ರಾಜ್ಯದ 5,272 ಗ್ರಾಮಗಳಲ್ಲಿ ಶಾಲೆ ಇಲ್ಲ

7
ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಉಪಗ್ರಹ ಆಧಾರಿತ ಮ್ಯಾಪಿಂಗ್‌ನಲ್ಲಿ ಬೆಳಕಿಗೆ ಬಂದ ಮಾಹಿತಿ

ರಾಜ್ಯದ 5,272 ಗ್ರಾಮಗಳಲ್ಲಿ ಶಾಲೆ ಇಲ್ಲ

Published:
Updated:
Deccan Herald

ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆಯು ನಡೆಸಿದ ಉಪಗ್ರಹ ಆಧಾರಿತ ಮ್ಯಾಪಿಂಗ್‌ನಿಂದ 5,272 ಗ್ರಾಮಗಳಲ್ಲಿ ಶಾಲೆಗಳೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ಗ್ರಾಮಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿಯೂ ಪ್ರಾಥಮಿಕ ಶಾಲೆಗಳು ಇಲ್ಲದಿರುವ ಕಾರಣ ಅಲ್ಲಿನ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಪರಿಚಯಿಸಲು ಉತ್ಸುಕರಾಗಿದ್ದಾರೆ. ಆದರೆ, ಸಾವಿರಾರು ಊರುಗಳ ಮಕ್ಕಳು ಕನ್ನಡ ಮಾಧ್ಯಮ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಅಲೆಯುತ್ತಿದ್ದಾರೆ. 

ಗ್ರಾಮಾಂತರ ಭಾಗದ ಜನ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವತ್ತಲೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಇಷ್ಟೊಂದು ಗ್ರಾಮಗಳಲ್ಲಿ ಶಾಲೆಗಳೇ ಇಲ್ಲದಿರುವುದು ಅಲ್ಲಿನ ಮಕ್ಕಳ ಶಿಕ್ಷಣದ ಹಕ್ಕನ್ನೇ ಕಸಿದುಕೊಂಡಂತಾಗಿದೆ ಎಂದು ಶಿಕ್ಷಣತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯವಾಗಿ ಶಾಲಾ ಸೌಲಭ್ಯವಿದ್ದರೆ ಮಾತ್ರ ಗ್ರಾಮೀಣ ಭಾಗದ ಜನ ಮಕ್ಕಳನ್ನು ಕಳುಹಿಸಲು ಮನಸ್ಸು ಮಾಡುತ್ತಾರೆ. ಇಲ್ಲದಿದ್ದರೆ ಅಲ್ಲಿನ ಕಂದಮ್ಮಗಳ ಶಿಕ್ಷಣದ ಕನಸು ಮುದುಡಿಹೋಗುತ್ತದೆ. ಸರ್ಕಾರ ಯಾವುದೇ ಸಬೂಬು ಹೇಳದೆ ಮೊದಲು ಶಾಲೆಗಳ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಶಾಲೆ ತೆರೆಯಲು ಅವಶ್ಯವಿರುವಷ್ಟು ಜನಸಂಖ್ಯೆಯ ಕೊರತೆಯಿದೆ. ಉಳಿದ ಕಡೆಗಳಲ್ಲಿ ಶಾಲೆಗಳು ಇಲ್ಲದಿರುವುದಕ್ಕೆ ಬೇರೆ, ಬೇರೆ ಕಾರಣಗಳಿವೆ. ಕಲಬುರ್ಗಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಗ್ರಾಮಗಳಲ್ಲಿ ಶಾಲೆಗಳು ಇಲ್ಲದಿರುವುದಕ್ಕೆ ಆ ಜಿಲ್ಲೆ ಲಾಗಾಯ್ತಿನಿಂದ ಹಿಂದುಳಿದಿರುವುದೇ ಕಾರಣ ಎಂದು ಅಧಿಕಾರಿಯೊಬ್ಬರು ಕಾರಣ ಕೊಡುತ್ತಾರೆ.

‘ಗೋವಿಂದ ಸಮಿತಿಯ ವರದಿ ಅನ್ವಯ 2011ರಲ್ಲಿ 3,000ಕ್ಕೂ ಹೆಚ್ಚು ಶಾಲೆಗಳನ್ನು ಹತ್ತಿರದ ಶಾಲೆಗಳಲ್ಲಿ ವಿಲೀನ ಮಾಡಲಾಯಿತು. ಹಾಗಾಗಿಯೇ ಇಂತಹ ಪರಿಸ್ಥಿತಿ ತಲೆದೋರಿದೆ. ಆ ಅವೈಜ್ಞಾನಿಕ ವಿಲೀನದಿಂದ ಗ್ರಾಮಾಂತರ ಪ್ರದೇಶದ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಶಿಕ್ಷಣತಜ್ಞ ಜಿ.ನಾಗಸಿಂಹ ರಾವ್‌ ವಿಶ್ಲೇಷಿಸುತ್ತಾರೆ.

‘ಆಗ ಸರ್ಕಾರ ಮುಂದಾಲೋಚನೆ ಇಲ್ಲದೆ ಶಾಲೆಗಳನ್ನು ವಿಲೀನ ಮಾಡಿತು. ಇದರಿಂದ ಖಾಸಗಿ ಶಾಲೆಗಳಿಗೆ ತುಂಬಾ ಅನುಕೂಲವಾಯಿತು’ ಎಂದು ಅವರು ವಿವರಿಸುತ್ತಾರೆ. 

ಈಗಿನ ಲೆಕ್ಕಾಚಾರ: ಈ ಊರುಗಳಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಶಿಕ್ಷಣ ಇಲಾಖೆ ಈಗ ಲೆಕ್ಕಾಚಾರ ಹಾಕುತ್ತಿದೆ. ಈ ಹಳ್ಳಿಗಳ ಶಾಲಾ ವಯಸ್ಸಿನ ವಿದ್ಯಾರ್ಥಿಗಳು ಹತ್ತಿರದ ಗ್ರಾಮಗಳ ಶಾಲೆಗಳಿಗೆ ವ್ಯಾಸಂಗಕ್ಕಾಗಿ ಹೋಗಿಬರಲು ಸರ್ಕಾರದ ವತಿಯಿಂದ ಸಾರಿಗೆ ಸೌಲಭ್ಯ ಕಲ್ಪಿಸಲು ಇಲಾಖೆ ಯೋಜಿಸುತ್ತಿದೆ.

ಶಾಲೆಗಳು ಇಲ್ಲದ ಪ್ರತಿ ಗ್ರಾಮದ ಹೆಸರು ಮತ್ತು ಅಲ್ಲಿನ ಶಾಲಾ ವಿದ್ಯಾರ್ಥಿಗಳ ತರಗತಿವಾರು ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಂಗ್ರಹಿಸಲು ಆಯುಕ್ತರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಸಾರಿಗೆ ಸೌಲಭ್ಯ ಒದಗಿಸಲು ಇರುವ ಅವಕಾಶಗಳನ್ನು ಪರಿಶೀಲಿಸಿ, ಕ್ರಿಯಾಯೋಜನೆ (ಭೌತಿಕ ಮತ್ತು ಆರ್ಥಿಕ) ಸಿದ್ಧಪಡಿಸುವಂತೆ ಅವರು ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !