ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪ್ಪತ್ತು ದಿನವಾದರೂ ಬಾರದ ನೀರು; ಜನರ ಸಮಾಧಾನಪಡಿಸುವ ಸಾಹಸ ಮಾಡುತ್ತಿದೆ ಪಾಲಿಕೆ

Last Updated 27 ಜುಲೈ 2019, 19:45 IST
ಅಕ್ಷರ ಗಾತ್ರ

ಬಳ್ಳಾರಿ: ಆಗಸ್ಟ್‌ 1ರಿಂದ ತುಂಗಭದ್ರಾ ಜಲಾಶಯದ ನೀರನ್ನು ಕುಡಿಯುವ ಸಲುವಾಗಿ ಮಾತ್ರ ಕಾಲುವೆಗಳಿಗೆ ಹರಿಸುವ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿದೆ. ಈ ನೀರಿನ ನಿರೀಕ್ಷೆಯಲ್ಲೇ ಪಾಲಿಕೆ, ಈಗ ಇರುವ ಕೊಂಚ ನೀರನ್ನೇ ಪೂರೈಸಿ ಜನರನ್ನು ಸಮಾಧಾನಪಡಿಸುವ ಸಾಹಸ ಮಾಡುತ್ತಿದೆ.

ನಗರದ ಬಹುತೇಕ ವಾರ್ಡ್‌ಗಳಲ್ಲಿ 15 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು 20 ದಿನಗಳಾದರೂ ಬಾರದೇ ಇರುವುದರಿಂದ ಜನ ನೀರಿಗಾಗಿ ಪರದಾಡುತ್ತಿದ್ದಾರೆ.

ಕೆಲವು ಗಂಟೆ ಮಾತ್ರ
15 ದಿನಕ್ಕೊಮ್ಮೆ ಬಂದರೂ, ಹತ್ತಾರು ಗಂಟೆಗಳ ಕಾಲ ಪೂರೈಕೆಯಾಗುತ್ತಿದ್ದುದರಿಂದ, ಜನ ತೊಟ್ಟಿಗಳು ಮತ್ತು ಡ್ರಮ್‌ಗಳಲ್ಲಿ ನೀರನ್ನು ಶೇಖರಿಸಿ ಇಟ್ಟುಕೊಳ್ಳುತ್ತಿದ್ದರು. ನೀರಿನ ಕೊರತೆಯ ಪರಿಣಾಮ ಕೆಲವೇ ಗಂಟೆಗಳ ಕಾಲ ನೀರು ಪೂರೈಕೆ ಆಗುತ್ತಿರುವುದರ ಪರಿಣಾಮ, ತೊಟ್ಟಿಗಳೂ ತುಂಬುತ್ತಿಲ್ಲ. ಡ್ರಮ್‌ಗಳು ಖಾಲಿಯೇ ಉಳಿದಿವೆ. ಇಂಥ ಸನ್ನಿವೇಶದಲ್ಲಿ ನೀರನ್ನು ಅಮೃತದಂತೆ ಬಳಸಬೇಕಾದ ಅನಿವಾರ್ಯವೂ ಸೃಷ್ಟಿಯಾಗಿದೆ.

ಕೊಳೆಗೇರಿ ಪ್ರದೇಶಗಳು ಸೇರಿದಂತೆ ಹಲವೆಡೆ ಟ್ಯಾಂಕರ್‌ ನೀರು ಪೂರೈಸುತ್ತಿರುವ ಪಾಲಿಕೆಯು, ಬೇಡಿಕೆಯನ್ನು ಪೂರೈಸಲು ಆಗದ ಪರಿಸ್ಥಿತಿಯಲ್ಲಿದೆ. ಸಾರ್ವಜನಿಕರಿಗೆ ಟ್ಯಾಂಕರ್‌ ನೀರು ಪೂರೈಸಿದರೆ, ನಿಯಮಿತವಾಗಿ ಜನರಿಗೆ ಪೈಪ್‌ಲೈನ್‌ ಮೂಲಕ ಪೂರೈಸಲು ಆಗದೇ ಇರುವುದರಿಂದ, ಟ್ಯಾಂಕರ್‌ ನೀರನ್ನು ಸರಬರಾಜು ಕೇಂದ್ರಗಳಿಗೆ ಪೂರೈಸಿಕೊಂಡು ಅಲ್ಲಿಂದ ಪೈಪ್‌ಲೈನ್‌ ಮೂಲಕ ಪೂರೈಸುವ ಪ್ರಯತ್ನ ಆರಂಭವಾಗಿದೆ.

ಜನರ ಅಸಮಾಧಾನ
20ನೇ ವಾರ್ಡ್‌ಗೆ ಸೇರಿರುವ ಬಸವೇಶ್ವರ ನಗರ, ರೇಣುಕಾಚಾರ್ಯ ನಗರ, ಅಲ್ಲಂ ಬಡಾವಣೆ, ನೆಹರು ಕಾಲೊನಿ, ದಿವಾಕರಬಾಬು ಬಡಾವಣೆ, ಸದ್ಗುರು ಕಾಲೊನಿ, ವಾಜಪೇಯಿ ಬಡಾವಣೆ, ಹರಿಪ್ರಿಯ ನಗರ, ತಿರುಮಲ ನಗರದಲ್ಲಿ ಹಾಗೂ 19ನೇ ವಾರ್ಡ್‌ನ ಗಣೇಶ್‌ ಕಾಲೊನಿಯ ಕೆಲ ಪ್ರದೇಶಗಳಲ್ಲಿ ಇಪ್ಪತ್ತು ದಿನವಾದರೂ ನೀರು ಬಂದಿರಲಿಲ್ಲ.

ಈ ಸಮಸ್ಯೆಯನ್ನು ಪರಿಹರಿಸಲು ನಗರದ ಗಾಂಧೀನಗರದ ನೀರು ಸರಬರಾಜು ಕೇಂದ್ರಕ್ಕೆ ಶನಿವಾರ ಬಂದ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಖಾಜಾ ಮೊಯಿನುದ್ದೀನ್‌ ಅವರ ಬಳಿಕ ನಿವಾಸಿಗಳು ಅಸಮಾಧಾನ ತೋಡಿಕೊಂಡರು. ನಂತರ ಟ್ಯಾಂಕರ್‌ಗಳಲ್ಲಿ ಮತ್ತು ಪೈಪ್‌ಲೈನ್‌ ಮೂಲಕ ಹಲವು ಪ್ರದೇಶಗಳಿಗೆ ನೀರು ಪೂರೈಸಲಾಯಿತು.

ದುರಸ್ತಿಯಾಗದ ಪೈಪ್‌ಲೈನ್!
‘ಅಲ್ಲೀಪುರದಿಂದ 20ನೇ ವಾರ್ಡ್‌ಗೆ ನೀರು ಪೂರೈಸಲು ಅಳವಡಿಸಿರುವ ಪೈಪ್‌ಲೈನ್‌ ನೀರು ಬರುವ ಮುನ್ನವೇ ಕೆಟ್ಟಿದೆ. ಅದನ್ನು ದುರಸ್ತಿ ಮಾಡಬೇಕಾಗಿರುವುದರಿಂದ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲದಿದ್ದರೆ ನಾವು ರಾಜರಂತೆ ಇರುತ್ತಿದ್ದೆವು’ ಎಂದು 20ನೇ ವಾರ್ಡ್‌ನ ಪಾಲಿಕೆ ಮಾಜಿ ಸದಸ್ಯ ಮಲ್ಲನಗೌಡ ಅಭಿಪ್ರಾಯಪಟ್ಟರು.

‘ಮೋಕಾದಲ್ಲಿರುವ ಕೆರೆಗಳ ಮೂಲಕವೇ ನಮ್ಮ ವಾರ್ಡ್‌ನ ಪ್ರದೇಶಗಳಿಗೆ ನೀರು ಪೂರೈಕೆಯಾಗಬೇಕು. ಆದರೆ ಕೆರೆಗಳು ಒಣಗಿವೆ. ಹೀಗಾಗಿ ಅಲ್ಲೀಪುರ ಕೆರೆಯಿಂದ ಗಾಂಧೀನಗರ ಸರಬರಾಜು ಕೇಂದ್ರಕ್ಕೆ ನೀರು ಹರಿಸಿ ನಂತರವೇ ಪೂರೈಸಬೇಕು. ಇದನ್ನು ಕೆಲವು ದಿನ ಮುಂಚಿತವಾಗಿಯೇ ಮಾಡಿದ್ದರೆ ಜನಕ್ಕೆ ತೊಂದರೆ ತಪ್ಪುತ್ತಿತ್ತು’ ಎಂದರು.

‘ಕಾಲುವೆ ನೀರಿಗಾಗಿ ಕಾಯುತ್ತಿದ್ದೇವೆ’
ಪ್ರಸ್ತುತ ಸನ್ನಿವೇಶದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಖಾಜಾ ಮೊಯಿನುದ್ದೀನ್‌, ‘ಮೋಕಾ ಕೆರೆಗಳಿಗೆ ಕಾಲುವೆ ನೀರು ಬಂದರೆ ಮಾತ್ರ ನಗರದಲ್ಲಿ ನೀರಿನ ಅಭಾವ ತಗ್ಗುತ್ತದೆ. ಅಲ್ಲಿಯ ವರೆಗೂ ಅಲ್ಲೀಪುರ ಕೆರೆಯ ನೀರನ್ನಷ್ಟೇ ಒಂದು ಸಾಹಸದ ರೀತಿಯಲ್ಲಿ ವಿತರಣೆ ಮಾಡಬೇಕಾಗಿದೆ. ಪೂರೈಕೆಗೆ ಅಗತ್ಯವಿರುವಷ್ಟು ನೀರಿಲ್ಲದೆ ನಾವೂ ಅಸಹಾಯಕರಾಗಿದ್ದೇವೆ. ಜನ ಅದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಕೋರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT