ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ: ಬಾಂಗ್ಲಾ ಹಿಂದೂಗಳು ಸುರಕ್ಷಿತ

ದಶಕಗಳ ಹಿಂದೆ ರಾಯಚೂರಿನ ಸಿಂಧನೂರಿಗೆ ಬಂದ ಬಾಂಗ್ಲಾದೇಶೀಯರು ಈಗಲೂ ನಿರಾಶ್ರಿತರೇ
Last Updated 4 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಸಿಂಧನೂರು: ಬಾಂಗ್ಲಾದೇಶಿ ನಿರಾಶ್ರಿತರ ಕೇಂದ್ರವೊಂದು ಸಿಂಧನೂರಿನಲ್ಲಿದೆ. ಇದು ಭಾರತದಲ್ಲಿರುವ ಇಂತಹ ಬಹುದೊಡ್ಡ ಕೇಂದ್ರ. ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಯಾವುದೇ ಮಾತು ಇಲ್ಲಿ ಎಲ್ಲರ ಗಮನ ಸೆಳೆಯುತ್ತದೆ.

ಈ ಕೇಂದ್ರದಲ್ಲಿ ಇರುವವರೆಲ್ಲರೂ ಹಿಂದೂಗಳು ಮತ್ತು ಇವರಿಗೆ ಕೇಂದ್ರ ಸರ್ಕಾರವೇ ಈ ಕೇಂದ್ರವನ್ನು ತೆರೆದು ಕೊಟ್ಟಿದೆ. ಹಾಗಾಗಿ, ಎನ್‌ಆರ್‌ಸಿಯಿಂದ ತಮಗೆ ಯಾವುದೇ ತೊಂದರೆ ಆಗದು ಎಂಬ ವಿಶ್ವಾಸ ಅವರಲ್ಲಿ ಇದೆ.

ಆದರೆ ತುರ್ತು ಗಮನ ಹರಿಸ ಬೇಕಾದ ಹಲವು ಸಮಸ್ಯೆಗಳು ಅವರಿಗೆ ಇವೆ: ಮೂರು ದಶಕಗಳ ಹಿಂದೆ ಈ ಜನರಿಗೆ ಪೌರತ್ವ ನೀಡಲಾಗಿದೆ. ಅವರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ಈ ಜಮೀನಿನ ದಾಖಲೆಪತ್ರಗಳು ಈಗಲೂ ಸಿಕ್ಕಿಲ್ಲ. ಹಾಗೆಯೇ, ಐದು ದಶಕಗಳಿಂದ ಅವರು ನೆಲೆಯಾಗಿರುವ ಈ ಪ್ರದೇಶವನ್ನು ಕಂದಾಯ ಗ್ರಾಮ ಗಳೆಂದೂ ಘೋಷಿಸಲಾಗಿಲ್ಲ. ಹಾಗಾಗಿ, ಈಗಲೂ ಈ ಜನರು ‘ನಿರಾಶ್ರಿತರೇ’ ಆಗಿದ್ದಾರೆ.

ಬಾಂಗ್ಲಾದೇಶದಿಂದ ಇಲ್ಲಿಗೆ ಬಂದ ಮೊದಲಿಗರಲ್ಲಿ ಅಮೂಲ್ಯ ದತ್ತಾ ಅವರೂ ಒಬ್ಬರು. 68 ವರ್ಷ ವಯಸ್ಸಿನ ಅವರು ಆರ್‌ಎಚ್‌–3 ಶಿಬಿರದಲ್ಲಿ ಇದ್ದಾರೆ. 1971ರ ಯುದ್ಧದ ಸಂದರ್ಭದಲ್ಲಿ, ಭಾರತ, ಪಾಕಿಸ್ತಾನ ಮತ್ತು ಆಗಿನ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ನಡುವಣ ಸಂಘರ್ಷ ತೀವ್ರಗೊಂಡಾಗ ಕೇಂದ್ರ ಸರ್ಕಾರವು 727 ಕುಟುಂಬಗಳನ್ನು ಇಲ್ಲಿ ನೆಲೆಯೂರಿಸಿತ್ತು.

ಯುದ್ಧದ ಸಂದರ್ಭದಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗಿತ್ತು. ಅದಕ್ಕೆ ಧಾರ್ಮಿಕ ಕಾರಣಗಳಿದ್ದವು. ಹಾಗಾಗಿ, ಕ್ಷತ್ರಿಯ ಮತ್ತು ನಾಮ ಶೂದ್ರ ಸಮುದಾಯಕ್ಕೆ ಸೇರಿದ ಈ ಕುಟುಂಬ ಗಳನ್ನು ಸಿಂಧೂನೂರು ಸಮೀಪ ಸುಮಾರು ಒಂದು ವರ್ಷ ಇರಿಸಲಾಗಿತ್ತು. ಬಳಿಕ ಅವರನ್ನು ಈಗ ಅವರು ಇರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ದುರ್ಗಾ ಪೂಜೆಗಾಗಿ ಸಿದ್ಧತೆಗಳು ಇಲ್ಲಿ ಭರದಿಂದ ನಡೆದಿದೆ. ಅದರ ನಡು ವಲ್ಲಿಯೇ ಅಮರೇಶ್‌ ಮಲಿಕ್‌ ಅವರು ತಮ್ಮ ಕಳವಳವನ್ನು ಮುಂದಿಟ್ಟರು. ‘ನನ್ನ ಹೆತ್ತವರು ಇಲ್ಲಿ ಬಂದ ಕಾಲದಲ್ಲಿ ಈ ಕಾಲುವೆಯಲ್ಲಿ 20–30 ದಿನ ಬಿಟ್ಟು ವರ್ಷವಿಡೀ ನೀರು ಹರಿಯುತ್ತಿತ್ತು. ಈಗ, ನಾಲ್ಕು ತಿಂಗಳು ಮಾತ್ರ ಕಾಲುವೆಯಲ್ಲಿ ನೀರಿರುತ್ತದೆ’ ಎನ್ನುತ್ತಾರೆ ಅಮರೇಶ್‌.

ನೀರಿನ ಕೊರತೆಯಿಂದಾಗಿ ಬೇಸಾಯವನ್ನು ನೆಚ್ಚಿಕೊಳ್ಳುವಂತಿಲ್ಲ. ಭೂದಾಖಲೆ ಗಳು ಇಲ್ಲದಿರುವ ಕಾರಣ ಅನಿಶ್ಚಿತ ಸ್ಥಿತಿಯೂ ಮುಂದುವರಿದಿದೆ. ‘ಐದು ದಶಕಗಳಿಂದ ಇಲ್ಲಿದ್ದೇವೆ. ಈವರೆಗೆ ಭೂ ದಾಖಲೆ ಸಿಕ್ಕಿಲ್ಲ ಮತ್ತು ಈ ಪ್ರದೇಶವನ್ನು ಕಂದಾಯ ಗ್ರಾಮ ಎಂದು ಗುರುತಿಸಲಾಗಿಲ್ಲ’ ಎಂದು ಅವರು ಹೇಳುತ್ತಾರೆ.

ಗಡಿ ಚೀಟಿ ಇಲ್ಲ

ಬಾಂಗ್ಲಾದೇಶದಿಂದ ಗಡಿ ದಾಟಿ ಬಂದಾಗ ಎಲ್ಲರಿಗೂ ‘ಗಡಿ ಚೀಟಿ’ ನೀಡಲಾ ಗಿತ್ತು. ಆದರೆ, ಕೆಲವರು ಅದನ್ನು ಕಳೆದುಕೊಂಡಿದ್ದಾರೆ. ‘ನಮ್ಮನ್ನು ಮೊದಲಿಗೆ ಉತ್ತರ ಪ್ರದೇಶದಲ್ಲಿ ಇರಿಸಲಾಗಿತ್ತು. ಬಳಿಕ ಇಲ್ಲಿಗೆ ಕರೆತರಲಾಯಿತು. ನಮ್ಮಲ್ಲಿ ಈಗ ಮತದಾರರ ಗುರುತಿನ ಚೀಟಿ, ಪೌರತ್ವ ಪ್ರಮಾಣಪತ್ರ ಮತ್ತು ಇತರ ದಾಖಲೆಗಳು ಇವೆ. ಆದರೆ, ಇಲ್ಲಿಗೆ ಬರುವಾಗ ಕೆಲವರು ಗಡಿಚೀಟಿ ಕಳೆದುಕೊಂಡಿದ್ದಾರೆ. ಆದರೆ, ನಾವೆಲ್ಲರೂ ಹಿಂದೂಗಳಾಗಿರುವುದರಿಂದ ನಮಗೆ ಚಿಂತೆ ಇಲ್ಲ. ಮುಸ್ಲಿಮರಿಗೆ ಮಾತ್ರ ಚಿಂತೆ’ ಎಂದು ಪ್ರಸನ್‌ ಹೇಳುತ್ತಾರೆ.

* ನಾವು ಹಿಂದೂಗಳು. ಎನ್‌ಆರ್‌ಸಿಯಿಂದ ನಮಗೆ ತೊಂದರೆ ಆಗದು ಎಂದು ಗೃಹಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. ನಾವು ನುಸುಳುಕೋರರಲ್ಲ

ಅಮೂಲ್ಯ ದತ್ತಾ,ಆರ್‌ಎಚ್‌–3 ಶಿಬಿರದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT