ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಮ್ಮಕ್ಕಳಿಗಾಗಿ ಕಣ್ಣೀರು ಹಾಕಿಲ್ಲ: ಎಚ್.ಡಿ.ದೇವೇಗೌಡ

ಮಂಡ್ಯಕ್ಕೆ ನಿಖಿಲ್: ಪ್ರಚಾರಕ್ಕೆ ಚಾಲನೆ
Last Updated 14 ಮಾರ್ಚ್ 2019, 20:20 IST
ಅಕ್ಷರ ಗಾತ್ರ

ಮಂಡ್ಯ: ‘ನಾನು ಕಣ್ಣೀರು ಹಾಕಿರುವುದಕ್ಕೆ ಬಿಜೆಪಿ ಮುಖಂಡರು ವ್ಯಂಗ್ಯ ಮಾಡಿದ್ದಾರೆ. ನನ್ನ ಮೊಮ್ಮಗನಿಗಾಗಿ ಅಳಲಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಲ್ಲಿ ಗುರುವಾರ ಸ್ಪಷ್ಟಪಡಿಸಿದರು.

ಜೆಡಿಎಸ್‌ ಸಭೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಮಾತನಾಡಿದರು.

‘60 ವರ್ಷಗಳ ಹಿಂದೆ ಕಂಡಿದ್ದ ಹಳ್ಳಿಯನ್ನು ಮತ್ತೊಮ್ಮೆ ನೋಡಿದಾಗ ಸಹಜವಾಗಿ ಭಾವುಕನಾದೆ. ಗೆಳೆಯರ ಮಕ್ಕಳು, ಮೊಮ್ಮಕ್ಕಳನ್ನು ನೋಡಿದಾಗ ಪ್ರೀತಿ ಉಕ್ಕಿ ಹರಿಯಿತು. ಆದರೆ ಇಂದು ಅಳುವುದಿಲ್ಲ. ನಾನು ಬಡವನ ಮಗ, ನನ್ನ ತಂದೆಯ ಎರಡನೇ ಹೆಂಡತಿ ಮೊದಲ ಮಗ. ಈಶ್ವರ ದೇವಾಲಯದಲ್ಲಿ ತಂದೆ ಪೂಜೆ ಸಲ್ಲಿಸುತ್ತಿದ್ದರು. ಅವರ ಪೂಜಾಫಲದಿಂದ ಇಲ್ಲಿಯವರೆಗೆ ಬಂದಿದ್ದೇನೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಬೇಡ, ಮಲ್ಲಿಕಾರ್ಜುನ ಖರ್ಗೆ ಆಗಲಿ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್‌ ಹೈಕಮಾಂಡ್‌ ಪಟ್ಟು ಹಿಡಿಯಿತು. ಅವರ ಆರೋಗ್ಯದ ಬಗ್ಗೆ ಭಯ ಇತ್ತು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒತ್ತಾಯದಿಂದಾಗಿ ಒಪ್ಪಿಗೆ ನೀಡಬೇಕಾಯಿತು’ ಎಂದರು.

ಲಕ್ಷ್ಮಿಗೆ ಮತ್ತೆ ಕೆಲಸ
‘ಲಕ್ಷ್ಮಿ ಅಶ್ವಿನ್‌ಗೌಡ ಅವರಿಗೆ ಅನ್ಯಾಯ ಮಾಡಿಲ್ಲ. ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲು ಮುಂದಾಗಿದ್ದೆ, ಆದರೆ ಅವರೇ ಒಪ್ಪಲಿಲ್ಲ. ಒಪ್ಪಿದ್ದರೆ ಈಗ ಎಂಎಲ್‌ಸಿ ಆಗಿರುತ್ತಿದ್ದರು. ರಾಜೀನಾಮೆ ನೀಡಿರುವ ಐಆರ್‌ಎಸ್‌ ಹುದ್ದೆಯನ್ನು ಮತ್ತೆ ಕೊಡಿಸಲು ಕೇಂದ್ರ ಸರ್ಕಾರದ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಗೋಬ್ಯಾಕ್’ಗೆ ಹೆದರಲ್ಲ
‘ನಿಖಿಲ್‌ ವಿರುದ್ಧ ಗೋಬ್ಯಾಕ್‌ ಚಳವಳಿಗೆ ಹೆದರಿ ಓಡಿಹೋಗುವುದಿಲ್ಲ. ನನ್ನ ಮಗನನ್ನು ಮಂಡ್ಯ ಜನರ ಮಡಿಲಿಗೆ ಹಾಕಿದ್ದೇನೆ. ವಿಷವನ್ನಾದರೂ ಕೊಡಿ, ಅಮೃತವನ್ನಾದರೂ ಕೊಡಿ. ಅಮೃತ ಕೊಟ್ಟರೆ ಆತ ನಿಮ್ಮ ಗುಲಾಮನಾಗಿ ಕೆಲಸ ಮಾಡುತ್ತಾನೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಸುಮಲತಾ ವಿರುದ್ಧ ಆಕ್ರೋಶ
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸುಮಲತಾ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ‘ಅಂಬರೀಷ್‌ ಮೃತಪಟ್ಟಾಗ ದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯುವ ಬಗ್ಗೆ ಹೇಳಿದೆ. ಆಗ ಮಂಡ್ಯಕ್ಕೆ ಕೊಂಡೊಯ್ಯುವುದು ಬೇಡ ಎಂದವರು ಇಂದು ಈ ಮಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಂಬರೀಷ್‌ ನನ್ನ ಸ್ವಂತ ಅಣ್ಣನ ಹಾಗೆ. ಅಂದು ಮುಖ್ಯಮಂತ್ರಿಯಂತೆ ನಡೆದುಕೊಳ್ಳಲಿಲ್ಲ, ತಮ್ಮನ ಕರ್ತವ್ಯ ಮಾಡಿದೆ. ಈ ಬಗ್ಗೆ ಪ್ರಶ್ನೆ ಮಾಡುವವರು ಅಂಬರೀಷ್‌ ಆತ್ಮವನ್ನು ಕೇಳಲಿ. ಸ್ವಾಭಿಮಾನದ ಬಗ್ಗೆ ಪರದೆ ಮೇಲೆ, ಸಾಮಾಜಿಕ ಜಾಲತಾಣದಲ್ಲಿ ಹೇಳಿದರೆ ಆಗದು. ಅದು ಹೃದಯದಲ್ಲಿ ಇರಬೇಕು’ ಎಂದರು.

**

ರಾಜ್ಯದಲ್ಲಿನ ಮೈತ್ರಿ ಸರ್ಕಾರದಲ್ಲಿ ಬಡಿದಾಟ, ಕಚ್ಚಾಟ, ಕಿತ್ತಾಟ ಸಾಮಾನ್ಯವಾಗಿದೆ. ದೇವೇಗೌಡರ ಕಣ್ಣೀರು ಜನರನ್ನು ಮರಳು ಮಾಡುವ ವ್ಯವಸ್ಥಿತ ಷಡ್ಯಂತ್ರ.
-ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

**

ದೇವೇಗೌಡ ಅವರು ಅಧಿಕಾರಕ್ಕಾಗಿ ಅಥವಾ ಯಾರಿಗೂ ಹೆದರಿ ಕಣ್ಣೀರು ಹಾಕಲಿಲ್ಲ. ಮೂಡಲಹಿಪ್ಪೆ ಗ್ರಾಮದ ಹಿರಿಯ ಗೆಳೆಯರನ್ನು ನೆನೆದು ಕಣ್ಣೀರು ಹಾಕಿದರು.
-ಎಚ್‌.ಡಿ. ರೇವಣ್ಣ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT