ಆರ್ಥಿಕ ನೆರವು ನೀಡದ ಕೇಂದ್ರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದೂರು

7

ಆರ್ಥಿಕ ನೆರವು ನೀಡದ ಕೇಂದ್ರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದೂರು

Published:
Updated:
Deccan Herald

ದಾವಣಗೆರೆ: ‘ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿಯಾಗಿದ್ದರೂ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿಲ್ಲ; ಈಗ ಬರ ಪರಿಹಾರ ಹಣವನ್ನಾದರೂ ಕೊಡುತ್ತದೆಯೋ ಎಂದು ಕಾದು ನೋಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದೂರಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತಿವೃಷ್ಟಿಯಿಂದ ಐದಾರು ಜಿಲ್ಲೆಗಳಲ್ಲಿ ಹಾನಿಯಾದಾಗ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಮನವಿ ಮಾಡಿದ್ದೆವು. ನೆರವು ನೀಡದೇ ಇರುವುದರಿಂದ ರಾಜ್ಯ ಸರ್ಕಾರವೇ ಸುಮಾರು ₹ 250 ಕೋಟಿಯನ್ನು ಬಿಡುಗಡೆ ಮಾಡಿ, ಪರಿಹಾರ ಕ್ರಮ ಕೈಗೊಂಡಿತ್ತು. ಮುಂಗಾರಿನಲ್ಲಿ ₹ 16 ಸಾವಿರ ಕೋಟಿ ಬೆಳೆ ನಷ್ಟವಾಗಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ರಾಜ್ಯಕ್ಕೆ ಬಂದಿರುವ ಕೇಂದ್ರದ ಬರ ಅಧ್ಯಯನ ತಂಡ ಸ್ಥಳ ಪರಿಶೀಲಿಸಿ ಏನು ವರದಿ ಕೊಡುತ್ತದೆ ಕಾದು ನೋಡೋಣ’ ಎಂದು ಹೇಳಿದರು.

ಈಗಾಗಲೇ 100 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತಲಾ ₹ 50 ಲಕ್ಷ ಮಂಜೂರು ಮಾಡಲಾಗಿದೆ. ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ₹ 25 ಲಕ್ಷವನ್ನೂ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸ್ಥಾನ ಶಾಶ್ವತ ಅಲ್ಲ

‘ಮುಖ್ಯಮಂತ್ರಿ ಸ್ಥಾನ ತಮಗೆ ನೀಡಿದರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಕೆಲಸ ಮಾಡುವವರು ಬಹಳ ಮಂದಿದ್ದಾರೆ; ಅವರಲ್ಲಿ ಪರಮೇಶ್ವರ ಕೂಡ ಒಬ್ಬರು. ಅವರ ಹೇಳಿಕೆಗೆ ಬೇರೆ ವ್ಯಾಖ್ಯಾನ ಮಾಡಬೇಕಾಗಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ರಾಜ್ಯದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಎಷ್ಟೋ ಸರ್ಕಾರಗಳು ಬಂದು ಹೋಗಿವೆ. ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತ ಅಲ್ಲ’ ಎಂದು ಹೇಳಿದರು.

‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಆಯೋಗ ರಚಿಸುವ ಬಗ್ಗೆ ಚಿಂತನೆ ನಡೆದಿದೆಯೇ?’ ಎಂಬ ಕುರಿತ ಪ್ರಶ್ನೆಗೆ, ‘ಈಗಾಗಲೇ ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಯಾಗಿದೆ. ಆಯೋಗ ರಚನೆಯಾದ ತಕ್ಷಣ ಕೆಲಸ ಆಗಲ್ಲ. ಸರ್ಕಾರಕ್ಕೆ ಯಾವ ಯಾವ ಜಿಲ್ಲೆಗಳಲ್ಲಿ ಏನೇನು ತೊಂದರೆಗಳಿವೆ; ಯಾವುದನ್ನು ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂಬ ಬಗ್ಗೆ ಬದ್ಧತೆ ಇರಬೇಕು. ಆಯೋಗದ ರಚನೆ ಮಾಡಿ ಕೆಲಸ ಮಾಡುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಡೆಯುತ್ತದೆ ಎಂಬುದು ನನ್ನ ಅಭಿಪ್ರಾಯ’ ಎಂದು ಸ್ಪಷ್ಟಪಡಿಸಿದರು.

ಆ್ಯಕ್ಸಿಸ್‌ ಬ್ಯಾಂಕ್‌ ವಿರುದ್ಧ ಅಸ್ತ್ರ

ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ಸಾಲ ಪಡೆದ ರೈತರಿಗೆ ಬಂಧನದ ವಾರಂಟ್‌ ಜಾರಿಗೊಳಿಸುತ್ತಿರುವ ಕುರಿತ ಪ್ರಶ್ನೆಗೆ, ‘ಪದೇ ಪದೇ ಬ್ಯಾಂಕಿನವರು ಉದ್ಧತಟನ ತೋರಿಸಿದರೆ, ಸರ್ಕಾರದ ಇಲಾಖೆಗಳ ಖಾತೆಗಳಲ್ಲಿರುವ ಠೇವಣಿ ಹಣವನ್ನು ಬ್ಯಾಂಕಿನಿಂದ ಹಿಂದಕ್ಕೆ ಪಡೆಯುವ ಬಗ್ಗೆ ಯೋಚಿಸಬೇಕಾಗುತ್ತದೆ. ನಮ್ಮ ಆದೇಶಕ್ಕೆ ಬೆಲೆ ಕೊಡದಿದ್ದರೆ ನಮ್ಮ ಬಳಿ ಇರುವ ಅಸ್ತ್ರಗಳನ್ನು ಪ್ರಯೋಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಿಂದಲೇ ಬೆಳೆ ವಿಮೆ ಜಾರಿಗೆ ಚಿಂತನೆ

‘ರಾಜ್ಯ ಸರ್ಕಾರದಿಂದಲೇ ಬೆಳೆ ವಿಮೆ ಜಾರಿಗೊಳಿಸುವ ಬಗ್ಗೆ ಮರು ಚಿಂತನೆ ನಡೆಸುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಬೆಳೆ ವಿಮೆ ಯೋಜನೆಯಲ್ಲಿನ ಲೋಪ–ದೋಷಗಳು ಹಾಗೂ ಖಾಸಗಿ ವಿಮೆ ಕಂಪನಿಗಳಿಂದ ರೈತರಿಗೆ ಅನಾನುಕೂಲಗಳಾಗುತ್ತಿವೆ. ಹೀಗಾಗಿ ಸರ್ಕಾರದಿಂದಲೇ ಈ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ. ಸರ್ಕಾರವೇ ನೇರವಾಗಿ ತೀರ್ಮಾನ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !