ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಕ್ರೀಡಾ ಉತ್ಸವಗಳಿಗೆ ‘ಕೊರೊನಾ’ ಕರಿನೆರಳು

‘ಕೊಡವ ಹಾಕಿ’ ಸೇರಿದಂತೆ ಹಲವು ಕ್ರೀಡಾಕೂಟಗಳು ರದ್ದು, ಬೇರೆ ಸಮುದಾಯ ಕ್ರೀಡಾಕೂಟಗಳು ಅನುಮಾನ
Last Updated 31 ಮಾರ್ಚ್ 2020, 5:39 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು, ‘ಕ್ರೀಡಾ ಜಿಲ್ಲೆ’ಯೆಂದೇ ಹೆಸರುವಾಸಿ. ಸ್ಥಳೀಯ ಮೈದಾನದಲ್ಲಿ ಅರಳಿದ ಅದೆಷ್ಟೋ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಂದಿಗೂ ಮಿಂಚು ಹರಿಸುತ್ತಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು ಮಾತ್ರ ಜಿಲ್ಲೆಯಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನಡೆಯುವ ಕ್ರೀಡೋತ್ಸವಗಳು!

ಆದರೆ, ಈ ವರ್ಷ ‘ಕೋವಿಡ್‌–19’ ಕರಿನೆರಳು ಕ್ರೀಡಾಕೂಟಗಳ ಮೇಲೂ ಬೀರಿದೆ. ಈ ವೇಳೆಗೆ ಕ್ರೀಡಾಕೂಟಕ್ಕೆ ಮುನ್ನುಡಿ ಬರೆಯಬೇಕಿದ್ದ, ಮೈದಾನದಲ್ಲಿ ಭಣಗುಡುವ ದೃಶ್ಯವಿದೆ. ಕ್ರೀಡಾಪಟುಗಳ ಕಲರವ ಇಲ್ಲ. ಅದೆಷ್ಟೋ ಕ್ರೀಡಾ ಉತ್ಸವಗಳು ರದ್ದುಗೊಂಡಿವೆ. ಮತ್ತಷ್ಟು ಉತ್ಸವಗಳು ರದ್ದುಗೊಳ್ಳುವ ಸಾಧ್ಯತೆಯಿದೆ.

ಕ್ರೀಡಾಕೂಟ ಅಲ್ಲ, ಉತ್ಸವ: ಕೊಡಗಿನಲ್ಲಿ ಪ್ರತಿ ಜನಾಂಗಕ್ಕೆ ಒಂದೊಂದು ಕ್ರೀಡಾಕೂಟಗಳು ನಡೆಯುವುದೇ ವಿಶೇಷ. ವಾರಗಟ್ಟಲೆ ಉತ್ಸವದಂತೆ ಕ್ರೀಡಾಕೂಟಗಳು ನಡೆಯುತ್ತವೆ. ಕೊಡವ ಕುಟುಂಬಗಳ ಹಾಕಿ ಉತ್ಸವ ಒಂದು ತಿಂಗಳು ನಡೆದರೆ, ಅರೆಭಾಷೆ ಸಮುದಾಯದ ಕ್ರಿಕೆಟ್‌ ಜಂಬರವೂ 20 ದಿನಗಳ ಕಾಲ ಸಂಭ್ರಮ ಮೇಳೈಸುತ್ತಿತ್ತು.

ಹಾಕಿ ಉತ್ಸವ: ಮುಕ್ಕಾಟಿರ ಕುಟುಂಬದ ಸಾರರ್ಥ್ಯದಲ್ಲಿ ನಡೆಯಬೇಕಿದ್ದ ಕೊಡವ ಕುಟುಂಬಗಳ ಹಾಕಿ ಉತ್ಸವ ಈ ವರ್ಷವೂ ರದ್ದಾಗಿದೆ. ಮುಕ್ಕಾಟಿರ ಹಾಕಿ ನಮ್ಮೆ ಅಧ್ಯಕ್ಷ ಮುಕ್ಕಾಟಿರ ಚೋಟು ಉತ್ತಯ್ಯ ಅವರು ಉತ್ಸವ ರದ್ದು ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ.

2016ರಲ್ಲಿ ಮಡಿಕೇರಿಯ ಎಫ್‌ಎಂಸಿ ಮೈದಾನದಲ್ಲಿ ಶಾಂತೆಯಂಡ, 2017ರಲ್ಲಿ ಬಿದ್ದಾಟಂಡ, 2018ರಲ್ಲಿ ಕುಲ್ಲೇಟಿರ ಹಾಕಿ ಉತ್ಸವ ನಡೆದಿತ್ತು. ಆದರೆ, 2019ರಲ್ಲಿ ಹರಿಹರ ಮುಕ್ಕಾಟಿರ ಕುಟುಂಬಸ್ಥರ ಸಾರಥ್ಯದಲ್ಲಿ ಹಾಕಿ ಉತ್ಸವ ನಡೆಯಬೇಕಿತ್ತು. ಆದರೆ, ಪ್ರಾಕೃತಿಕ ವಿಕೋಪದಿಂದ ಒಂದು ವರ್ಷದ ಮಟ್ಟಿಗೆ ಹಾಕಿ ಉತ್ಸವ ಮುಂದೂಡಿಕೆ ಆಗಿತ್ತು. ಇದೇ ಏಪ್ರಿಲ್‌ 17ರಿಂದ ವಿರಾಜಪೇಟೆ ತಾಲ್ಲೂಕಿನ ಬಾಳಗೋಡು ಮೈದಾನದಲ್ಲಿ ಮುಕ್ಕಾಟಿರ ಹಾಕಿ ಉತ್ಸವ ನಡೆಸಲು ಸಿದ್ಧತೆ ನಡೆದಿತ್ತು. ಕೊರೊನಾ ಹಾವಳಿ ಕಾರಣಕ್ಕೆ, ಕೊಡವ ಕುಟುಂಬಗಳು ಸೇರಿಕೊಂಡು ಆಚರಣೆ ಮಾಡುತ್ತಿದ್ದ ಹಾಕಿ ಉತ್ಸವ ಈ ವರ್ಷವೂ ರದ್ದುಗೊಂಡು ಸಡಗರ ಮಾಯವಾಗಿದೆ.

ಕ್ರಿಕೆಟ್‌ ಜಂಬರದ ಮೇಲೂ ತೂಗುಗತ್ತಿ: ಗೌಡ ಮಹಿಳಾ ಒಕ್ಕೂಟದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಮುಂದೂಡಲ್ಪಟ್ಟಿದೆ. ಕೊಡಗು ಗೌಡ ಯುವ ವೇದಿಕೆ ವತಿಯಿಂದ, ಏಪ್ರಿಲ್ ಕೊನೆಯಲ್ಲಿ ಆಯೋಜಿಸಲು ಉದ್ದೇಶಿಸಿದ್ದ ‘ಗೌಡ ಕ್ರಿಕೆಟ್ ಜಂಬರ - 2020’ ಟೂರ್ನಿ ಮೇಲೂ ಕೊರೊನಾ ಕರಿನೆರಳು ಬೀರಿದೆ. ಕ್ರೀಡಾಕೂಟ ರದ್ದು ನಿರ್ಣಯ ಪ್ರಕಟಿಸದಿದ್ದರೂ ನಿಗದಿತ ದಿನದಂದು ಜಂಬರ ನಡೆಯುವುದು ಅನುಮಾನ ಎನ್ನಲಾಗಿದೆ. ಗೌಡ ಸಮಾಜದ ಮುಖಂಡರು ಜನವರಿಯಲ್ಲೇ ಕ್ರೀಡಾಕೂಟದ ರೂಪುರೇಷೆ ಸಿದ್ಧಪಡಿಸಿದ್ದರು. ಸಮುದಾಯ ತಂಡಗಳಿಗೆ ಫುಟ್‌ಬಾಲ್‌, ಹಗ್ಗಜಗ್ಗಾಟ ಹಾಗೂ ಕಬಡ್ಡಿ ಸೇರಿ ಹಲವು ಕ್ರೀಡೆ ನಡೆಸಲು ಚಿಂತಿಸಿದ್ದರು.

ಗೌಡ ಫುಟ್‌ಬಾಲ್‌ ಟೂರ್ನಿ: ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ 19ರಿಂದ 27ರ ತನಕ ಕೊಡಗು ಗೌಡ ಫುಟ್‌ಬಾಲ್ ಅಕಾಡೆಮಿ ವತಿಯಿಂದ 3ನೇ ವರ್ಷದ ಗೌಡ ಫುಟ್‌ಬಾಲ್ ಟೂರ್ನಿ ನಡೆಸಲು ಸಂಘಟಕರು ತೀರ್ಮಾನಿಸಿದ್ದರು. ಕೊರೊನಾ ವೈರಸ್‌ ಹರಡುವಿಕೆ ಕ್ಷೀಣಿಸಿ, ಎಲ್ಲವೂ ಸುಗಮವಾದರೆ ಈ ಟೂರ್ನಿ ನಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ, ಮೊದಲಿನಷ್ಟು ಸಂಭ್ರಮ ಇರುವುದು ಅನುಮಾನ ಎಂದು ಫುಟ್‌ಬಾಲ್‌ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.

ಅನಿಶ್ಚಿತತೆಯಲ್ಲಿ ಹಲವು ಟೂರ್ನಿ: ಸಿದ್ದಾಪುರದಲ್ಲಿ ನಡೆಯಬೇಕಿದ್ದ ಕೆಪಿಎಲ್‌, ಗೋಣಿಕೊಪ್ಪಲಿನ ಯರವ ಕ್ರೀಡಾಕೂಟ, ಮೂರ್ನಾಡಿನಲ್ಲಿ ಪ್ರತಿ ವರ್ಷ ಆಯೋಜಿಸುತ್ತಿದ್ದ ಮರಾಠ ಕ್ರೀಡೋತ್ಸವ, ಮುಸ್ಲಿಂ ಫುಟ್‌ಬಾಲ್‌, ಕ್ರಿಕೆಟ್‌ ಟೂರ್ನಿ, ತುಳು ಕ್ರೀಡಾಕೂಟ ಆಯೋಜಿಸುವ ಉತ್ಸಾಹವು ಕಂಡುಬರುತ್ತಿಲ್ಲ.

ಬ್ಯಾಡ್ಮಿಂಟನ್‌ ಟೂರ್ನಿ ಅನುಮಾನ: ನಾಪೋಕ್ಲು ಕೊಡವ ಸಮಾಜ ಸ್ಪೋರ್ಟ್ಸ್‌, ಕಲ್ಚರಲ್ ಮತ್ತು ರಿಕ್ರಿಯೇಶನ್‌ ಅಸೋಸಿಯೇಷನ್ ವತಿಯಿಂದ ಏ.10, 11 ಮತ್ತು 12ರಂದು ನಾಪೋಕ್ಲು ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ‘ಕೊಡವ ಮುಕ್ತ ಬ್ಯಾಡ್ಮಿಂಟನ್‌ ಪಂದ್ಯಾವಳಿ‘ ನಡೆಯಬೇಕಿತ್ತು. ಆದರೆ, ದೇಶವೇ ಲಾಕ್‌ಡೌನ್‌ ಆಗಿದ್ದು, ಬ್ಯಾಡ್ಮಿಂಟನ್‌ ಟೂರ್ನಿಯೂ ನಿಗದಿತ ದಿನದಂದು ನಡೆಯುತ್ತಿಲ್ಲ. ಟೂರ್ನಿಯ ಲಾಂಛನವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು.

ಕೊಡವ ಕುಟುಂಬಗಳ ನಡುವೆ ಬಾಂಧವ್ಯ ವೃದ್ಧಿಸಲು ಟೂರ್ನಿ ಆಯೋಜಿಸಲಾಗಿದೆ. ಸಮುದಾಯದ ಸಾಕಷ್ಟು ಯುವಕರ ಕ್ರೀಡಾ ಪ್ರತಿಭೆ ಅನಾವರಣಕ್ಕೂ ಉತ್ತಮ ವೇದಿಕೆ ಆಗಲಿದೆ ಎಂದು ಮುಖಂಡ ಬಿದ್ದಾಟಂಡ ತಮ್ಮಯ್ಯ ತಿಳಿಸಿದ್ದರು. ಆದರೆ, ಈ ಟೂರ್ನಿಯ ಮೇಲೂ ಕೊರೊನಾ ಕರಿನೆರಳು ಬೀರಿದೆ.

ಮನೆ ಸೇರಿದ ಕ್ರೀಡಾಪಟುಗಳು: ಪ್ರತಿನಿತ್ಯ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಜಿಲ್ಲೆಯ ಕ್ರೀಡಾಪಟುಗಳು ಮನೆ ಸೇರಿದ್ದಾರೆ. ‘ಮೇ 15ರ ಬಳಿಕ ಕೊಡಗಿನಲ್ಲಿ ಮಳೆ ಆರಂಭವಾಗಲಿದೆ. ಈಗ ಕೊರೊನಾ ಪರಿಣಾಮ ಮನೆ ಸೇರಿದ್ದೇವೆ. ಮಳೆಗಾಲ ಆರಂಭವಾದರೆ ಆಗಲೂ ಮನೆಯಲ್ಲೇ ಇರಬೇಕು. ದೈಹಿಕ ಸಾಮರ್ಥ್ಯ ಹೇಗೆ ಕಾಪಾಡಿಕೊಳ್ಳುವುದು’ ಎಂದು ಕ್ರೀಡಾಪಟು ರತನ್‌ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಟ್ರೋಫಿ ಕೇಳೋರಿಲ್ಲ!: ಮಾಲೀಕರ ಅಳಲು ಏಪ್ರಿಲ್‌, ಮೇನಲ್ಲಿ ಸಾಕಷ್ಟು ಟೂರ್ನಿಗಳು ನಡೆಯುವ ಕಾರಣಕ್ಕೆ, ಮಡಿಕೇರಿಯ ಸ್ಪೋರ್ಟ್ಸ್‌ ವರ್ಲ್ಡ್‌ ಮಾಲೀಕರು ಸಾಕಷ್ಟು ಟ್ರೋಫಿ ತರಿಸಿ ದಾಸ್ತಾನು ಮಾಡಿದ್ದರು. ಆದರೆ, ಯಾರೊಬ್ಬರೂ ಟ್ರೋಫಿ ಕೇಳುತ್ತಿಲ್ಲ. ಫೋನ್‌ ಮೂಲಕವೂ ಬುಕ್‌ ಮಾಡುತ್ತಿಲ್ಲ. ಅಂಗಡಿ ಬಾಗಿಲು ಮುಚ್ಚಿ ವಾರ ಕಳೆದಿದೆ ಎಂದು ಮಾಲೀಕರು ನೋವು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT