ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯಕ್ಕೆ ಹೊರತಾದ ಪ್ರಶ್ನೆ ಕೇಳಲ್ಲ: ಜಾಫರ್ ಸ್ಪಷ್ಟನೆ

Last Updated 18 ಫೆಬ್ರುವರಿ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯಕ್ಕೆ ಹೊರತಾದ (ಔಟ್‌ ಆಫ್‌ ಸಿಲಬಸ್‌) ಪ್ರಶ್ನೆಗಳು ಬಂದಿದ್ದವು. ಅದಕ್ಕೆ ಉತ್ತರ ಗೊತ್ತಾಗಲಿಲ್ಲ ಎಂಬ ದೂರು ಪ್ರತಿ ವರ್ಷ ಪರೀಕ್ಷೆ ಸಂದರ್ಭಗಳಲ್ಲಿ ಸಾಮಾನ್ಯ’.

‘ಆದರೆ, ಪಠ್ಯದಿಂದ ಹೊರತಾದ ಪ್ರಶ್ನೆ ಕೇಳುವುದೇ ಇಲ್ಲ. ಪ್ರಶ್ನೆಯನ್ನು ನೇರವಾಗಿ ಕೇಳುವ ಬದಲು ಅನ್ವಯಿಕ (ಅಪ್ಲೈಡ್‌) ರೂಪದಲ್ಲಿ ಕೇಳಲಾಗುತ್ತದೆ. ಇದಕ್ಕೆ ಉತ್ತರಿಸಲು ವಿದ್ಯಾರ್ಥಿಗಳು ಸ್ವಲ್ಪ ತಲೆ ಖರ್ಚು ಮಾಡಬೇಕಾಗುತ್ತದೆ’ ಎಂದು ಡಾ. ಜಾಫರ್‌ ಅವರು ‘ಔಟ್‌ ಆಫ್‌ ಸಿಲೆಬಸ್‌’ ಗುಟ್ಟನ್ನು ಹೇಳಿದರು.

ಪ್ರಶ್ನೆ ಪತ್ರಿಕೆ ತಯಾರಿಸುವಾಗ ಮೂರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗುತ್ತದೆ. ಅವುಗಳೆಂದರೆ, ಜ್ಞಾನ; ವಿಷಯದ ಕುರಿತು ಇರುವ ಪ್ರಾಥಮಿಕ ಅರಿಕೆ. ಅರ್ಥೈಸುವಿಕೆ; ಹೇಳಿಕೊಟ್ಟ ವಿಷಯವನ್ನು ಪುನಃ ಹೇಳುವುದು. ಮೂರನೇ ಅಂಶವೆಂದರೆ, ಅನ್ವಯಿಕ; ಒಂದು ವಿಷಯವನ್ನು ಬೇರೆ ಬೇರೆ ಸಂದರ್ಭ, ಉದಾಹರಣೆಗಳೊಂದಿಗೆ (ಪಠ್ಯದಲ್ಲಿ ಇಲ್ಲದ ಉದಾಹರಣೆ) ಕೇಳಿದಾಗ ಗೊತ್ತಿರುವ ಜ್ಞಾನವನ್ನು ಹೇಗೆ ತಮ್ಮ ಉತ್ತರದಲ್ಲಿ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಪರೀಕ್ಷಿಸುವುದು ಎಂದು ವಿವರಿಸಿದರು.

ಶಿಕ್ಷಣ ಪದ್ಧತಿ ಬದಲಾಗಬೇಕು: ‘ಇತಿಹಾಸದಲ್ಲಿ ನಾವು ಕೇವಲ ಘಟನೆಗಳ ವಿವರ ನೀಡುತ್ತೇವೆ. ಆದರೆ, ಆ ಘಟನೆ ಹಿಂದಿನ ವಿವರಗಳನ್ನು, ಘಟನೆಯನ್ನು ಬೇರೆ ಬೇರೆ ಆಯಾಮದಿಂದ ನೋಡುವುದನ್ನು, ಅರಿಯುವುದನ್ನೂ ಹೇಳಿಕೊಡಬೇಕಾಗಿದೆ. ಜೊತೆಗೆ, ಇತಿಹಾಸ ಬರೆಯಬೇಕಾದರೆ ಇರುವ ಮೂಲಗಳ ಕುರಿತೂ ನಾವು ಹೇಳಿ ಕೊಡಬೇಕಾಗುತ್ತದೆ. ಆಗ ವಿದ್ಯಾರ್ಥಿಗೆ ಕುತೂಹಲವೂ ಮೂಡುತ್ತದೆ, ಜ್ಞಾನವೂ ಹೆಚ್ಚುತ್ತದೆ ಎಂದರು.

‘ಶಿಕ್ಷಣ ಪದ್ಧತಿಯೂ ಬದಲಾಗಬೇಕಿದೆ. ಪರೀಕ್ಷೆಗೆ ಉತ್ತರ ಬರೆಯುವಷ್ಟೇ ಮಾಹಿತಿಯನ್ನು ಮಕ್ಕಳಿಗೆ ನೀಡುತ್ತಿದ್ದೇವೆ. ಪಿಯುಸಿ ಪರೀಕ್ಷೆಯಲ್ಲಿ ಒಬ್ಬಾತ ಒಂದು ವಿಷಯದಲ್ಲಿ 80 ಅಂಕ ಪಡೆದಿದ್ದಾನೆ ಎಂದಾದರೆ, ಒಂದೆರಡು ತಿಂಗಳು ಬಿಟ್ಟು ಅದೇ ಪ್ರಶ್ನೆಪತ್ರಿಕೆಯನ್ನು ಆತನಿಗೇ ಮತ್ತೆ ಉತ್ತರ ಬರೆಯಲು ಹೇಳಿದರೆ ಆತ 40 ಅಂಕ ಪಡೆಯಬಹುದು. ಇಂಥ ಪ್ರಯೋಗವನ್ನೂ ಮಾಡಿದ್ದೇವೆ’ ಎಂದರು.

***

ಪರೀಕ್ಷಾ ಭಯಕ್ಕೆ ‘ದಿಶಾ’ ಮದ್ದು

ಪರೀಕ್ಷೆ ಬಂದರೆ ಸಾಕು ಮಕ್ಕಳಲ್ಲಿ ಆತಂಕ. ಓದಿದ್ದು ನೆನಪು ಆಗತ್ತೋ ಇಲ್ಲವೊ ಹೀಗೆ ಏನೇನೋ ಮನಸ್ಸಿಗೆ ಬಂದು ಬಿಡುತ್ತದೆ. ಪರೀಕ್ಷಾ ಭಯದಿಂದ ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ವಿದ್ಯಾರ್ಥಿಗಳು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ಎಲ್ಲವನ್ನು ತಡೆಯಲು ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನೀಡುವ ‘ದಿಶಾ ಕಾರ್ಯಕ್ರಮ’ವನ್ನು ಎಲ್ಲ ಕಾಲೇಜುಗಳಿಗೂ ವಿಸ್ತರಿಸಲಾಗುವುದು ಎಂದು ಪಿ.ಸಿ.ಜಾಫರ್‌ ಹೇಳಿದರು.

ಪ್ರಾಯೋಗಿಕವಾಗಿ ರಾಜ್ಯದ 50 ಕಾಲೇಜುಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಈ ಸಮಾಲೋಚನೆಯಲ್ಲಿ ಪರೀಕ್ಷಾ ಆತಂಕ ಹಾಗೂ ಸಮಯದ ನಿರ್ವಹಣೆ ಹೇಗೆ, ಪರೀಕ್ಷಾ ಒತ್ತಡದಿಂದ ಹೊರಬರುವುದು ಹೇಗೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಬೇರೆ ಬೇರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಒಟ್ಟು 100 ಮಂದಿ ಪ್ರಾಂಶುಪಾಲರಿಗೆ ನಿಮ್ಹಾನ್ಸ್‌ ಈ ಬಗ್ಗೆ ತರಬೇತಿಯನ್ನೂ ನೀಡುತ್ತಿದೆ. ದಿಶಾ ಕಾರ್ಯಕ್ರಮವನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

**

ಅಂಕಿ–ಅಂಶ

6,75,388 - ವಿದ್ಯಾರ್ಥಿಗಳು

1,013 - ಪರೀಕ್ಷಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT