ಮಂಗಳವಾರ, ನವೆಂಬರ್ 19, 2019
29 °C
ಹೊರರಾಜ್ಯಗಳಲ್ಲಿ ಯಶಸ್ವಿ ಮೀನುಗಾರಿಕೆಯ ಒಳನೋಟ ಅರಿಯಲು ತಂಡ

ಅಧ್ಯಯನಕ್ಕೆ 15 ಅಧಿಕಾರಿಗಳ ಪ್ರವಾಸ

Published:
Updated:
Prajavani

ಕಾರವಾರ: ‘ರಾಜ್ಯದಲ್ಲಿ ಯಶಸ್ವಿ ಮೀನುಗಾರಿಕೆ ಮಾಡುವ ನಿಟ್ಟಿನಲ್ಲಿ ಹೊರ ರಾಜ್ಯಗಳಲ್ಲಿ ನಮ್ಮ ಅಧಿಕಾರಿಗಳ ತಂಡದಿಂದ ಅಧ್ಯಯನ ನಡೆಸಲಾಗುವುದು. ಅವರು ನೀಡುವ ವರದಿಯನ್ನು ಆಧರಿಸಿ ಯೋಜನೆ ರೂಪಿಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯದ 15 ಅಧಿಕಾರಿಗಳ ತಂಡವನ್ನು ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿಗೆ ಕಳುಹಿಸಲಾಗುತ್ತದೆ. ಅವರು ಒಂದು ತಿಂಗಳಲ್ಲಿ ನನಗೆ ವರದಿ ನೀಡಲಿದ್ದಾರೆ. ಉಳಿದಂತೆ, ಉಳ್ಳಾಲದಿಂದ ಕಾರವಾರದವರೆಗೆ ಇರುವ ಜಟ್ಟಿ, ಬಂದರು, ಹೂಳಿನ ಸಮಸ್ಯೆಯನ್ನು ನಾನೇ ಖುದ್ದು ಭೇಟಿ ನೀಡಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ನಾಡದೋಣಿಗಳಿಗೆ ನೀಡುತ್ತಿರುವ ಸೀಮೆಎಣ್ಣೆಯನ್ನು 300 ಲೀಟರ್‌ಗಳಿಗೆ ಹೆಚ್ಚಿಸಬೇಕು ಎಂದು ಮೀನುಗಾರರ ಮುಖಂಡರು ಮನವಿ ಮಾಡಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ನನೆಗುದಿಗೆ ಬಿದ್ದಿದ್ದ ಮೆರಿಟೈಮ್ ಬೋರ್ಡ್ ಅನ್ನು ಇನ್ನು ಕೆಲವೇ ತಿಂಗಳಲ್ಲಿ ಸ್ಥಾಪಿಸಲಾಗುತ್ತದೆ’ ಎಂದು ತಿಳಿಸಿದರು.

ಬಳಿಕ ‘ಒಂದು ದೇಶ ಒಂದು ಸಂವಿಧಾನ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು‌ ಮುಖ್ಯಮಂತ್ರಿಯನ್ನು ಜಿಲ್ಲೆಗೆ ಕರೆತರುವ ಜವಾಬ್ದಾರಿ ನನ್ನದು. ಒಂದು ವಾರದೊಳಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಜಿಲ್ಲೆಗೆ ಸೆ.30ರ ಮೊದಲು ಇನ್ನೊಮ್ಮೆ ಭೇಟಿ ನೀಡಿ ಸಮಗ್ರವಾಗಿ ಮಾಹಿತಿ ಕಲೆಹಾಕುತ್ತೇನೆ’ ಎಂದರು.

ಜಿಲ್ಲೆಯ ಸಣ್ಣ, ಕಡಿಮೆ ಆದಾಯವಿರುವ ದೇವಸ್ಥಾನಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಅದೇರೀತಿ, ಬಡವರ ಮದುವೆಗೆ ದೇವಸ್ಥಾನಗಳ ಮೂಲಕ ಧನಸಹಾಯ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದೂ ತಿಳಿಸಿದರು. 

‘ಡಿ.ಕೆ.ಶಿ ಬಂಧನಲ್ಲಿ ರಾಜಕಾರಣವಿಲ್ಲ’: ‘ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರ ಹಿಂದೆ ಯಾವುದೇ ರಾಜಕಾರಣವಿಲ್ಲ. ಜಾರಿ ನಿರ್ದೇಶನಾಲಯ (ಇ.ಡಿ) ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು.

‘ಈ ಹಿಂದೆಯೂ ಅನೇಕರನ್ನು ಇ.ಡಿ ಬಂಧಿಸಿ, ವಿಚಾರಣೆ ಮಾಡಿತ್ತು. ಈ ಹಿಂದೆ ಜನಾರ್ದನ ರೆಡ್ಡಿ, ಜಗನ್ ಮೋಹನ್ ರೆಡ್ಡಿ ಬಂಧನವಾದಾಗ ಯಾರೂ ಅದನ್ನು ರಾಜಕಾರಣ ಎಂದು ಹೇಳಲಿಲ್ಲ. ಬಿಜೆಪಿಗೂ, ಇ.ಡಿ ದಾಳಿಗೂ, ರಾಜಕಾರಣದ ಆರೋಪಕ್ಕೂ ಏನು ಸಂಬಂಧವಿದೆ? ಸರಿ, ತಪ್ಪನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶವಿದೆ’ ಎಂದರು.

ಪ್ರತಿಕ್ರಿಯಿಸಿ (+)