8 ಸಂಸದೀಯ ಕಾರ್ಯದರ್ಶಿಗಳಿಗೆ ನೋಟಿಸ್: ಹೈಕೋರ್ಟ್ ಆದೇಶ

7

8 ಸಂಸದೀಯ ಕಾರ್ಯದರ್ಶಿಗಳಿಗೆ ನೋಟಿಸ್: ಹೈಕೋರ್ಟ್ ಆದೇಶ

Published:
Updated:

ಬೆಂಗಳೂರು: ರಾಜ್ಯ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳ ಹುದ್ದೆಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನೇಮಿಸಿದ ಕ್ರಮ ಪ್ರಶ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸಂಸದೀಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಎಂ.ಬಿ.ಆದಿನಾರಾಯಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಶಾಸಕಿ ಅಂಜಲಿ ಹೇಮಂತ ನಿಂಬಾಳ್ಕರ್, ಕೌಜಲಗಿ ಮಹಾಂತೇಶ ಶಿವಾನಂದ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಬಸವರಾಜ್ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇಮಿಸಿದ್ದರು.

ಈ ಸಂಬಂಧ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ 2019ರ ಜನವರಿ 7ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದ್ದರು.

‘ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯು ಸಂವಿಧಾನದ 164 (1-ಎ) ವಿಧಿಗೆ ವಿರುದ್ಧವಾಗಿದೆ. ಆದ್ದರಿಂದ ಐವಾನ್ ಡಿಸೋಜಾ ಹಾಗೂ ಇತರರನ್ನು ಸಂಸದೀಯ ಕಾರ್ಯದರ್ಶಿಗಳ ಹುದ್ದೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

‘ಅರ್ಜಿ ಇತ್ಯರ್ಥವಾಗುವರೆಗೆ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು’ ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ನೂತನ ಸಂಸದೀಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !