಹಿಸಿಕೊಂಡರು. ಸಚಿವ ಸಂಪುಟ ರಚನೆಯಾಗದಿರುವುದರಿಂದಾಗಿ, ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸುವವರೇ ಇಲ್ಲವಾಗಿದ್ದಾರೆ. ಪ್ರವಾಹದಿಂದ ಲಕ್ಷಾಂತರ ಜನರು ತತ್ತರಿಸಿರುವ ಈ ಸಂದರ್ಭದಲ್ಲಿ ನಾವು ರಾಜಕಾರಣ ಮಾಡಲು ಹೋಗುವುದಿಲ್ಲ’ ಎಂದು ಶಾಸಕ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದರು.

ತಾಲ್ಲೂಕಿನಲ್ಲಿ ನೆರೆಯಿಂದ ಆಗಿರುವ ಹಾನಿಯನ್ನು ಸೋಮವಾರ ವೀಕ್ಷಿಸಿದ ಅವರು ಮೋದಗಾ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

‘ಪುನರ್ವಸತಿಗೆ ಸಂಬಂಧಿಸಿದಂತೆ ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರದ ಪರವಾಗಿ ನಿಲ್ಲುತ್ತೇವೆ. ಮುಖ್ಯಮಂತ್ರಿ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೇಂದ್ರವು ಪಕ್ಕದ ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಮಾಣದ ನೆರವನ್ನು ಕರ್ನಾಟಕಕ್ಕೆ ಕೊಡಬೇಕು. ನಷ್ಟ ತುಂಬಿ ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ವಿರೋಧಪಕ್ಷದಲ್ಲಿರುವ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರ ನಿಧಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇವೆ. ಈ ಬಗ್ಗೆ ನಾಯಕರಾದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಜೊತೆಯೂ ಚರ್ಚಿಸುತ್ತೇನೆ. ನನ್ನ ನಿಧಿಯಿಂದ ₹ 50 ಲಕ್ಷ ತೆಗೆದುಕೊಳ್ಳುವಂತೆ ಪತ್ರ ಬರೆಯುತ್ತೇನೆ. ವೈಯಕ್ತಿಕವಾಗಿಯೂ ನೆರವಾಗುತ್ತೇನೆ’ ಎಂದರು.

‘ರಾಜ್ಯ ಸರ್ಕಾರ ಹೇಳಿದ್ದನ್ನು ಒಪ್ಪುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬದಲಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ತಲಾ ₹ 10ಸಾವಿರವನ್ನಾದರೂ ಪರಿಹಾರ ನೀಡಬೇಕು. ನೊಂದ ಜನರಿಗೆ ನೆರವಾಗುವುದು ತಕ್ಷಣದ ಆದ್ಯತೆಯಾಗಬೇಕು’ ಎಂದು ಒತ್ತಾಯಿಸಿದರು.

Post Comments (+)