ಶನಿವಾರ, ಡಿಸೆಂಬರ್ 14, 2019
23 °C
ಅಥಣಿ: ಬಿಜೆಪಿ, ಕಾಂಗ್ರೆಸ್‌ ಎರಡರಲ್ಲೂ ಭಿನ್ನಮತ ಶಮನ

ನಾಮಪತ್ರ ವಾಪಸ್ ಪಡೆದ ಜೆಡಿಎಸ್‌ ಅಭ್ಯರ್ಥಿ ಗುರಪ್ಪ ದಾಶ್ಯಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ): ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಪ್ತ ಹಾಗೂ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಗುರಪ್ಪ ದಾಶ್ಯಾಳ ನಾಮಪತ್ರ ವಾಪಸ್ ಪಡೆದು, ಕಣದಿಂದ ಹಿಂದೆ ಸರಿದರು.

ನಾಮಪತ್ರ ಸಲ್ಲಿಸಿದ ಬಳಿಕ ನಾಪತ್ತೆಯಾಗಿದ್ದ ಅವರು, ಗುರುವಾರ ಸವದಿ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಅವರೊಂದಿಗೆ ತಹಶೀಲ್ದಾರ್‌ ಕಚೇರಿಗೆ ಬಂದು ಉಮೇದುವಾರಿಕೆ ಹಿಂಪಡೆದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ದಾಶ್ಯಾಳ, ‘10 ವರ್ಷಗಳಿಂದಲೂ ಬಿಜೆಪಿಯಲ್ಲಿದ್ದೇನೆ. ನನ್ನ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದಾಗಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ವಯಂಸ್ಫೂರ್ತಿಯಿಂದ ಕಣಕ್ಕಿಳಿದಿದ್ದೆ. ಆದರೆ, ನನ್ನ ಸ್ಪರ್ಧೆ ಹಿಂದೆ ಸವದಿ ಅವರ ಕೈವಾಡವಿದೆ ಎಂಬ ಸುದ್ದಿ ಹಬ್ಬಿತ್ತು. ಇದು ಸುಳ್ಳು ಎಂದು ನಿರೂಪಿಸುವುದಕ್ಕಾಗಿ ಹಾಗೂ ಸವದಿ ಅವರಿಗೆ ಕೆಟ್ಟ ಹೆಸರು ಬಾರದಿರಲೆಂದು ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದೇನೆ. ಕಣದಿಂದ ಹಿಂದೆ ಸರಿಯುವಂತೆ ಅವರೂ ಒತ್ತಾಯ ಮಾಡಿದ್ದರು’ ಎಂದು ತಿಳಿಸಿದರು.

‘ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೆ. ಈಗ, ವಾಪಸ್‌ ಪಕ್ಷಕ್ಕೆ ಸೇರಿಕೊಳ್ಳುತ್ತೇನೆ. ಯಾರೂ ಯಾವುದೇ ಆಮಿಷ ಕೊಟ್ಟಿಲ್ಲ. ನಾನಗಿಯೇ ನಿರ್ಧಾರ ಮಾಡಿದ್ದೇನೆ’ ಎಂದರು.

ಕಣ್ಣೀರಿಟ್ಟ ಮಾಜಿ ಶಾಸಕ: ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಮುಖಂಡರಾದ ಎಸ್‌.ಕೆ. ಬುಟಾಳಿ ಹಾಗೂ ಸುರೇಶ ಪಾಟೀಲ ಕೂಡ ನಾಮಪತ್ರ ವಾಪಸ್‌ ಪಡೆದರು. ಕ್ಷೇತ್ರದ ಉಸ್ತುವಾರಿ, ಶಾಸಕ ಎಂ.ಬಿ. ಪಾಟೀಲ ಮನವೊಲಿಕೆಗೆ ಸ್ಪಂದಿಸಿದ ಅವರು, ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದರು.

ಈ ವೇಳೆ ಕಣ್ಣೀರಿಟ್ಟ ಡೊಂಗರಗಾಂವ ಅವರನ್ನು ಅಭ್ಯರ್ಥಿ ಗಜಾನನ ಮಂಗಸೂಳಿ ತಬ್ಬಿಕೊಂಡು ಸಂತೈಸಿದರು. ‘ಪಕ್ಷದಲ್ಲಿ ಸ್ಥಾನಮಾನ ಕೊಡಿಸಲಾಗುವುದು’ ಎಂದು ಎಂ.ಬಿ. ಪಾಟೀಲ ಭರವಸೆ ನೀಡಿದರು.

ಇದರೊಂದಿಗೆ, ಕ್ಷೇತ್ರದಲ್ಲಿ ಎರಡು ಪ್ರಮುಖ ಪಕ್ಷಗಳಲ್ಲಿದ್ದ ಬಂಡಾಯ ಶಮನವಾದಂತಾಗಿದೆ. ಬಿಜೆಪಿ–ಕಾಂಗ್ರೆಸ್‌ ನೇರ ಹಣಾಹಣಿಗೆ ಕಣ ಸಜ್ಜಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು