ಸಂಪೂರ್ಣ ರಾಜಕೀಯ ನಿವೃತ್ತಿ ಇಲ್ಲ: ದೇವೇಗೌಡ

7

ಸಂಪೂರ್ಣ ರಾಜಕೀಯ ನಿವೃತ್ತಿ ಇಲ್ಲ: ದೇವೇಗೌಡ

Published:
Updated:

ನವದೆಹಲಿ: ರಾಜ್ಯದ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಲು ಬಿಡುವುದಿಲ್ಲ ಎಂದು ಸೋಮವಾರ ಲೋಕಸಭೆಯಲ್ಲಿ ಸಾರಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜಕಾರಣದಿಂದ ಸಂಪೂರ್ಣ ನಿವೃತ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

‘ನನಗೆ ವಯಸ್ಸಾಗಿದೆ, ರಾಜಕಾರಣದಿಂದ ನಿವೃತ್ತನಾಗಲಿದ್ದೇನೆ ಎಂಬ ಭಾವನೆ ಹಬ್ಬಿದೆ. ನಾನು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ ಖುದ್ದು ಸ್ಪರ್ಧಿಸುವುದಿಲ್ಲ. ಆದರೆ ರಾಜ್ಯ ಸರ್ಕಾರ ಉಳಿಸಿಕೊಳ್ಳುವ ಕುರಿತು ಕಿರಿಯ ಪೀಳಿಗೆಗೆ ಮಾರ್ಗದರ್ಶನ ಮಾಡಲಿದ್ದೇನೆ’ ಎಂದು ಅವರು ಬಜೆಟ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಹೇಳಿದರು.

‘ರಾಜ್ಯದ ಮೈತ್ರಿ ಸರ್ಕಾರದ ಮೇಲೆ ಯಾಕೆ ಅನಗತ್ಯವಾಗಿ ಕೆಸರು ಎರಚುತ್ತೀರಿ. ಮೊನ್ನೆ ನಡೆದಿರುವ ಪ್ರಕರಣವನ್ನು (ಯಡಿಯೂರಪ್ಪ ಅವರು ಜೆಡಿಎಸ್‌ ಶಾಸಕರಿಗೆ ನೀಡಿದರೆನ್ನಲಾದ ಆಮಿಷ) ದೊಡ್ಡದು ಮಾಡಲು ನನಗೆ ಇಷ್ಟವಿಲ್ಲ. ಈ ಹಿಂದೆ ನನ್ನ ಅರಿವಿಗೆ ಬಾರದೆ ನನ್ನ ಮಗ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ. ಎರಡೇ ತಿಂಗಳಲ್ಲಿ ಬಳ್ಳಾರಿಯ ಗಣಿ ಮಾಫಿಯಾವನ್ನು ಸದೆ ಬಡಿದ’ ಎಂದರು.

‘ಆದರೆ ಅರಣ್ಯ ಖಾತೆಯ ಮೂಲಕ ಅದೇ ಎರಡು ತಿಂಗಳಲ್ಲಿ ₹150 ಕೋಟಿ ಸಂಗ್ರಹಿಸಿದ ಎಂದು ಆಪಾದನೆ ಹೊರಿಸಲಾಯಿತು. ನನ್ನ ಮಗ ಬಹಳ ನೋವು ಅನುಭವಿಸಿದ. ನಾನೂ ನಾಲ್ಕು ತಿಂಗಳು ಹಾಸಿಗೆ ಹಿಡಿದೆ. ಈಗ ರಾಜ್ಯ ಸರ್ಕಾರದ ವಿರುದ್ಧ ನಿತ್ಯ ದಾಳಿ ನಡೆದಿದೆ. ಏನೇ ಬಂದರೂ, ಈ ಸರ್ಕಾರ ಬೀಳಿಸಲು ಬಿಡುವುದಿಲ್ಲ ಎಂದು ಈ ಸದನದಲ್ಲಿ ನಿಂತು ಭರವಸೆ ನೀಡುತ್ತಿದ್ದೇನೆ’ ಎಂದರು.

‘ರಾಜ್ಯದಲ್ಲಿ ರೈತರ ₹ 44 ಸಾವಿರ ಕೋಟಿಯಷ್ಟು ಸಾಲ ಮನ್ನಾ ಮಾಡುವ ಉತ್ತಮ ಕೆಲಸ ನಡೆದಿದೆ. ಈ ಕುರಿತು ಪ್ರಧಾನಿ ಸಂದೇಹ ವ್ಯಕ್ತಪಡಿಸಿದ್ದಾರೆ. ಅವರು ಮುಂದಿನ ಸಲ ಕರ್ನಾಟಕಕ್ಕೆ ಭೇಟಿ ನೀಡುವ ಹೊತ್ತಿಗೆ ಈ ಸಾಲಮನ್ನಾ ಪ್ರಗತಿ ಕುರಿತ ಸಂಪೂರ್ಣ ಅಂಕಿ-ಅಂಶಗಳನ್ನು ಅವರ ಮುಂದೆ ಇರಿಸಲಿದ್ದೇನೆ' ಎಂದು ಗೌಡರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !