ಒಡಿಶಾ ಕಾರ್ಮಿಕರ ರಕ್ಷಣೆ

7
ಇಟ್ಟಿಗೆ ಕಾರ್ಖಾನೆಯಲ್ಲಿ ಐದು ತಿಂಗಳಿನಿಂದ ಜೀತ

ಒಡಿಶಾ ಕಾರ್ಮಿಕರ ರಕ್ಷಣೆ

Published:
Updated:
Deccan Herald

ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿ ಶಿವನೇಹಳ್ಳಿ ಸಮೀಪದ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕಿದ್ದ ಒಡಿಶಾದ ಎರಡು ಕುಟುಂಬಗಳ 9 ಮಂದಿಯನ್ನು ರಕ್ಷಿಸಲಾಗಿದೆ.

ಇಬ್ಬರು ದಂಪತಿಗಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂರು ಚಿಕ್ಕ ಮಕ್ಕಳು ರಕ್ಷಣೆಗೆ ಒಳಗಾದವರು.

‘ಕೆಲಸ ಕೊಡಿಸುವುದಾಗಿ ಮಧ್ಯವರ್ತಿಯೊಬ್ಬ ಐದು ತಿಂಗಳ ಹಿಂದೆ ನಮ್ಮನ್ನು ಒಡಿಶಾದಿಂದ ಕರೆತಂದ. ಗುಬ್ಬಿ ರೈಲು ನಿಲ್ದಾಣದಲ್ಲಿ ಕುಟುಂಬಗಳಿಗೆ ತಲಾ ₹ 10 ಸಾವಿರ ನೀಡಿದ. ನಮ್ಮನ್ನು ಇಟ್ಟಿಗೆ ಕಾರ್ಖಾನೆ ಕೆಲಸಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸಂಬಳ
ನೀಡಲಿಲ್ಲ. ಸಂಬಳ ಕೇಳಿದಾಗ ಮಾರಾಟ ಮಾಡಿದವನನ್ನು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಜೀತ ಮಾಡಿಕೊಂಡಿರಿ ಎಂದರು’ ಎಂದು ಒಡಿಯಾ ಭಾಷೆಯಲ್ಲಿ ಕಾರ್ಮಿಕರು ಅಳಲು ತೋಡಿಕೊಂಡರು.

ಇಂಟರ್ ನ್ಯಾಷನಲ್‌ ಜಸ್ಟೀಸ್ ಮಿಷನ್ ಸ್ವಯಂ ಸೇವಾ ಸಂಸ್ಥೆಯ ರಾಜು ಕಾರ್ಮಿಕರ ಮಾತುಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು.

ಕಾರ್ಖಾನೆಯವರಿಗೆ ತಿಳಿಯದಂತೆ ಕುಟುಂಬದ ಸದಸ್ಯರೊಬ್ಬರು ಒಡಿಶಾದಲ್ಲಿರುವ ತಮ್ಮ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಆ ರಾಜ್ಯದಲ್ಲಿರುವ ಇಂಟರ್ ನ್ಯಾಷನಲ್‌ ಜಸ್ಟೀಸ್ ಮಿಷನ್ ಸ್ವಯಂ ಸೇವಾ ಸಂಸ್ಥೆಗೆ ವಿಷಯ ತಿಳಿಸಿದ್ದಾರೆ. ಅಲ್ಲಿಂದ ಸಂಸ್ಥೆಯ ಬೆಂಗಳೂರು ಕಚೇರಿಗೆ ಮಾಹಿತಿ ರವಾನೆಯಾಗಿದೆ.

 ‘ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಕೊಠಡಿಯೊಂದರಲ್ಲಿ ಕಾರ್ಮಿಕರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಣ್ಣ ತಿಳಿಸಿದರು.

‘ಯಾರೂ ಜೀತದಾಳುಗಳಲ್ಲ. 15 ದಿನಗಳ ಹಿಂದೆ ಕೂಲಿಗಾಗಿ ಬಂದಿದ್ದರು. ಮಾಹಿತಿ ಬಂದ ಕಾರಣ ಅವರನ್ನು ಕರೆತಂದಿದ್ದೇವೆ. ಒಡಿಶಾಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಧಾನದ ಆರೋಪ

‘ತಹಶೀಲ್ದಾರ್‌ಗೆ ದೂರು ನೀಡಿದರೂ ಪ್ರಕರಣ ದಾಖಲಾಗಿಲ್ಲ. ರಾಜಿ ಮಾಡಿದ್ದಾರೆ. ಕಾರ್ಖಾನೆಯವರನ್ನು ರಕ್ಷಿಸಲು ಘಟನೆಯನ್ನು 
ಗೋಪ್ಯವಾಗಿ ಇಟ್ಟಂತೆ ಕಾಣುತ್ತಿದೆ’ ಎಂದು ‌ಸಂಸ್ಥೆಯ ಗಾಯತ್ರಿ ದೂರಿದರು.

ಸ್ಥಳಕ್ಕೆ ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಂದಿಲ್ಲ. ಈ ಕುಟುಂಬಗಳನ್ನು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಇಟ್ಟುಕೊಂಡಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !