₹ 2 ಲಕ್ಷವರೆಗಿನ ಸುಸ್ತಿ ಮನ್ನಾ: ಬೆಳೆ ವಿಮೆ ಮೊತ್ತಕ್ಕೆ ಕನ್ನ

7
ರಾಜಕೀಯ ಮೇಲಾಟದ ಮಧ್ಯೆ ₹2 ಲಕ್ಷ ಬೆಳೆ ಸಾಲ ಮನ್ನಾ ಆದೇಶ

₹ 2 ಲಕ್ಷವರೆಗಿನ ಸುಸ್ತಿ ಮನ್ನಾ: ಬೆಳೆ ವಿಮೆ ಮೊತ್ತಕ್ಕೆ ಕನ್ನ

Published:
Updated:

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ರೈತರು ಪಡೆದ ಬೆಳೆ ಸಾಲದಲ್ಲಿ ₹ 2 ಲಕ್ಷವರೆಗಿನ ಸುಸ್ತಿ ಮನ್ನಾ ಮಾಡುವ ಸಂದರ್ಭದಲ್ಲಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೆಳೆ ನಷ್ಟ ಪರಿಹಾರವಾಗಿ ಪಡೆದ ವಿಮೆ ಕ್ಲೈಮ್‌ ಮೊತ್ತ ಕಡಿತಗೊಳ್ಳಲಿದೆ.

‘ಬೆಳೆ ವಿಮೆ ಕ್ಲೈಮ್‌ಗಳ ಮೊತ್ತವನ್ನು ಬೆಳೆ ಸಾಲಗಳ ಖಾತೆಗೆ ಬ್ಯಾಂಕುಗಳು ಜಮೆ ಮಾಡಬೇಕು. ಯಾವುದೇ ಬೆಳೆ ಸಾಲಗಳು ಅಥವಾ ರೈತರ ಅವಧಿ ಮೀರಿದ ಇತರ ಸಾಲಗಳಿಗೆ ಕ್ಲೈಮ್‌ ಮೊತ್ತ ಬಂದಿದ್ದರೆ, ಅವುಗಳನ್ನು ಜಮೆ ಮಾಡಿದ ಬಗ್ಗೆ ಬ್ಯಾಂಕುಗಳು ಕಡ್ಡಾಯವಾಗಿ ದೃಢೀಕರಿಸಬೇಕು. ಕ್ಲೈಮ್‌ ಮೊತ್ತವನ್ನು ಉಳಿತಾಯ ಖಾತೆಗೆ ಜಮೆ ಮಾಡಿದ್ದರೆ, ಅದನ್ನು ಸಾಲ ಮನ್ನಾ ಮೊತ್ತದಿಂದ ಕಡಿತಗೊಳಿಸಲಾಗುವುದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

₹ 2 ಲಕ್ಷವರೆಗಿನ ಬೆಳೆ ಸಾಲ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಲ ಮನ್ನಾ ಯೋಜನೆಯ ವ್ಯಾಪ್ತಿ, ಫಲಾನುಭವಿಗಳ ಅರ್ಹತೆ, ಒಳಪಡುವ ವರ್ಗಗಳು, ಅನುಷ್ಠಾನ ಪ್ರಕ್ರಿಯೆಗೆ ಸಂಬಂಧಿಸಿ ಸೂಚನೆಗಳನ್ನು ನೀಡಲಾಗಿದೆ.

ಸುಸ್ತಿ ಅಲ್ಲದ ಬೆಳೆ ಸಾಲಗಳನ್ನು ಹೊಂದಿರುವ ಹಾಗೂ ಹಿಂದಿನ ಸಾಲಿನ ಬೆಳೆ ಸಾಲಗಳನ್ನು ನಿಯಮಿತವಾಗಿ ಮರುಪಾವತಿಸಿದ ರೈತ ಕುಟುಂಬಕ್ಕೆ ಅವರು ಪಡೆದ ಬೆಳೆ ಸಾಲದ ಮೊತ್ತ ಅಥವಾ ₹ 25 ಸಾವಿರ ಈ ಎರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಪ್ರೋತ್ಸಾಹ ಧನವಾಗಿ ನೀಡಲಾಗುವುದು.

ಕೃಷಿ, ತೋಟಗಾರಿಕೆ ಮತ್ತು ಪ್ಲಾಂಟೇಷನ್‌ ಬೆಳೆ ಬೆಳೆಯಲು ಗರಿಷ್ಠ 12ರಿಂದ 18 ತಿಂಗಳ ಒಳಗೆ ಮರು ಪಾವತಿಸಬೇಕಾದ ಅಲ್ಪಾವಧಿ ಸಾಲಗಳನ್ನು ಈ ಯೋಜನೆಯಡಿ ‘ಬೆಳೆ ಸಾಲ’ ಎಂದು ಪರಿಗಣಿಸಲಾಗಿದೆ. ಸಾಲ ತೆಗೆದುಕೊಂಡಿರುವ ರೈತ, ಆತನ ಭೂಮಿ ಮತ್ತು ಸಾಲ ಪಡೆದ ಬ್ಯಾಂಕಿನ ಶಾಖೆ ಕರ್ನಾಟಕ ರಾಜ್ಯದಲ್ಲಿ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಬ್ಯಾಂಕುಗಳೇ ಹೊಣೆ: ರೈತರು ಸಲ್ಲಿಸಿದ ಅಗತ್ಯ ವಿವರಗಳನ್ನು (ಆಧಾರ್‌ ಸಂಖ್ಯೆ, ರೇಷನ್‌ ಕಾರ್ಡ್‌ ಸಂಖ್ಯೆ, ಸರ್ವೆ ಸಂಖ್ಯೆ) ಕ್ರೋಡೀಕರಿಸಿದ ನಂತರಮಾಹಿತಿಗಳನ್ನು ಬ್ಯಾಂಕುಗಳು ತಮ್ಮ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಈ ಮಾಹಿತಿಗಳ ನಿಖರತೆಗಳಿಗೆ ಸಾಲನೀಡಿದ ಬ್ಯಾಂಕುಗಳೇ ಜವಾಬ್ದಾರಿ. ಬ್ಯಾಂಕುಗಳು ಸಲ್ಲಿಸಿದ ಎಲ್ಲ ದಾಖಲೆಗಳನ್ನು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಡಿ ಪರಿಶೀಲಿಸಿ ಯೋಜನೆಗೆ ಅರ್ಹರಾದವರನ್ನು ಗುರುತಿಸಲಾಗುವುದು.

ಯಾವ ಸಾಲಗಳಿಗೆ ಯೋಜನೆ ಅನ್ವಯ

* 2009ರ ಏ. 1ರ ನಂತರ ಮಂಜೂರಾದ, 2017ರ ಡಿ. 31ಕ್ಕೆ ಬಾಕಿ ಇರುವ ವಸೂಲಾಗದ ಸಾಲಗಳು (ಎನ್‌ಪಿಎ)

* ಮರುವರ್ಗೀಕರಿಸಿದ ಅಂದರೆ, ನೈಸರ್ಗಿಕ ವಿಕೋಪಗಳಿಂದ ಮಧ್ಯಮಾವಧಿ ಸಾಲಗಳಾಗಿ ಪರಿವರ್ತಿಸಿದ ಮತ್ತು 5 ವರ್ಷಗಳ ಅವಧಿಯಲ್ಲಿ ಮರುಪಾವತಿಸಬಹುದಾದ ಸಾಲಗಳು

* 2017ರ ಡಿ. 31ರಂದು ಅವಧಿ ಮೀರಿದ (ಸುಸ್ತಿ) ಬೆಳೆ ಸಾಲಗಳು.

ಅರ್ಹರು ಯಾರು?

* ಪ್ರತಿ ಕುಟುಂಬದ ಒಬ್ಬರು. ಕುಟುಂಬವೆಂದರೆ, ಪತಿ, ಪತ್ನಿ ಮತ್ತು ಅವಲಂಬಿತ ಮಕ್ಕಳು

ಒಳಪಡದ ವರ್ಗಗಳು ಯಾವುವು?

* ಕೃಷಿ ಉತ್ಪನ್ನ ಅಡಿವಿಟ್ಟು ನೀಡಿದ ಸಾಲಗಳು, ಒಡವೆ, ಆಭರಣಗಳ ಮೇಲಿನ ಸಾಲ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಕೃಷಿ ಸಂಬಂಧಿಸಿದ ಇತರ ಸಾಲಗಳು

* ಮಾಸಿಕ ₹ 15 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತರಿಗೆ (ಮಾಜಿ ಸೈನಿಕರನ್ನು ಬಿಟ್ಟು) ನೀಡಿದ ಸಾಲಗಳು, ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷ ಆದಾಯ ತೆರಿಗೆ ಪಾವತಿಸಿದವರಿಗೆ ನೀಡಿದ ಸಾಲಗಳು

* ಸಹಕಾರ ಸಂಸ್ಥೆ, ಬ್ಯಾಂಕುಗಳಿಂದ ಘೋಷಿಸಿರುವ ಬೆಳೆ ಸಾಲ ಮನ್ನಾ ಯೋಜನೆಯ ಫಲಾನುಭವಿಗಳು

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !