ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರ ಗುಹಾರಂಥ ಬುದ್ದಿಗೇಡಿಗಳಿಗೆ ಪಾಠ ಕಲಿಸಬೇಕಿದೆ: ಎನ್‌.ರವಿಕುಮಾರ್‌

Last Updated 28 ಡಿಸೆಂಬರ್ 2019, 11:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ’ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಗೊಂದಲ, ಅಪಪ್ರಚಾರ ಮಾಡುತ್ತಿರುವ ರಾಮಚಂದ್ರಗುಹಾ ಅವರಂಥ ಬುದ್ದಿಗೇಡಿಗಳಿಗೆ ಸರಿಯಾದ ಪಾಠ ಕಲಿಸಬೇಕಾದ ಅಗತ್ಯವಿದೆ‘ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಿಜೆಪಿ ವಿಭಾಗ ಮಟ್ಟದ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಯ್ದೆಯನ್ನು ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟದಲ್ಲಿ ಅಲ್ಪಸಂಖ್ಯಾತ ಬಂಧುಗಳ ಪಾತ್ರ ಇಲ್ಲ. ಕಾಂಗ್ರೆಸ್‌, ಕಮ್ಯುನಿಷ್ಠ್‌, ಪ್ರಗತಿಪರರು ಮತ್ತು ಸುದ್ದಿಜೀವಿಗಳದ್ದೇ ಶೇ 99ರಷ್ಟು ತಪ್ಪಿದೆ ಎಂದು ಆರೋಪಿಸಿದರು.

ಕನಸು, ಮನಸ್ಸಿನಲ್ಲೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿಲ್ಲ. ಭಾರತದ 130 ಕೋಟಿ ಜನರಿಗೆ ಸಂಬಂಧಪಡದ ಅನಗತ್ಯ ವಿಚಾರಕ್ಕೆ ದೇಶದಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳ ಬೇಡಿಕೆ ಏನು. ಪಾಕಿಸ್ತಾನ, ಅಪಘಾನಿಸ್ಥಾನದ ಮುಸ್ಲಿಮರನ್ನು ಈ ಕಾಯ್ದೆಯಲ್ಲಿ ಸೇರಿಸಿ ಎಂಬುದು ಕಾಂಗ್ರೆಸ್‌ನ ಬೇಡಿಕೆಯಾಗಿದೆಯೇ ಎಂದು ಪ್ರಶ್ನಿಸಿದ ಅವರು, ಯಾರು ಬೇಕಾದರೂ ಈ ದೇಶದಲ್ಲಿ ಬಂದು ಇರಲು ಭಾರತ ಧರ್ಮಛತ್ರವಲ್ಲ ಎಂದರು.

ಮುಸ್ಲಿಮರನ್ನು ಕಾಂಗ್ರೆಸ್ ತನ್ನ ಮತಬ್ಯಾಂಕ್‌ ಮಾಡಿಕೊಳ್ಳುತ್ತಿದೆಯೇ ಹೊರತು ಅವರನ್ನು ಮನುಷ್ಯರೆಂದು ಇದುವರೆಗೂ ಪರಿಗಣಿಸಿಲ್ಲ. ರಾಷ್ಟ್ರೀಯ ಹಿತಕ್ಕಿಂತ ವೋಟ್‌ ಬ್ಯಾಂಕ್‌ ರಾಜಕಾರಣವೇ ಕಾಂಗ್ರೆಸ್‌ಗೆ ಮುಖ್ಯವಾಗಿದೆ ಎಂದು ಟೀಕಿಸಿದರು.

ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮನಮೋಹನಸಿಂಗ್‌ ಅವರು ಒಪ್ಪಿಕೊಂಡಿರುವ ಪೌರತ್ವ ಕಾಯ್ದೆಗೆ ಇದೀಗ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ಗೆ ಏಕ ನಿಲುವೆಂಬುದೇ ಇಲ್ಲ. ಅದರದ್ದು ದ್ವಂದ್ವ ನಿಲುವು. ನೆಹರೂ ಜಾರಿಗೆ ತಂದಿದ್ದ ಕಾಯ್ದೆಯನ್ನು ಎತ್ತಿಹಿಡಿಯ ಕಾರ್ಯವನ್ನು ಈಗಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂಬುದನ್ನು ಕಾಂಗ್ರೆಸ್‌ ಮುಖಂಡರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಮೋದಿ ಆಧುನಿಕ ಸರ್ದಾರ್‌ ಪಟೇಲ್‌:

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಧುನಿಕ ಭಸ್ಮಾಸುರ’ ಎಂಬ ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿಕೆಯನ್ನು ಖಂಡಿಸಿದ ಅವರು, ನರೇಂದ್ರ ಮೋದಿ ಅವರು ಆಧುನಿಕ ಸರ್ದಾರ್‌ ವಲಭಬಾಯ್‌ ಪಟೇಲ್‌ ಆಗಿದ್ದಾರೆ. ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಾಗೃತಿ ಅಭಿಯಾನ:

ಸಭೆಗೂ ಮುನ್ನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್‌, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜನವರಿ 1ರಿಂದ 15ರ ವರೆಗೆ ರಾಜ್ಯದಲ್ಲಿ ಬಿಜೆಪಿ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಈ ಅಭಿಯಾನದ ಅಂಗವಾಗಿ ರಾಜ್ಯದ 300 ಮಂಡಲಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ತರಬೇತಿ, ಸಂವಾದ ನಡೆಸಲಾಗುವುದು. ಬಳಿಕ ರಾಜ್ಯದ 30 ಲಕ್ಷ ಮನೆಗಳಿಗೆ ತೆರಳಿ ಕಾಯ್ದೆ ಕುರಿತು ಸುಮಾರು 1 ಕೋಟಿ ಜನರಿಗೆ ಅರಿವು ಮೂಡಿಸಲಾಗುವುದು ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರ‍್ಯಾಲಿ ನಡೆಸಲಾಗುವುದು. ಬಳಿಕ ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಕಲಬುರ್ಗಿ ಮತ್ತು ಸಿಂದನೂರು ಸೇರಿದಂತೆ ರಾಜ್ಯದ ಐದು ಸ್ಥಳಗಳಲ್ಲಿ ಬೃಹತ್‌ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಮತ್ತಿತರರ ಸಾಮಾಜಿಕ ಮಾಧ್ಯಮಗಳ ಮೂಲಕವೂ ಸುಮಾರು 1 ಕೋಟಿ ಜನರಲ್ಲಿ ಈ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಶಾಸಕರಾದ ಬಿ.ಸಿ.ಪಾಟೀಲ, ಅರುಣಕುಮಾರ ಪೂಜಾರ, ರಾಮಣ್ಣ ಲಮಾಣಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮುಖಂಡರಾದ ಶಿವರಾಜ ಸಜ್ಜನ, ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಜಯತೀರ್ಥ ಕಟ್ಟಿ, ನಾಗೇಶ ಕಲಬುರ್ಗಿ, ಈರಣ್ಣ ಜಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT