ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಗ್ಗಜರ ನಾಮಪತ್ರ ಸಲ್ಲಿಕೆ ಭರಾಟೆ

ಒಂದೇ ದಿನ 148 ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶನ ನಡೆಸಿದ ಅಭ್ಯರ್ಥಿಗಳು
Last Updated 25 ಮಾರ್ಚ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಸೋಮವಾರ ಭರದಿಂದ ನಡೆದಿದ್ದು, ಘಟಾನುಘಟಿ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ನಡೆಸಿ, ಮತದಾರರನ್ನು ಸೆಳೆಯುವ ಯತ್ನ ಮಾಡಿದರು.

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮೊದಲ ಹಂತದ ನಾಮಪತ್ರದ ಗಡುವು ಕೊನೆಯಾಗಲಿದೆ. ಸೋಮವಾರ ಒಂದೇ ದಿನ 148 ನಾಮಪತ್ರಗಳು ಸಲ್ಲಿಕೆಯಾಗಿವೆ. ಇವೂ ಸೇರಿ ಒಟ್ಟಾರೆ ಇಲ್ಲಿಯವರೆಗೆ 231 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

ತುಮಕೂರನ್ನು ಆಯ್ಕೆ ಮಾಡಿಕೊಂಡಿರುವ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಭಾರೀ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲು ಅಣಿಯಾಗಿದ್ದರು. ಆದರೆ, ನಾಮಪತ್ರ ಸ್ವೀಕಾರದ ಅವಧಿ ಕೊನೆಗೊಳ್ಳುವ ಭೀತಿಯಿಂದ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಬಳಿಕ, ಮೆರವಣಿಗೆ ನಡೆಸಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಭಾಗಿಯಾಗಿದ್ದರು. ಚಾಮರಾಜನಗರ, ಮೈಸೂರು ಹಾಗೂ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಜತೆಗಿದ್ದ ಸಿದ್ದರಾಮಯ್ಯ, ತುಮಕೂರಿನಲ್ಲಿ ಕಾಣಿಸಿಕೊಳ್ಳಲಿಲ್ಲ.

ಟಿಕೆಟ್ ಕೈತಪ್ಪಿದ್ದರಿಂದ ಕೆಂಡವಾಗಿರುವ ಸಂಸದ ಎಸ್.ಪಿ. ಮುದ್ದಹನುಮೇಗೌಡ ತಮ್ಮ ಬೆಂಬಲಿಗರ ಜತೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಪಕ್ಷದ ನಾಯಕರಿಗೆ ಸಡ್ಡು ಹೊಡೆದರು.

ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಭರ್ಜರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಜತೆಗಿದ್ದರು.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸುವ ವೇಳೆ ಸೇರಿಸಿದ್ದ ಜನರಿಗಿಂತ ಹೆಚ್ಚಿನ ಜನರನ್ನು ಸೇರಿಸಬೇಕು ಎಂಬ ಹಟಕ್ಕೆ ಬಿದ್ದಿದ್ದ ನಾಯಕರು, ತಮ್ಮ ಬಲ ಪ್ರದರ್ಶನ ಮಾಡಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ನಿಖಿಲ್‌ಗೆ ಜತೆಯಾದರು.

ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ ಸಿಂಹ, ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಧ್ರುವನಾರಾಯಣ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನ ಎಂ. ವೀರಪ್ಪ ಮೊಯಿಲಿ ಹಾಗೂ ಬಿಜೆಪಿಯ ಬಿ.ಎನ್. ಬಚ್ಚೇಗೌಡ ನಾಮಪತ್ರ ಸಲ್ಲಿಸಿದ ಪ್ರಮುಖರು. ಎಲ್ಲ ಕಡೆಯೂ ಭಾರಿ ಜನರನ್ನು ಸೇರಿಸಿದ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯವನ್ನು ಮೆರೆಸುವ ಯತ್ನ ಮಾಡಿದರು.

ಬೆಂ.ದಕ್ಷಿಣಕ್ಕೆ ತೇಜಸ್ವಿ ಸೂರ್ಯ, ಬೆಂ.ಗ್ರಾಮಾಂತರಅಶ್ವತ್ಥನಾರಾಯಣ

ಬಿಜೆಪಿ ನಾಯಕ ಅನಂತ್‌ ಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಶಾಸಕ ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಈ ಕ್ಷೇತ್ರದಲ್ಲಿ ಪಕ್ಷದ ಹುರಿಯಾಳು ಆಗಿದ್ದಾರೆ. ಅದೇ ರೀತಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಶ್ವತ್ಥ ನಾರಾಯಣ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ತೇಜಸ್ವಿನಿ ಅನಂತಕುಮಾರ್‌ ಅವರೇ ದಕ್ಷಿಣದಲ್ಲಿ ಕಣಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

‘ಉತ್ತರ’ಕ್ಕೆ ಕೃಷ್ಣ ಬೈರೇಗೌಡ ಅಭ್ಯರ್ಥಿ

ಸಮರ್ಥ ಅಭ್ಯರ್ಥಿ ಇಲ್ಲ ಎಂದು ಜೆಡಿಎಸ್‌ ಬಿಟ್ಟುಕೊಟ್ಟಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೊನೆಗಳಿಗೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಜೆಡಿಎಸ್‌ ಚಿಹ್ನೆಯಲ್ಲಿ ಕಾಂಗ್ರೆಸ್‌ನವರನ್ನು ಕಣಕ್ಕೆ ಇಳಿಸುವ ಆಲೋಚನೆ ದೇವೇಗೌಡರಿಗೆ ಇತ್ತು. ಈ ‘ರಾಜಕೀಯ ಹೊಂದಾಣಿಕೆ’ಗೆ ಕಾಂಗ್ರೆಸ್‌ನವರು ತಯಾರಾಗಲಿಲ್ಲ. ಹೀಗಾಗಿ, ಕ್ಷೇತ್ರವನ್ನೇ ಕಾಂಗ್ರೆಸ್‌ಗೆ ಗೌಡರು ಧಾರೆ ಎರೆದರು. ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT