ಸಿದ್ದರಾಮಯ್ಯ ಹೆಗಲೇರಿತು ಕಾಂಗ್ರೆಸ್ ಗೊಂದಲ ನಿವಾರಣೆ ಹೊಣೆ

7

ಸಿದ್ದರಾಮಯ್ಯ ಹೆಗಲೇರಿತು ಕಾಂಗ್ರೆಸ್ ಗೊಂದಲ ನಿವಾರಣೆ ಹೊಣೆ

Published:
Updated:

ಬೆಂಗಳೂರು: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸ ಮುಗಿಸಿ ಹಿಂದಿರುಗಿದ ನಂತರ ರಾಜ್ಯ ರಾಜಕಾರಣ ಮತ್ತೆ ಕಾವೇರಿದೆ. ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿಯಾದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ‘ಅಸಮಾಧಾನಗೊಂಡಿರುವ ಶಾಸಕರೊಂದಿಗೆ ಶೀಘ್ರ ಮಾತನಾಡಿ, ಭಿನ್ನಮತ ಶಮನಗೊಳಿಸುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.

‘ಬಿಜೆಪಿ ನಾಯಕರು ಪಕ್ಷದ ಹಲ ಶಾಸಕರನ್ನು ಸಂಪರ್ಕಿಸಿದ್ದಾರೆ. ಇದರಿಂದಾಗಿ ಪಕ್ಷ ಹಾಗೂ ಸರ್ಕಾರದಲ್ಲಿ ಗೊಂದಲ ಮೂಡಿದೆ. ಅತೃಪ್ತ ಶಾಸಕರನ್ನ ಕರೆದು ಮಾತನಾಡಿ. ಸಾಧ್ಯವಾದರೆ ಶಾಸಕಾಂಗ ಸಭೆಯನ್ನು ಆದಷ್ಟು ಬೇಗ ಕರೆದು ಸ್ಪಷ್ಟ ಸಂದೇಶ ನೀಡಿ’ ಎಂದು ವೇಣುಗೋಪಾಲ್ ಹೇಳಿದ್ದಾರೆ ಎನ್ನಲಾಗಿದೆ.

‘ಯಾವ್ಯಾವ ಶಾಸಕರನ್ನ ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ? ಪಕ್ಷದ ಶಾಸಕರನ್ನ ಹಿಡಿದಿಟ್ಟುಕೊಳ್ಳುವುದು ಹೇಗೆ? ಬಿಜೆಪಿ ಆಪರೇಷನ್ ಕಮಲಕ್ಕೆ ಏನು ಪ್ರತಿತಂತ್ರ ರೂಪಿಸಬಹುದು? ಜಾರಕಿಹೊಳಿ ಸಹೋದರರ ಅಸಮಾಧಾನ ತಣ್ಣಗಾಗಿಸುವುದು ಹೇಗೆ’ ಎಂಬುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕರು ಸುದೀರ್ಘ ಚರ್ಚೆ ನಡೆಸಿದರು’ ಎಂದು ಮೂಲಗಳು ಹೇಳಿವೆ.

ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಮುಖಂಡರು ವೇಣುಗೋಪಾಲ್ ಅವರೊಡನೆ ಸಮಾಲೋಚನೆ ನಡೆಸಿದರು.

‘ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸ ಮುಗಿಸಿ ವಾಪಸ್ಸಾಗಿದ್ದಾರೆ. ನಾವೆಲ್ಲರೂ ಸಿದ್ದರಾಮಯ್ಯ ಜೊತೆ ಮಾತನಾಡಲು‌ ಬಂದಿದ್ದೇವೆ. ಜಾರಕಿಹೋಳಿ ಸೋದರರ ವಿಷಯ ದೊಡ್ಡ ಸಮಸ್ಯೆಯೇ ಅಲ್ಲ. ಅದು ಒಂದು ಜಿಲ್ಲೆಯ ವಿಷಯ ಅಷ್ಟೇ. ನಮ್ಮ‌ ರಾಜ್ಯ ನಾಯಕರು ಅದನ್ನ ಸರಿಪಡಿಸಿದ್ದಾರೆ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ’ ಎಂದು ವೇಣುಗೋಪಾಲ್ ಈ ಸಂದರ್ಭ ಪ್ರತಿಕ್ರಿಯಿಸಿದರು.

‘ಬಿಜೆಪಿ ನಾಯಕರ ಗೇಮ್ ಪ್ಲಾನ್ ಮಾಡಿದ್ದರು. ಕೇಂದ್ರ ಸರ್ಕಾರದ ತನಿಖಾ ಏಜೆನ್ಸಿಗಳು ಮತ್ತು ಹಣದ ಮೇಲೆ ಬಿಜೆಪಿ ನಾಯಕರು ನಂಬಿಕೆ ಇಟ್ಟಿದ್ದಾರೆ. ಬಿಜೆಪಿ ಬ್ಲಾಕ್ ಮನಿಯಲ್ಲಿ ಆಟ ಆಡುತ್ತಿದೆ. ನಮ್ಮ ಸರ್ಕಾರ ಸೇಫ್ ಆಗಿದೆ. ಯಾರು ಏನು ಮಾಡಿದರೂ ತೊಂದರೆಯಿಲ್ಲ. ನಮ್ಮ ಶಾಸಕರ ಮೇಲೆ ನಮಗೆ ನಂಬಿಕೆ ಇದೆ’ ಎಂದು ವೇಣುಗೋಪಾಲ್ ಭರವಸೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !