ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ: ಮೈತ್ರಿ ಅಭ್ಯರ್ಥಿಗಳ ಪರ ರಾಹುಲ್‌, ದೇವೇಗೌಡ; ಬಿಜೆಪಿ ಪ್ರಚಾರವೂ ಜೋರು

Last Updated 19 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಕಲಬುರ್ಗಿ: ತಮ್ಮವರನ್ನು ಗೆಲ್ಲಿಸಿಕೊಳ್ಳಲು ದಕ್ಷಿಣದಲ್ಲಿ ಬೀಡುಬಿಟ್ಟಿದ್ದ ನಾಯಕರು ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ದಾಂಗುಡಿ ಇಟ್ಟಿದ್ದು, ಪ್ರಚಾರದ ಅಬ್ಬರ ಬಿರುಸುಗೊಂಡಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಚುನಾವಣೆ ಕಣಕ್ಕೆ ರಂಗು ತಂದರು.

ಗುಲಬರ್ಗಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಗೋವಿಂದ ಕಾರಜೋಳ, ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರ ನಡೆಸಿದರು.

ಇತ್ತ ಮಗನನ್ನು ಗೆಲ್ಲಿಸಿಕೊಳ್ಳಲು ಶಿವಮೊಗ್ಗದಲ್ಲೇ ಮೊಕ್ಕಾಂ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿವಿಧೆಡೆ ಪ್ರಚಾರ ಸಭೆಗಳಲ್ಲಿ ಭಾಗಿಯಾದರು.

ರಾಯಚೂರು ಮತ್ತು ಚಿಕ್ಕೋಡಿಯಲ್ಲಿ ಪ್ರಚಾರ ನಡೆಸಿದ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

‘ಮೋದಿ ದೇಶದ ಅಭಿವೃದ್ಧಿ ಮಾಡುವುದು ದೂರದ ವಿಷಯ. ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್‌ ರಾಜ್ಯವನ್ನು ಸಹ ಅಭಿವೃದ್ಧಿ ಮಾಡಿಲ್ಲ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಗುಜರಾತ್‌ ಜನರೂ ಪ್ರಧಾನಿಯನ್ನು ನಂಬುತ್ತಿಲ್ಲ’ ಎಂದು ಟೀಕಾಪ್ರಹಾರ ನಡೆಸಿದರು.

‘ಮೂರು ರಾಜ್ಯಗಳಲ್ಲಿ ಬಿಜೆಪಿ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಲಬೆರಕೆ ಸರ್ಕಾರ ಎಂದು ಟೀಕಿಸುವ ನೈತಿಕತೆ ಅವರಿಗಿಲ್ಲ’ ಎಂದು ಎಚ್‌.ಡಿ. ದೇವೇಗೌಡ ರಾಯಚೂರಿನಲ್ಲಿ ಗುಡುಗಿದರು. ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮೋದಿ ವಿರುದ್ಧ ಕಿಡಿಕಾರಿದರು.

ಅಮ್ಮನ ಪ್ರಸ್ತಾಪಕ್ಕೆ ಎಚ್‌ಡಿಕೆ ನೋವು: ‘ರಾಜಕೀಯಕ್ಕೆ ನಮ್ಮ ತಾಯಿಯನ್ನು ಎಳೆದು ತಂದಿದ್ದು ನೋವು ತಂದಿದೆ’ ಎಂದು ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಹೇಳಿದರು.

‘ದೇವೇಗೌಡರ ಪತ್ನಿ ಚನ್ನಮ್ಮ ರಾಜ್ಯಸಭೆ ಸದಸ್ಯರಾಗುವುದು ಬಾಕಿ ಇದೆ’ ಎಂಬ ಬಿಜೆಪಿ ಶಾಸಕ ಜಗದೀಶ ಶೆಟ್ಟರ್‌ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ಇದಕ್ಕೆ ತಿರುಗೇಟು ಕೊಟ್ಟ ಶೆಟ್ಟರ್,‘ಇದು ನೋವಿನ ಸಂಗತಿ ಅಲ್ಲ; ಖುಷಿ ಪಡುವ ವಿಚಾರ’ ಎಂದರು.

ಉತ್ತರ ಕನ್ನಡ ಕ್ಷೇತ್ರದಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಮತ್ತು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇ ಮೊದಲ ಬಾರಿಗೆ ಒಟ್ಟಾಗಿ ಶಿರಸಿಯಲ್ಲಿ ರೋಡ್‌ ಶೋ ನಡೆಸಿದರು.

ಬಿಜೆಪಿ ನಾಯಕಿ, ನಟಿ ಮಾಳವಿಕಾ ಇವರಿಗೆ ಸಾಥ್‌ ನೀಡಿದರು. ಬಿಜೆಪಿ ನಾಯಕಿ, ನಟಿ ಶ್ರುತಿ ಹಾವೇರಿ ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಜೆಡಿಎಸ್‌ ಮುಖಂಡ ಪಿಜಿಆರ್‌ ಸಿಂಧ್ಯಾ ಬಳ್ಳಾರಿಯಲ್ಲಿ ಮೈತ್ರಿಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ: ಮತ್ತೆ ಮುನ್ನೆಲೆಗೆ ಬಂದ ಚರ್ಚೆ

‘ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ’ ಎಂಬ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಾನು ಮತ್ತೆ ಮುಖ್ಯಮಂತ್ರಿಯಾದರೆ ಬಿಪಿಎಲ್ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ವಿತರಿಸುತ್ತೇನೆ’ ಎಂದರು.

ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಅವರು ಹೇಳಿದ್ದರಲ್ಲಿ ತಪ್ಪೇನಿದೆ. ರಾಜಕೀಯದಲ್ಲಿ ಯಾರೂ ಸನ್ಯಾಸಿ ಅಲ್ಲ. 2023ರ ಚುನಾವಣೆ ಬಳಿಕ ಮುಖ್ಯಮಂತ್ರಿ ಆಗುತ್ತಾರೆ’ ಎಂದರು.

‘ಮುಖ್ಯಮಂತ್ರಿ ರೇಸ್‌ನಲ್ಲಿ ತುಂಬ ಜನ ಇದ್ದಾರೆ. ಅದರಲ್ಲಿ ಅವರೂ ಒಬ್ಬರು, ಒಳ್ಳೆಯದಾಗಲಿ. ಆಲ್‌ ದಿ ಬೆಸ್ಟ್‌’ ಎಂದು ಸಚಿವ ಡಿ.ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ಹೇಳಿದರು.

ಶಿವಮೊಗ್ಗ: ಡಿಕೆ ಸೋದರರು ಅಖಾಡಕ್ಕೆ

ಶಿವಮೊಗ್ಗದ ಉಸ್ತುವಾರಿ ಹೊತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್‌ ಇಡೀ ದಿನ ಈ ಕ್ಷೇತ್ರದಲ್ಲಿದ್ದು, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಕಾರ್ಯತಂತ್ರ ಹೆಣೆದರು.

‘ಲಿಂಗಾಯತ ಧರ್ಮ ಒಡೆಯುವ ಯತ್ನವನ್ನು ಆರಂಭಿಸಿದ್ದೇ ಬಿಜೆಪಿಯವರು’ ಎಂದು ಹೇಳಿದ ಶಿವಕುಮಾರ್‌, ತನ್ಮೂಲಕ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ಕೊಟ್ಟರು.

ಒಕ್ಕಲಿಗ ಮತಗಳನ್ನು ಸೆಳೆಯುವ ತಂತ್ರದ ಜವಾಬ್ದಾರಿಯನ್ನು ತಮ್ಮ ಸುರೇಶ್‌ಗೆ ವಹಿಸಿದ ಶಿವಕುಮಾರ್, ಪ್ರಚಾರ ನಡೆಸಿ ನಿರ್ಗಮಿಸಿದರು. ಬಳಿಕ, ಭದ್ರಾವತಿ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಒಕ್ಕಲಿಗ ಪ್ರಮುಖರು, ಕಾಂಗ್ರೆಸ್–ಜೆಡಿಎಸ್ ಪ್ರಮುಖರ ಜತೆ ಸರಣಿ ಸಭೆ ನಡೆಸಿದ ಸುರೇಶ್‌, ಸಮನ್ವಯ ಸಾಧಿಸುವ ಪ‍್ರಯತ್ನ ಮಾಡಿದರು.‘ಡಿ.ಕೆ. ಸೋದರರು ಇಲ್ಲಿ ಬಂದು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಸಂಸದ ಬಿ.ವೈ. ರಾಘವೇಂದ್ರ ವ್ಯಂಗ್ಯವಾಡಿದರು.

*ನಾನು ಹಳೇ ಕಾಂಗ್ರೆಸ್ಸಿಗ. ದೇಶದಲ್ಲಿ ಕಾಂಗ್ರೆಸ್‌ ಶಕ್ತಿ ಹೆಚ್ಚಾಗುತ್ತಿದೆ. ಸೋನಿಯಾ ಗಾಂಧಿ ಮುಂದಾಲೋಚನೆಯಿಂದ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ

– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

*ಮಗನನ್ನು ಗೆಲ್ಲಿಸಲು ಮಂಡ್ಯ ಕ್ಷೇತ್ರದಲ್ಲಿ ನೂರಾರು ಕೋಟಿ ಖರ್ಚು ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅದಕ್ಕಾಗಿ ರಾಜ್ಯದ ಖಜಾನೆ ಲೂಟಿ ಹೊಡೆದಿದ್ದಾರೆ

– ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

*ನರೇಂದ್ರ ಮೋದಿ ಅಧಿಕಾರ ಕಳೆದುಕೊಂಡರೆ ದೇಶ ಮುಕ್ತಿ ಪಡೆಯಲಿದೆ. ಮೋದಿಯನ್ನು ಮನೆಗೆ ಕಳುಹಿಸುವ ಸಮಯ ಸನ್ನಿಹಿತವಾಗಿದೆ

– ಎನ್‌.ಚಂದ್ರಬಾಬು ನಾಯ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT