ಸಮಾಜಮುಖಿ ಪರಿವರ್ತನೆಗಾಗಿ ಸನ್ಯಾಸಿಯಾದೆ

7
ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ

ಸಮಾಜಮುಖಿ ಪರಿವರ್ತನೆಗಾಗಿ ಸನ್ಯಾಸಿಯಾದೆ

Published:
Updated:
Prajavani

ದಾವಣಗೆರೆ: ಕ್ರಾಂತಿಕಾರಿ ಮಾತುಗಳಿಂದಲೇ ಲಕ್ಷಾಂತರ ಮಂದಿಯ ಪ್ರೀತಿಗೆ ಪಾತ್ರರಾಗಿರುವ, ಹಲವರ ಟೀಕೆಗೆ, ಕೆಲವರ ದ್ವೇಷಕ್ಕೆ ಗುರಿಯಾಗಿರುವ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಇಲ್ಲಿನ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಪ್ರವಚನ ನೀಡುತ್ತಿದ್ದಾರೆ. ಹರಿತವಾದ ಮಾತುಗಳಿಂದಲೇ ವಿಶ್ವಧರ್ಮದ, ಭಾವೈಕ್ಯದ ಮಹತ್ವವನ್ನು ಸಾರುತ್ತಿದ್ದಾರೆ.

‘ಸಮಾಜಮುಖಿ ಪರಿವರ್ತನೆಗಳನ್ನು ತರುವುದಕ್ಕಾಗಿಯೇ ಸ್ವಾಮೀಜಿಯಾದೆ’ ಎಂದು ಅವರನ್ನು ಪ್ರಜಾವಾಣಿ ಮಾತನಾಡಿಸಿದಾಗ ಘಂಟಾಘೋಷವಾಗಿ ಹೇಳಿದ್ದಾರೆ. ತನ್ನ ವೈಯಕ್ತಿಕ ಬದುಕಿನ ವಿವರಣೆಯನ್ನೂ ತಿಳಿಸಿದ್ದಾರೆ.

* ಸನ್ಯಾಸಿಯಾಗಬೇಕು ಎಂದು ನಿಮಗೆ ಯಾಕೆ ಅನಿಸಿತು?

ಸನ್ಯಾಸಿ ಆಗಬೇಕು ಎಂದು ನಾನು ಚಿಂತನೆ ನಡೆಸಿರಲಿಲ್ಲ. ಮೈಸೂರಿನಲ್ಲಿ ಲಿಂಗಾನಂದ ಸ್ವಾಮೀಜಿ ಅವರ ಪ್ರವಚನ ಕೇಳಿ ಅವರ ಪ್ರಭಾವಕ್ಕೆ ಒಳಗಾದೆ. ಸಾಮಾಜಿಕ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಎಂದು ತೀರ್ಮಾನಿಸಿ ಸನ್ಯಾಸಿ ಆದೆ.

* ಹಿಂದೂ ಧರ್ಮದ ಕುಟುಂಬದಲ್ಲಿ ಬಂದ ನೀವು ಲಿಂಗಾಯತ ಧರ್ಮ ಸ್ವೀಕರಿಸಲು ಕಾರಣ ಏನು?

ಪ್ರಾದೇಶಿಕವಾಗಿ ನೋಡಿದರೆ ಸಿಂಧೂ ನದಿಯ ಈ ಕಡೆಗೆ ಇರುವವರೆಲ್ಲ ಹಿಂದುಗಳು. ಧಾರ್ಮಿಕವಾಗಿ ಹಿಂದೂ ಧರ್ಮವಲ್ಲ. ಅಲ್ಲಿರುವುದು ವೈದಿಕ ಧರ್ಮ. ಅದು ಬ್ರಾಹ್ಮಣರ ಮನೆಯಲ್ಲಿ ಮಾತ್ರ ಇದೆ ಎಂದು ನೀವು ತಿಳಿದುಕೊಳ್ಳಬೇಡಿ. ಪ್ರತಿ ಮನೆಗೂ ಹೇರಲಾಗಿದೆ. ವೈದಿಕ ಧರ್ಮದಲ್ಲಿರುವ ವ್ಯತ್ಯಾಸಗಳನ್ನು ಬುದ್ಧ, ಮಹಾವೀರ, ಬಸವಣ್ಣ ಎಲ್ಲರೂ ಗುರುತಿಸಿದ್ದಾರೆ. ಅವರು ಹೇಳಿರುವುದು ಸರಿ ಇದೆ. ಬಸವಣ್ಣ ಹೇಳಿರುವ ಧರ್ಮ ಸರಿಯಾದ ಧರ್ಮ ಆಗಿರುವುದರಿಂದ ಈ ಧರ್ಮವನ್ನು ಪ್ರಚಾರ ಮಾಡುತ್ತಿದ್ದೇನೆ. ಕಾಯಕ, ದಾಸೋಹ ಮತ್ತು ಸಮಾನತೆ ಇರುವ, ಏಕದೇವರ ಆರಾಧಿಸುವ ಲಿಂಗಾಯತ ಧರ್ಮದಲ್ಲಿ ಲಿಂಗ ತಾರತಮ್ಯ ಇಲ್ಲ. ಶೋಷಣೆ ಇಲ್ಲ. ಶೇ 100 ಪರಿಪೂರ್ಣ ಧರ್ಮ ಇದು.

* ನೀವು ಸನ್ಯಾಸಿ ಆಗಲು ಮನೆಯವರ ಒಪ್ಪಿಗೆ ಇತ್ತೇ?

ಯಾವ ತಂದೆ ತಾಯಿ ತಮ್ಮ ಮಕ್ಕಳು ಸನ್ಯಾಸಿಯಾಗಲಿ ಎಂದು ಬಯಸುತ್ತಾರೆ. ಹಾಗಾಗಿ ಸನ್ಯಾಸಿ ಆಗುತ್ತೇನೆ ಎಂದು ಹೆತ್ತವರಿಗೆ ಹೇಳಲಾರದೇ ಮನೆ ಬಿಟ್ಟು ಓಡಿ ಬಂದವನು ನಾನು.

* ನಿಮ್ಮ ಮೂಲ ಮನೆ ಎಲ್ಲಿತ್ತು?

ಎಲ್ಲವನ್ನೂ ಬಿಟ್ಟು ಬಂದವ ನಾನು. ಅದೆಲ್ಲ ಬೇಕಾಗಿಲ್ಲ ಅನ್ನಿಸುತ್ತದೆ. ಆದರೂ ಹೇಳುತ್ತೇನೆ. ಮೂಲ ಮನೆ ಕಾಸರಗೋಡಿನ ಮುಳ್ಳೇರಿಯ. ನನ್ನ ಅಜ್ಜ ಎಲ್ಲ ಇದ್ದಿದ್ದು ವಿಟ್ಲದಲ್ಲಿ. ನಾನು ಹುಟ್ಟಿದ್ದು ಮಡಿಕೇರಿಯಲ್ಲಿ. ಬೆಳೆದದ್ದು ಮೈಸೂರಿನಲ್ಲಿ.

* ಸನ್ಯಾಸಿ ಆಗಬಾರದಿತ್ತು ಎಂದು ಯಾವಾಗಲಾದರೂ ಅನ್ನಿಸಿದೆಯೇ ?

ಹಾಗೆಂದೂ ಅನ್ನಿಸಿಲ್ಲ. ಧ್ಯಾನ, ಆಧ್ಯಾತ್ಮ, ದೇವರ ಬಗ್ಗೆ ಅಬ್ಸರ್ವೇಶನ್‌ ಮಾತ್ರ ಮಾಡುತ್ತಿದ್ದೇನೆ. ಸತ್ಯವನ್ನಷ್ಟೇ ಜನರಿಗೆ ಹೇಳುತ್ತಾ ಹೋಗುತ್ತಿದ್ದೇನೆ.

* ನಿಮ್ಮ ದಾರಿಗೆ ಯಾವುದೇ ಅಡಚಣೆಗಳು ಬಂದಿಲ್ವ?

ಧಾರ್ಮಿಕ, ಆಧ್ಯಾತ್ಮಿಕ ಸ್ವಾಮಿಗಳು ಒಂದು ಕಡೆ ಕೆಲಸ ಮಾಡುತ್ತಿರುತ್ತಾರೆ. ಸಮಾಜಮುಖಿ ಪರಿವರ್ತನೆಗೆ ಸ್ವಾಮೀಜಿಗಳಾಗಿರುವ ನಾವು ಹಾಗಲ್ಲ. ಜಗತ್ತಿನ ಎಲ್ಲ ಆಗುಹೋಗುಗಳನ್ನು ಗಮನಿಸಬೇಕಾಗುತ್ತದೆ. ಎಲ್ಲ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಒಂದು ನದಿ ಇದ್ದಾಗ ನೀರಿನ ಜತೆಗೆ ಕಸವೂ ಹರಿದು ಬರುತ್ತದೆ. ಆ ಕಸಗಳನ್ನು ತೆಗೆಯುವ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅಡಚಣೆಗಳ ಬಗ್ಗೆ ಚಿಂತಿಸಿಲ್ಲ.

* ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಬಗ್ಗೆಯೇ ಹೆಚ್ಚು ಟೀಕೆಗಳು ಬರುತ್ತಿವೆ ಯಾಕೆ?

ನಾನು ಸೋಶಿಯಲ್‌ ಮೀಡಿಯ ನೋಡುವುದಿಲ್ಲ. ಸತ್ಯದ ಕಡೆಗೆ ಅವರು ಬರುತ್ತಿಲ್ಲ. ಸತ್ಯದ ಪ್ರತಿಪಾದನೆ ಅವರಿಗೆ ಹಿಡಿಸುತ್ತಿಲ್ಲ. ಹಾಗಾಗಿ ಟೀಕಿಸುತ್ತಾರೆ. ಟೀಕೆಗೆ ಯಾವತ್ತೂ ಸ್ವಾಗತ. ಸಣ್ಣ ಸಣ್ಣ ಹುಡುಗರೇ ಟೀಕೆಯಲ್ಲಿ ಹೆಚ್ಚು ಜನ ಇದ್ದಾರೆ ಎಂಬುದನ್ನು ಬಲ್ಲೆ. ಅದಕ್ಕೆ ಅಧ್ಯಯನದ ಕೊರತೆಯೇ ಅದಕ್ಕೆ ಕಾರಣ.

* ಆಹಾರದ ಕಟ್ಟಳೆಗಳು ಲಿಂಗಾಯತ ಧರ್ಮದ ಮಿತಿ ಆಗಿದೆಯಲ್ವ?

ಆಹಾರ ಎನ್ನುವುದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ಹಸಿವಿಗೆ ಸಂಬಂಧಿಸಿದ್ದು. ಆಹಾರ ಕಟ್ಟಳೆಗಳಿಂದ ಜನರಿಗೆ ತೊಂದರೆಯಾಗಿವುದನ್ನು ಕಂಡಿದ್ದೇವೆ. ಅದನ್ನು ತಿಳಿಗೊಳಿಸುವ ವ್ಯವಸ್ಥೆಯಲ್ಲಿ ಇದ್ದೇವೆ.

* ಲಿಂಗಾಯತ ಧರ್ಮ ಎಲ್ಲರನ್ನೂ ಅದರಲ್ಲೂ ದಲಿತರನ್ನು ಒಳಗೊಳ್ಳುತ್ತಿದೆಯೇ?

ಈ ದೇಶ ಶೇ 80ರಷ್ಟು ದಲಿತರಿರುವ ದೇಶ. ಶೇ 20ರಷ್ಟು ಮಾತ್ರ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಇದ್ದಾರೆ. ಎಲ್ಲರನ್ನು ಒಳಗೊಂಡೇ ಲಿಂಗಾಯತ ಧರ್ಮವನ್ನು ಕಟ್ಟಲಾಗಿದೆ. ಯಾರೆಲ್ಲ ಶರಣರು ಇದ್ದರು ಎಂಬುದನ್ನು ನೋಡಿದರೆ ನಿಮಗೆ ಅರಿವಾಗಬಹುದು. ಬಸವಣ್ಣ ಬ್ರಾಹ್ಮಣರ ಮಗನಿಗೆ ದಲಿತರ ಮಗಳನ್ನು ಮದುವೆ ಮಾಡಿದ್ದನ್ನು ನೋಡಿರಬಹುದು. ಕಲ್ಯಾಣ ಕ್ರಾಂತಿಯ ನಂತರ ಸನಾತನ ಧರ್ಮದವರು ದಾಳಿ ಮಾಡಿದರು. ವಚನಗಳನ್ನು ಸುಟ್ಟರು. ಶರಣರ ಹತ್ಯಾಕಾಂಡ ನಡೆದು ಹೋಯಿತು. 300 ವರ್ಷ ಧರ್ಮ ಕತ್ತಲಲ್ಲಿ ಉಳಿಯಿತು. ಯೆಡೆಯೂರು ಸಿದ್ದಲಿಂಗೇಶ್ವರ ಸ್ವಾಮೀಜಿ ಬಂದ ಬಳಿಕ ಧರ್ಮದ ಪುನರುತ್ಥಾನವಾಯಿತು. ಈ ಧರ್ಮ ಮತ್ತೆ ದಲಿತರನ್ನು ಒಳಗೊಳ್ಳುವತ್ತ ಒಯ್ಯಲು ಪ್ರಯತ್ನ ಪಡುತ್ತಿದ್ದೇವೆ.

ಲಿಂಗಾಯತ ಧರ್ಮದಲ್ಲಿಯೂ ಜಾತಿ ವ್ಯವಸ್ಥೆ ಇದೆಯಲ್ಲ?

ಲಿಂಗ ಧರಿಸಿದದ ಎಲ್ಲರೂ ಲಿಂಗಾಯತರೇ. ಆದರೆ ಕಾಯಕವೇ ಜಾತಿಗಳಾದವು. ಅವುಗಳನ್ನು ಹೋಗಲಾಡಿಸಲು ಅಂತರ್ಜಾತಿ ಮದುವೆ ಸಂಬಂಧಗಳು ನಡೆಯಬೇಕು. ಕೊಡು–ಕೊಳ್ಳುವಿಕೆ ಆಗಬೇಕು. ಪ್ರವಚನಗಳ ಮೂಲಕ ಅವುಗಳಿಗೆ ಒತ್ತು ನೀಡಲಾಗುತ್ತಿದೆ.

ಪ್ರವಚನದಿಂದ ಲಿಂಗಾಯತರಾಗಿ ಪರಿವರ್ತನೆಗೊಳ್ಳುವರೇ?

ಲಿಂಗಾಯತೇತರರು ಲಿಂಗಾಯತರಾಗದಿರಬಹುದು. ಆದರೆ ಬಸವಾಯತರು ಆಗುತ್ತಿದ್ದಾರೆ. ಬಸವಣ್ಣನನ್ನು ಒಪ್ಪುವವರು, ಅವರ ಸಾಮಾಜಿಕ ತತ್ವಗಳನ್ನು ಅಳವಡಿಸಿಕೊಳ್ಳುವವರು ಬಹಳಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಆದರೆ ಲಿಂಗ ಧರಿಸಿ ಧಾರ್ಮಿಕವಾಗಿ ಲಿಂಗಾಯತರಾಗುತ್ತಿಲ್ಲ. ಹಾಗಾಗಿ ಬಸವಾಯತರಾಗುವುದೂ ದೊಡ್ಡ ಸಾಧನೆಯೇ ಆಗಿದೆ.

ಕರ್ನಾಟಕ ಹಾಗೂ ರಾಜ್ಯದ ಸುತ್ತಲಿನ 200 ಕಿಲೋಮೀಟರ್‌ ದೂರದವರೆಗೆ ಲಿಂಗಾಯತ ಧರ್ಮ ಇದೆ. ಅದು ಭಾರತದಾದ್ಯಂತ ಪ್ರಸಾರ ಆಗಬೇಕು. ಅದಕ್ಕೆ ವಿಶ್ವವಿದ್ಯಾಲಯ ತೆರೆಯಬೇಕು. ಆರ್ಥಿಕವಾಗಿ ಗಟ್ಟಿ ಇರದ ನನ್ನಂಥ ಸ್ವಾಮೀಜಿಯಿಂದ ಆಗುವ ಕೆಲಸವಲ್ಲ. ಆರ್ಥೀಕವಾಗಿ ಸದೃಢರಾಗಿರುವರು ಮಾಡಬೇಕು. ದಂಬಳ ಸ್ವಾಮೀಜಿ ಇದಕ್ಕೆ ಅಣಿಯಾಗುತ್ತಿದ್ದಾರೆ.

ರಾಜಕೀಯ, ಧರ್ಮ ಬೆಸೆದುಕೊಂಡರೆ ದೇಶ ನಾಶ

ರಾಜಕಾರಣಿಗಳು ಧರ್ಮದಿಂದ ದೂರ ಉಳಿದು ಭಾವೈಕ್ಯ ಮತ್ತು ಅಭಿವೃದ್ಧಿಯ ಪರ ಮಾತ್ರ ಇದ್ದರೆ ದೇಶವನ್ನು ಕಟ್ಟಬಹುದು. ಜಾತಿ, ಧರ್ಮ, ಕೋಮುವಾದದ ರಾಜಕೀಯ ಮಾಡಲು ಹೋದರೆ ದೇಶ ನಾಶವಾಗಿ ಹೋಗುತ್ತದೆ. ಧರ್ಮಗಳನ್ನು ಉಳಿಸುವ ಕೆಲಸ ಧರ್ಮಾಧಿಕಾರಿಗಳು ಮಾಡಲಿ. ರಾಜಕಾರಣಿಗಳು ಧರ್ಮ ನಿರಾಪೇಕ್ಷರಾಗಿ ಕೆಲಸ ಮಾಡಲಿ ಎಂದು ನಿಜಗುಣ ಪ್ರಭು ಸ್ವಾಮೀಜಿ ಸಲಹೆ ನೀಡಿದರು.

ಶಿವ ದ್ರಾವಿಡರ ದೇವರು

ಶಿವ ದ್ರಾವಿಡರ ದೇವರು. ಆರ್ಯರ ದೇವರಾಗಿರಲಿಲ್ಲ. ವೈಷ್ಣವರು ಎಂದೂ ಶಿವನನ್ನು ಒಪ್ಪಿಕೊಂಡಿಲ್ಲ. ಆರ್ಯರಲ್ಲಿ ಕೆಲವರು ಆಮೇಲೆ ಶಿವನನ್ನು ದೇವರು ಮಾಡಿಕೊಂಡರು. ಹಾಗಾಗಿ ಶಿವನ ಆರಾಧನೆ ಮಾಡಿದ ಕೂಡಲೇ ಹಿಂದೂ ಎಂಬುದೇ ತಪ್ಪು ಎಂದು ನಿಜಗುಣ ಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಉತ್ತರದ ಬುದ್ಧ, ದಕ್ಷಿಣದ ಬಸವಣ್ಣ, ಜ್ಯೋತಿ ಬಾಫುಲೆ, ಅಂಬೇಡ್ಕರ್‌, ನಾರಾಯಣ ಗುರು ಬಹಳ ಮುಖ್ಯ. ಅವರ ಅನುಯಾಯಿಗಳು ಅವರನ್ನು ಸೀಮಿತಗೊಳಿಸಿದರೆ, ಅದಕ್ಕೆ ಮಹಾತ್ಮರು ಕಾರಣರಲ್ಲ. ರಾಜಕಾರಣಿಗಳು, ಬಂಡವಾಳಶಾಹಿಗಳು ತಮ್ಮ ಬೆಳವಣಿಗೆಗಾಗಿ ನಿಜಧರ್ಮವನ್ನು, ಅವರ ನಿಜತತ್ವಗಳನ್ನು ಮರೆಮಾಚಿ ಹೈಜಾಕ್‌ ಮಾಡುತ್ತಾರೆ. ಅದರ ಭಾಗವಾಗಿಯೇ ಅವರು ಹಿಂದೂ, ಇವರು ಹಿಂದೂ ಎಂದು ಹೇಳುತ್ತಾ ಬರುತ್ತಿದ್ದಾರೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !