ಶನಿವಾರ, ಡಿಸೆಂಬರ್ 14, 2019
25 °C

ಎನ್‌ಆರ್‌ಸಿ ಜಾರಿ ಕುರಿತ ಅಮಿತ್‌ ಶಾ ಹೇಳಿಕೆ: ಆತಂಕದಲ್ಲಿ ಮುಸ್ಲಿಂ ಸಮುದಾಯ

ಅಕ್ರಂ ಮೊಹಮ್ಮದ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಪ್ರತಿಯೊಬ್ಬ ನುಸುಳುಕೋರರನ್ನೂ ದೇಶದಿಂದ ಹೊರಗಟ್ಟುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ ಬೆನ್ನಲ್ಲೇ, ಮುಸ್ಲಿಂ ಸಮುದಾಯದಲ್ಲಿ ಕಳವಳ ಉಂಟಾಗಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ನಿವಾಸಿಗಳ ದಾಖಲೆಗಳನ್ನು ಸಂಗ್ರಹಿಸಲು ಮಸೀದಿ ಅಡಿಯಲ್ಲಿರುವ ಜಮಾತ್‌ಗಳು ಪ್ರಕ್ರಿಯೆ ಆರಂಭಿಸಿವೆ.

ಸ್ಥಳೀಯ ಮಸೀದಿಗಳು ಪೌರತ್ವ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಎಲ್ಲ ಜಿಲ್ಲೆಗಳಲ್ಲಿರುವ ವಕ್ಫ್ ಘಟಕಗಳಿಗೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ (ಕೆಎಸ್‌ಬಿಡಬ್ಲ್ಯು) ನಿರ್ದೇಶನ ನೀಡಿದೆ. 2021ರಲ್ಲಿ ನಡೆಯಲಿರುವ ಜನಗಣತಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್‌ಆರ್‌ಸಿ) ಮೊದಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಲು ಮತ್ತು ಈ ನಿಟ್ಟಿನಲ್ಲಿ ಅನಕ್ಷರ‌ಸ್ಥರಿಗೆ ನೆರವು ನೀಡುವಂತೆಯೂ ನಿರ್ದೇಶನ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲೆ ಚಾರ್ಮಾಡಿ ಮಸೀದಿ ಸಮಿತಿಯ ಅಧ್ಯಕ್ಷ ಯು. ಹಸನಬ್ಬ, ‘ನಮ್ಮ ಮಸೀದಿಗೆ ಸೇರಿದವರಲ್ಲಿ ಯಾರೂ ಹೊರಗಿನವರು ಇಲ್ಲ. ಆದರೂ ಜಮಾತ್‌ ವ್ಯಾಪ್ತಿಯ ಎಲ್ಲ ಮನೆಗಳು ಮತ್ತು ನಿವಾಸಿಗಳ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

‘ಜಿಲ್ಲೆಯಲ್ಲಿ ಸಮುದಾಯದ ಒಳಗಿ
ರುವ ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸಲು ಈಗಾಗಲೇ ಹಲವು ಮಸೀದಿಗಳು ಕ್ರಮ ಆರಂಭಿಸಿವೆ. ಶುಕ್ರವಾರದ ಪ್ರಾರ್ಥನೆಯ ಬಳಿಕ ಇದಕ್ಕೆ ಸಂಬಂಧಿಸಿದಂತೆ ಸಭೆ ಸೇರಿ ಏನೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದು ಹೇಳಿದರು.

ಉಜಿರೆ ಜಮಾತ್‌ ಕಮಿಟಿಯ ಪದಾಧಿಕಾರಿಯೊಬ್ಬರು ಮಾತನಾಡಿ, ‘ನಮ್ಮ ಜಮಾತ್‌ನ ವ್ಯಾಪ್ತಿಗೆ ಬರುವ ಎಲ್ಲ 670 ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸಲು ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲದೆ,  ವಕ್ಫ್ ಮಂಡಳಿ ಕೂಡಾ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುತ್ತಿದೆ’ ಎಂದರು.

ವಕ್ಫ್ ಬೋರ್ಡ್‌ ವಿಶೇಷ ಅಧಿಕಾರಿ ಮುಜಿಬುಲ್ಲಾ ಜಫಾರಿ ಮಾತನಾಡಿ, ‘ವಕ್ಫ್‌ ಜೊತೆ ಸಂಯೋಜಿತಗೊಂಡಿರುವ ಎಲ್ಲ ಮಸೀದಿಗಳಿಗೆ ನವೆಂಬರ್‌ನಲ್ಲಿ ಸುತ್ತೋಲೆಯನ್ನು ಕಳುಹಿಸಿ, ಎನ್‌ಆರ್‌ಸಿ ಮತ್ತು ಜನಗಣತಿ ಹಿನ್ನೆಲೆ
ಯಲ್ಲಿ ಪೌರತ್ವ ಸಾಬೀತುಪಡಿಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಮನವಿ ಮಾಡಲಾಗಿದೆ’ ಎಂದರು.

‘ಮಸೀದಿ ಆಡಳಿತ ಮಂಡಳಿಗಳು, ಎಲ್ಲ ಕುಟುಂಬಗಳ ಪಟ್ಟಿ, ಪ್ರತಿ ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆ, ಆ ಎಲ್ಲ ಸದಸ್ಯರ ಗುರುತಿನ ದಾಖಲೆಗಳನ್ನು ಗೆಜೆಟೆಡ್‌ ಅಧಿಕಾರಿಯಿಂದ ದೃಢೀಕರಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಪೌರತ್ವ ಸಾಬೀತುಪಡಿಸಲು ಅಗತ್ಯವಾದ ದಾಖಲೆ
ಗಳಿಗೆ ಆದ್ಯತೆ ನೀಡಬೇಕು’ ಎಂದರು.

ಮೂಲಗಳ ಪ್ರಕಾರ, ದಾಖಲೆಗಳನ್ನು ಸಂಗ್ರಹಿಸುವ ಕೆಲಸವನ್ನು 2021ರಲ್ಲಿ ನಡೆಯಲಿರುವ ಜನಗಣತಿಗೂ ಮುನ್ನ ಪೂರ್ಣಗೊಳಿಸಲು ಮಸೀದಿಗಳು ಆಸಕ್ತಿ ವಹಿಸಬೇಕು. ಯಾಕೆಂದರೆ, 2020ರ ಎರಡನೇ ಅವಧಿಯಲ್ಲಿ ಗಣತಿ ‍ಪ್ರಕ್ರಿಯೆ ನಡೆಯುತ್ತದೆ. ಎನ್‌ಆರ್‌ಸಿ ಕಾರಣಕ್ಕೆ, ಗಣತಿಯ ಮಾರ್ಗಸೂಚಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಕಳೆದ ಎರಡು ವರ್ಷಗಳಲ್ಲಿ ಉಂಟಾದ ಪ್ರವಾಹದಿಂದ ಅನೇಕ ಕುಟುಂಬಗಳು ತಮ್ಮ ದಾಖಲೆಗಳನ್ನು ಕಳೆದುಕೊಂಡಿವೆ. ಮೂಲ ದಾಖಲೆಗಳನ್ನು ಮರಳಿ ಸಂಗ್ರಹಿಸಿ, ನೀಡಲು ಪ್ರಯತ್ನಗಳು ನಡೆಯುತ್ತಿವೆ ಎಂದೂ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು