ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಎಸ್‌.ಐ. ಸಿಬ್ಬಂದಿಗೆ ನೋಟಿಸ್‌

ಹಂಪಿ ಸ್ಮಾರಕಕ್ಕೆ ಹಾನಿಗೊಳಿಸಿದ ಪ್ರಕರಣ; ಯುವಕನ ಬಿಡುಗಡೆ; ಇಂದು ಪ್ರತಿಭಟನೆ
Last Updated 3 ಫೆಬ್ರುವರಿ 2019, 16:46 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ಸ್ಮಾರಕಕ್ಕೆ ಹಾನಿಗೊಳಿಸಿದ ವಿಡಿಯೊ ವೈರಲ್‌ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಸಿಬ್ಬಂದಿಗೆ ಭಾನುವಾರ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ.

ಚಿಕ್ಕಪ್ಪ ನಿಧನ ಹೊಂದಿದ್ದರಿಂದ ರಜೆ ಮೇಲೆ ಮಧುರೈಗೆ ತೆರಳಿದ್ದ ಎ.ಎಸ್‌.ಐ. ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರು ವಿಷಯ ತಿಳಿದು ಭಾನುವಾರ ಹಂಪಿಗೆ ದೌಡಾಯಿಸಿದರು. ಹಂಪಿ ಗಜಶಾಲೆ ಹಿಂಭಾಗದ ವಿಷ್ಣು ದೇಗುಲಕ್ಕೆ ಭೇಟಿ ನೀಡಿ, ಅಲ್ಲಿ ಸಾಲಾಗಿ ಕಲ್ಲುಗಂಬಗಳನ್ನು ಬಿದ್ದಿರುವುದು ಪರಿಶೀಲಿಸಿದರು.

ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ನಮ್ಮ ಸಿಬ್ಬಂದಿ ಪಾಳಿ ಪ್ರಕಾರ ಹಗಲು ರಾತ್ರಿ ಹಂಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಿದ್ದರೂ ಸ್ಮಾರಕಗಳಿಗೆ ಹಾನಿ ಉಂಟಾಗಿದೆ. ಹೀಗಾಗಿ ಕಾರಣ ಕೇಳಿ ಎಲ್ಲ ಸಿಬ್ಬಂದಿಗೂ ನೋಟಿಸ್‌ ನೀಡಿದ್ದೇನೆ. ಸೋಮವಾರ ಸಭೆ ಕರೆದಿದ್ದು, ಮೌಖಿಕವಾಗಿ ಅವರಿಂದ ಉತ್ತರ ಪಡೆಯುವೆ’ ಎಂದು ತಿಳಿಸಿದರು.

‘ಕಲ್ಲುಗಂಬಗಳು ಬಿದ್ದಿರುವುದು ನೋಡಿದರೆ ಈ ಘಟನೆ ಇತ್ತೀಚೆಗೆ ನಡೆದಿರುವುದಲ್ಲ ಎಂಬುದು ಗೊತ್ತಾಗುತ್ತದೆ. ಸುಮಾರು ಎರಡು ವರ್ಷಗಳ ಹಿಂದೆ ಈ ಕಲ್ಲುಗಂಬಗಳನ್ನು ಬೀಳಿಸಿರಬಹುದು. ಈಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರಬಹುದು’ ಎಂದು ಕಾಳಿಮುತ್ತು ಮಾಹಿತಿ ನೀಡಿದರು.

‘ಜಾಗತಿಕ ಮಟ್ಟದಲ್ಲಿ ಹಂಪಿಗೆ ಒಳ್ಳೆಯ ಹೆಸರು ಬಂದಿದೆ. ಅದಕ್ಕೆ ಮಸಿ ಬಳಿಯುವ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿರುವ ಸಾಧ್ಯತೆ ಇದೆ. ಘಟನೆಗೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ. ಘಟನೆಯಿಂದ ಬಹಳ ನೋವಾಗಿದೆ’ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿ ಶಂಕೆಯ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಯುವಕನನ್ನು ಪೊಲೀಸರು ಭಾನುವಾರ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣೆ ಸೇನೆ, ಹಂಪಿ ಮಾರ್ಗದರ್ಶಿಗಳು ಫೆ. 4ರಂದು ಎ.ಎಸ್‌.ಐ. ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT