ಪುಟ್ಟರಂಗಶೆಟ್ಟಿಗೆ ಎಸಿಬಿ ನೋಟಿಸ್‌

ಸೋಮವಾರ, ಮೇ 20, 2019
33 °C
ಟೈಪಿಸ್ಟ್‌ ಬಳಿ ಸಿಕ್ಕಿದ ₹ 25.76 ಲಕ್ಷ ಲಂಚದ ಹಣ ಪ್ರಕರಣ: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಸಚಿವ

ಪುಟ್ಟರಂಗಶೆಟ್ಟಿಗೆ ಎಸಿಬಿ ನೋಟಿಸ್‌

Published:
Updated:
Prajavani

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯದ ಟೈಪಿಸ್ಟ್‌ ಎಸ್‌.ಜೆ.ಮೋಹನ್‌ ಕುಮಾರ್‌ ಬಳಿ ವಶಪಡಿಸಿಕೊಳ್ಳಲಾದ ₹ 25.76 ಲಕ್ಷ ‘ಲಂಚದ ಹಣ ಪ್ರಕರಣ’ದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

ಇದರಿಂದಾಗಿ ರಾಜ್ಯದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಮತ್ತೊಂದು ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನೋಟಿಸ್ ಸ್ವೀಕರಿಸಿರುವ ಪುಟ್ಟರಂಗಶೆಟ್ಟಿ ಅವರು ವೈಯಕ್ತಿಕ ಕಾರಣಗಳಿಂದಾಗಿ ನೀವು ಹೇಳಿದ ಸಮಯಕ್ಕೆ ಹಾಜರಾಗಲು ಸಾಧ್ಯವಾಗದೆ ಇರುವುದರಿಂದ ಕೊಂಚ ಕಾಲಾವಕಾಶ ನೀಡಬೇಕೆಂದು ಎಸಿಬಿಗೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೋಹನ್‌ ಕುಮಾರ್‌, ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ, ‘ಈ ಹಣವನ್ನು ಸಚಿವರಿಗೆ ತಲುಪಿಸಲು ಗುತ್ತಿಗೆದಾರರಾದ ನಂದ, ಅನಂತು, ಶ್ರೀನಿಧಿ ಹಾಗೂ ಕೃಷ್ಣಮೂರ್ತಿ ಅವರು ಕೊಟ್ಟಿದ್ದರು’ ಎಂದು ಹೇಳಿದ್ದರು.

ಆರೋ‍ಪಿ ಹೇಳಿಕೆ ಹಿನ್ನೆಲೆಯಲ್ಲಿ ನಂದ, ಅನಂತು ಹಾಗೂ ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಲಾಗಿತ್ತು. ‘ಅಲೆಮಾರಿ ನಿಗಮದಿಂದ ಕೆಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಸಲು ಯೋಗೀಶ್‌ಬಾಬು, ಸತೀಶ್‌, ಜ್ಯೋತಿ ಪ್ರಕಾಶ್‌, ಉಮೇಶ್‌ ಮತ್ತು ರಾಜು ಎಂಬುವವರು ಸಚಿವರಿಗೆ ಹಣ ನೀಡಿದ್ದರು. ಅದನ್ನು ಮೋಹನ್‌ ಕುಮಾರ್‌ಗೆ ತಲುಪಿಸಲಾಗಿತ್ತು’ ಎಂದೂ ಖಚಿತಪಡಿಸಿದ್ದರು.

ಎಸಿಬಿ ಅಧಿಕಾರಿಗಳು ಅಲೆಮಾರಿ ನಿಗಮದ ಅಧಿಕಾರಿಗಳಿಂದಲೂ ಹೇಳಿಕೆ ಪಡೆದಿದ್ದಾರೆ. ಸಚಿವರ ಕಚೇರಿ, ಅಲೆಮಾರಿ ಅಭಿವೃದ್ಧಿ ನಿಗಮ, ಮೋಹನ್‌ ಕುಮಾರ್‌ ಮನೆ ಸೇರಿದಂತೆ ಹಲವು ಸ್ಥಳಗಳಿಂದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಎಲ್ಲ ಮೂಲಗಳಿಂದಲೂ ಅಗತ್ಯ ಸಾಕ್ಷ್ಯಾಧಾರಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸಂಗ್ರಹಿಸಿದ ಬಳಿಕ ಸಚಿವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಎಸಿಬಿ ಮುಂದೆ ವಿಚಾರಣೆಗೆ ಹಾಜರಾಗುತ್ತಿರುವ ಮೈತ್ರಿ ಸರ್ಕಾರದ ಮೊದಲ ಸಚಿವ ಪುಟ್ಟರಂಗಶೆಟ್ಟಿ ಅಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಅವರು ಸಿಗಲಿಲ್ಲ.

ಎಸಿಬಿ ವಿಶ್ವಾಸಾರ್ಹತೆಯ ಅಗ್ನಿಪರೀಕ್ಷೆ

ಆಡಿಯೊ ‍ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವುದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ‘ಪುಟ್ಟರಂಗಶೆಟ್ಟಿ ಪ್ರಕರಣವನ್ನು ಎಸಿಬಿ ಹೇಗೆ ನಿಭಾಯಿಸಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆಯೇ?’ ಎಂಬ ಪ್ರಶ್ನೆ ಎದ್ದಿದೆ.

ಮುಖ್ಯಮಂತ್ರಿ ನಿಯಂತ್ರಣದಲ್ಲಿ ಎಸ್‌ಐಟಿ ತನಿಖೆ ನಡೆಸುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಗೃಹ ಇಲಾಖೆ ಅಧೀನದಲ್ಲಿ ಎಸಿಬಿ ಕೆಲಸ ಮಾಡುವುದರಿಂದ ಈ ಪ್ರಕರಣದಲ್ಲಿ ಸತ್ಯ ಹೊರಬರುವುದೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !