ಗುರುವಾರ , ಡಿಸೆಂಬರ್ 12, 2019
26 °C
ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಮಂದಿ ನೌಕರರ ಆಗ್ರಹ

ಎನ್‌ಪಿಎಸ್‌ ರದ್ದು‍ಪಡಿಸಿ; ಒಪಿಎಸ್ ಪುನರಾರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಯೋಜನೆ (ಒಪಿಎಸ್) ಪುನರಾರಂಭಿಸುವಂತೆ ಆಗ್ರಹಿಸಿ ಸಾವಿರಾರು ಎನ್‌ಪಿಎಸ್ ನೌಕರರು ಬುಧವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧೆಡೆಯಿಂದ ತಂಡಗಳಾಗಿ ಬಂದಿದ್ದ ನೌಕರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಾಣವನ್ನು ಬೇಕಾದರೂ ಕೊಡುತ್ತೇವೆ; ಪಿಂಚಣಿ ಬಿಟ್ಟುಕೊಡುವುದಿಲ್ಲ’. ‘ಪಿಂಚಣಿ ನಮ್ಮ ಹಕ್ಕು’ ಎಂಬಿತ್ಯಾದಿ ಘೋಷಣೆಗಳ ಮೂಲಕ ಹಕ್ಕೊತ್ತಾಯ ಮಂಡಿಸಿದರು.

‘2006ರಿಂದ ಜಾರಿಗೆ ಬಂದಿರುವ ಎನ್‌ಪಿಎಸ್ ಯೋಜನೆ ನೌಕರರಿಗೆ ಮಾರಕವಾಗಿದೆ. ಇದರಿಂದ ನೌಕರರಿಗಾಗಲೀ ಕುಟುಂಬದವರಿಗಾಗಲೀ ಪಿಂಚಣಿ ದೊರೆಯುವ ಖಾತ್ರಿ ಇಲ್ಲ. ಇದರಿಂದಾಗಿ ಅಭದ್ರತೆಯಲ್ಲಿಯೇ ಇರುವಂತಾಗಿದೆ’ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್‌ ತಿಳಿಸಿದರು.

‘ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ರದ್ದುಪಡಿಸಲಾಗುವುದು ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಇದನ್ನು ಅನುಷ್ಠಾನಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ಸಮಿತಿಗೆ ತೀವ್ರ ವಿರೋಧ:

‘ಎನ್‌ಪಿಎಸ್‌ನಲ್ಲಿ ಮಾರ್ಪಾಡು ಹಾಗೂ ಬದಲಾವಣೆ ಮಾಡಲು ಅಧಿಕಾರಿಗಳ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಯೋಜನೆಯನ್ನೇ ರದ್ದುಪಡಿಸಲು ಮೂರು ವರ್ಷಗಳಿಂದಲೂ ಹೋರಾಡುತ್ತಿದ್ದೇವೆ. ಹೀಗಿರುವಾಗ, ಮಾರ್ಪಾಡಿಗೆ ಮುಂದಾಗಿರುವುದು ಎಷ್ಟು ಸರಿ? ಸಹಸ್ರಾರು ನೌಕರರ ಬದುಕಿಗೆ ಮಾರಕವಾಗಿರುವ ಯೋಜನೆಯನ್ನು ತಕ್ಷಣವೇ ರದ್ದುಪಡಿಸಬೇಕು’ ಎಂದು  ಒತ್ತಾಯಿಸಿದರು.

ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಸರ್ಕಾರಿ ನೌಕರರು ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿಯನ್ನು ಈ ನಿಟ್ಟಿನಲ್ಲಿ ಗಮನಸೆಳೆಯಲಾಗುವುದು. ನೌಕರರ ಹೋರಾಟಕ್ಕೆ ಬಿಜೆಪಿಯು ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ತಿಳಿಸಿದರು.

ಶಾಸಕರಾದ ಗೋವಿಂದ ಕಾರಜೋಳ, ರೇಣುಕಾಚಾರ್ಯ, ರವಿಕುಮಾರ್, ಅರುಣ ಶಹಾಪುರ, ಕೆ.ಟಿ. ಶ್ರೀಕಂಠೇಗೌಡ, ಬೋಜೇಗೌಡ, ಸಿ.ಎಸ್. ನಿಂಬಣ್ಣವರ ಪಾಲ್ಗೊಂಡು ಬೆಂಬಲ ಸೂಚಿಸಿದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಹಿಂದೆ ನಿವೃತ್ತಿಯಾದವರಿಗೆ ಸಿಗುವ ಎಲ್ಲ ಸೌಲಭ್ಯ 2006ರ ನಂತರ ನೇಮಕವಾದವರಿಗೂ ಸಿಗುವಂತಾಗಬೇಕು. ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುವುದು. ನಿಮ್ಮೊಂದಿಗೆ ನಾವು ಇದ್ದೇವೆ’ ಎಂದು ಭರವಸೆ ನೀಡಿದರು.

ಸಂಜೆ ಸಂಘದ ಕೆಲವು ಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಬಳಿಗೆ ತೆರಳಿತ್ತು. ‘ಎನ್‌ಪಿಎಸ್ ರದ್ದುಪಡಿಸುವ ಕುರಿತು 2 ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಹೀಗಾಗಿ, ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ’ ಎಂದು ಪದಾಧಿಕಾರಿಗಳು ಪ್ರಕಟಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು