ಬುಧವಾರ, ಡಿಸೆಂಬರ್ 2, 2020
20 °C
ರಾಜ್ಯದ ತಕರಾರು ಲೆಕ್ಕಿಸದ ಕೇಂದ್ರ ಸರ್ಕಾರ

ಕಾವೇರಿ ಸಮಿತಿ ರಚನೆ: ರಾಜ್ಯದ ಸದಸ್ಯರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ: ‌‌‌ರಾಜ್ಯದ ಆತಂಕಗಳು ಮತ್ತು ಪ್ರತಿಭಟನೆಯನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ.

ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ಹೆಸರನ್ನು ಈವರೆಗೆ ಕಳುಹಿಸಿಲ್ಲ ಎಂಬ ಷರಾದೊಂದಿಗೆ ಎಂಟು ಮಂದಿ ಸದಸ್ಯರ ಸಮಿತಿ ರಚನೆಯ ಆದೇಶವನ್ನು ಜಲಸಂಪನ್ಮೂಲ ಸಚಿವಾಲಯ ಶುಕ್ರವಾರ ರಾತ್ರಿ ಪ್ರಕಟಿಸಿದೆ. ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ ನವೀನ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. 

ಕೇರಳ, ತಮಿಳುನಾಡು, ಪುದುಚೆರಿಯ ನೀರಾವರಿ ಮುಖ್ಯ ಎಂಜಿನಿಯರ್‌ಗಳು, ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಎ.ಮಹಾಪಾತ್ರ, ಕೇಂದ್ರೀಯ ಜಲ ಆಯೋಗದ ಕೊಯಮತ್ತೂರು ಸಿ.ಅಂಡ್ ಎಸ್.ಆರ್.ಓ. ಮುಖ್ಯ ಎಂಜಿನಿಯರ್ ಎನ್.ಎಂ.ಕೃಷ್ಣನುಣ್ಣಿ, ಕೇಂದ್ರ ಸರ್ಕಾರದ ತೋಟಗಾರಿಕೆ ಆಯುಕ್ತರು ಹಾಗೂ ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ (ವೈಬಿಓ) ಎ.ಎಸ್.ಗೋಯಲ್ ನಿಯಂತ್ರಣ ಸಮಿತಿಯ ಸದಸ್ಯರಾಗಿದ್ದಾರೆ.

ಇದರ ಪರಿಣಾಮವಾಗಿ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯ ಸಭೆಗಳು ಕರ್ನಾಟಕದ ಪ್ರತಿನಿಧಿಯ ಅನುಪಸ್ಥಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಏರ್ಪಟ್ಟಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಮಸೂದ್ ಹುಸೇನ್ ಅಧ್ಯಕ್ಷತೆಯಲ್ಲಿ ಈ ಹಿಂದೆಯೇ ರಚಿಸಲಾಗಿತ್ತು. ಈಗ ರಚಿಸಲಾಗಿರುವ ನೀರು ನಿಯಂತ್ರಣ ಸಮಿತಿಯು ಪ್ರಾಧಿಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.

ಸುಪ್ರೀಂ ಕೋರ್ಟ್‌ನಿಂದ ಪರಿಷ್ಕೃತವಾಗಿರುವ ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಜಾರಿಗೆ ತರಲು ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ರಚನೆಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಇದೇ ಜೂನ್ ಒಂದರಂದು ಹೊರಡಿಸಿತ್ತು.

ರಾಜ್ಯದ ಹಿತಕ್ಕೆ ಮಾರಕವಾಗುವ ಅಂಶಗಳನ್ನು ಪ್ರಾಧಿಕಾರ ರಚನೆಯ ಅಧಿಸೂಚನೆಯಿಂದ ಕೈಬಿಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಆಗ್ರಹಪಡಿಸಿದೆ. ತನಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ತನಕ ಪ್ರಾಧಿಕಾರ ಮತ್ತು ಸಮಿತಿಯ ಸದಸ್ಯ ಸ್ಥಾನಗಳಿಗೆ ತನ್ನ ಪ್ರತಿನಿಧಿಗಳ ಹೆಸರುಗಳನ್ನು ಕಳಿಸಿಕೊಡುವುದಿಲ್ಲ ಎಂಬುದು ರಾಜ್ಯ ಸರ್ಕಾರದ ನಿಲುವಾಗಿತ್ತು. ರಾಜ್ಯದ ತಕರಾರುಗಳನ್ನು ಇತ್ಯರ್ಥಪಡಿಸಬೇಕೆಂಬ ಷರತ್ತಿಗೆ ಒಳಪಟ್ಟು ಹೆಸರುಗಳನ್ನು ಕಳಿಸಿಕೊಡುವುದಾಗಿ ಇತ್ತೀಚೆಗೆ ಇಲ್ಲಿ ಕೇಂದ್ರ ಜಲಸಂಪನ್ಮೂಲ ಮಂತ್ರಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರಿದ್ದರು.

ರಾಜ್ಯದ ಆತಂಕಗಳ ಕುರಿತ ಚರ್ಚೆಗೆ ಸದ್ಯದಲ್ಲೇ ಸಭೆ ಕರೆಯುವುದಾಗಿ ಕೇಂದ್ರ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದರು.

ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ದೈನಂದಿನ ನೀರಿನ ಮಟ್ಟ, ಒಳಹರಿವು, ಹೊರಹರಿವು, ಆಯಾ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣ, ಪ್ರಾಧಿಕಾರ ನೀಡಿದ ಆದೇಶಗಳ ಪಾಲನೆ ಆಗಿದೆಯೇ ಇಲ್ಲವೇ ಎಂಬುದೇ ಮುಂತಾದ ದೈನಂದಿನ ಕೆಲಸ ಕಾರ್ಯಗಳನ್ನು ನಿಯಂತ್ರಣ ಸಮಿತಿ ಮಾಡುತ್ತದೆ. ಹತ್ತು ದಿನಗಳಿಗೊಮ್ಮೆ ಸಭೆ ಸೇರಿ ವರದಿ ಶಿಫಾರಸುಗಳನ್ನು ಪ್ರಾಧಿಕಾರಕ್ಕೆ ಕಳಿಸಿಕೊಡುತ್ತದೆ.

ಪ್ರತಿ ಹತ್ತು ದಿನಗಳಿಗೊಮ್ಮೆ ನಡೆಯುವ ನಿಯಂತ್ರಣ ಸಮಿತಿ ಸಭೆಯ ಕೋರಂ ಸಂಖ್ಯೆ ಆರು. ಯಾವುದಾದರೂ ರಾಜ್ಯದ ಪ್ರತಿನಿಧಿ ನಿರ್ದಿಷ್ಟ ಸಭೆಗೆ ಬಾರದೆ ಹೋದಲ್ಲಿ, ಇನ್ನೊಂದು ಸಭೆ ಕರೆಯುವ ಕುರಿತು ಪರಿಗಣಿಸಲಾಗುವುದು. ಆದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಇದ್ದಲ್ಲಿ, ಯಾವುದೇ ರಾಜ್ಯದ ಪ್ರತಿನಿಧಿ ಗೈರು ಹಾಜರಾಗಿದ್ದರೂ ಲೆಕ್ಕಿಸದೆ ಬಹುಮತದ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ಇಬ್ಬರೂ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ.

 ಕಾವೇರಿ ಪ್ರಾಧಿಕಾರ ಅಥವಾ ನಿಯಂತ್ರಣ ಸಮಿತಿಯ ಸಭೆ ಕರೆಯುವಂತಹ ಯಾವುದೇ ತುರ್ತು ಪರಿಸ್ಥಿತಿ ತಮಿಳುನಾಡಿನಲ್ಲಿ ಇಲ್ಲ. ಹೀಗಾಗಿ ಪ್ರಾಧಿಕಾರದ ಕರ್ತವ್ಯಗಳು ಮತ್ತು ಕಾರ್ಯಗಳ ಕುರಿತ ಒಕ್ಕಣೆಯನ್ನು ಸದ್ಯಕ್ಕೆ ತಡೆಹಿಡಿಯಬೇಕು. ರಾಜ್ಯ ಸರ್ಕಾರ ಎತ್ತಿರುವ ಈ ವಿಷಯಗಳು ಇತ್ಯರ್ಥವಾದ ನಂತರವೇ ನ್ಯಾಯಮಂಡಳಿಯ ವರದಿ- ಸುಪ್ರೀಂ ಕೋರ್ಟ್ ತೀರ್ಪಿನ ಜಾರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿತ್ತು.

 ರಾಜ್ಯ ಎತ್ತಿರುವ ತಕರಾರುಗಳು

'ಕಾವೇರಿ ಅಚ್ಚುಕಟ್ಟಿನ ರೈತರು ಪ್ರತಿ ವರ್ಷ ಇಂತಹುದೇ ಬೆಳೆಯನ್ನು ಬೆಳೆಯುವಂತೆ ಪ್ರಾಧಿಕಾರ ವಿಧಿಸುವುದು ಅತ್ಯಂತ ಅವಾಸ್ತವಿಕ, ಅಸಂಬದ್ಧ ಅಂಶ. ರೈತರ ಹೊಲ ಗದ್ದೆಗಳಿಗೆ ಪ್ರತಿ ಹತ್ತು ದಿನಗಳಿಗೊಮ್ಮೆ ಮಾತ್ರವೇ ನೀರು ಬಿಡಬೇಕು ಎಂಬ ಅಂಶದಲ್ಲಿ ಅರ್ಥವಿಲ್ಲ. ನಾವು ನದಿ ಕಣಿವೆಯ ಮೇಲ್ಭಾಗದ ರಾಜ್ಯ. ನಮ್ಮ ಪಾಲಿನ ನೀರನ್ನು ನಾವು ಹೇಗೆ ಬೇಕಾದರೂ ಬಳಸುವ ಸ್ವಾತಂತ್ರ್ಯ ನೀಡಬೇಕು. ಹತ್ತು ದಿನಗಳಿಗೊಮ್ಮೆ ನಮ್ಮ ಜಲಾಶಯಗಳಲ್ಲಿ ನೀರಿನ ಲಭ್ಯತೆ ಅಳತೆ ಮಾಡುವ ಅಂಶವೂ ಅರ್ಥವಿಲ್ಲದ್ದು. ಇಂತಹ ಅವೈಜ್ಞಾನಿಕ ಷರತ್ತುಗಳನ್ನು ಹಾಕಿದರೆ ಒಕ್ಕೂಟ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬಂದೀತು'

'ನೂರಾರು ವರ್ಷಗಳಿಂದ ರಾಜ್ಯದ ರೈತರು ಅವರದೇ ಆದ ಬೆಳೆ ಪದ್ಧತಿ ಅನುಸರಿಸಿಕೊಂಡು ಬಂದಿದ್ದಾರೆ. ಇಂತಹುದೇ ಬೆಳೆ ಬೆಳೆಯಬೇಕೆಂದು ನಿರ್ಬಂಧ ವಿಧಿಸುವ ಯಾವುದೇ ಕ್ರಮಕ್ಕೆ ರೈತರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವುದು ನಿಶ್ಚಿತ. ರೈತರು ನೀರಿನ ಬೆಲೆ ಅರಿತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ದೀರ್ಘ ಕಾಲ ಹಿಡಿಯಲಿದೆ. ಇಂತಹ ಬದಲಾವಣೆಯನ್ನು ರಾತ್ರೋ ರಾತ್ರಿ ಕಾಣಲು ಸಾಧ್ಯವಿಲ್ಲ' 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು