ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಬೇಡ: ನಂಜಾವಧೂತ ಸ್ವಾಮೀಜಿ

ಡಿ. ಕೆ. ಶಿವಕುಮಾರ್‌ ಬೆಂಬಲಿಸಿ ನಗರಕ್ಕೆ ಹರಿದುಬಂದ ಜನಸಾಗರ
Last Updated 11 ಸೆಪ್ಟೆಂಬರ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು:‘ಆಂತರಿಕ ಭದ್ರತೆಗಾಗಿ ದೇಶ ಮೆಚ್ಚುವಂತಹ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು.ಸ್ವಾಯತ್ತ ಸಂಸ್ಥೆಗಳು ಸ್ವತಂತ್ರವಾಗಿ ನಡೆದುಕೊಂಡರೆ ದೇಶದ ಜನರೂ ಮೆಚ್ಚುತ್ತಾರೆ’ ಎಂದು ಶ್ರೀ ಗುರುಗುಂಡಾ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಹೇಳಿದರು.

ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗ ಸಂಘ–ಸಂಸ್ಥೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ‘ಒಕ್ಕಲಿಗರು ತುಂಬಾ ತಾಳ್ಮೆವುಳ್ಳವರು. ಒಕ್ಕಲಿಗರ ಸಾತ್ವಿಕ ಸಿಟ್ಟು ಬಹಳ ಕೆಟ್ಟದ್ದು.ಅವರು ಸಿಟ್ಟಿಗೆ ಏಳದಂತೆ ನೋಡಿಕೊಳ್ಳುವ ಹೊಣೆರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ’ ಎಂದರು.

‘ಸರ್ಕಾರಗಳು ಒಕ್ಕಲಿಗ ಸಮುದಾಯದ ವಿರುದ್ಧ ಇವೆ ಎಂದು ನಾನು ಭಾವಿಸುತ್ತಿಲ್ಲ, ಇಲ್ಲಿ ಪಕ್ಷಾತೀತವಾಗಿ ಶಿವಕುಮಾರ್‌ಗೆ ಬೆಂಬಲ ವ್ಯಕ್ತವಾಗಿದೆ’ ಎಂದರು.

‘ಒಕ್ಕಲಿಗ ಸಮುದಾಯ ಇದೀಗ ಎಲ್ಲ ಬೆಳವಣಿಗೆಗಳನ್ನು ಮೌನವಾಗಿ ಗಮನಿಸುತ್ತಿದೆ. ರಾಜ್ಯ ಸರ್ಕಾರದಲ್ಲೂ ಒಕ್ಕಲಿಗ ಸಮುದಾಯದವರಿಗೆ ಅಧಿಕ ಹೊಣೆಗಾರಿಕೆಯ ಖಾತೆ ನೀಡದೆ ಇರುವುದಕ್ಕೆ ಬೇಸರ ಇದೆ’ ಎಂದರು.

‘ಮೆರವಣಿಗೆಗೆ ಒಪ್ಪಿಗೆ ನೀಡುವುದಕ್ಕೆ ಮೊದಲು ಪೊಲೀಸರು ಹತ್ತು ಷರತ್ತುಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಒಕ್ಕಲಿಗರು ಸುಮ್ಮಸುಮ್ಮನೆ ಗಲಭೆ ನಡೆಸುವವರಲ್ಲ ಎಂಬ ನಂಬಿಕೆ ಇಂದು ನಿಜವಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಹೇಳಿದರು.

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಪ್ರತಿಭಟನೆಯ ಆರಂಭದಲ್ಲಿ ಮಾತನಾಡಿದ ಶಾಸಕ ಕೃಷ್ಣ ಬೈರೇಗೌಡ,ವಿಜಯ ಮಲ್ಯ, ನೀರವ್ ಮೋದಿ, ಚೋಕ್ಸಿ ಮೇಲೆ ಐಟಿ, ಇಡಿ ದಾಳಿ ಏಕೆ ಮಾಡಿಲ್ಲ?’ ಎಂದು ಪ್ರಶ್ನಿಸಿದರು.

‘ಸಿದ್ಧಾರ್ಥ ಸಾವು ಆತ್ಮಹತ್ಯೆಯಲ್ಲ, ಅದು ಐಟಿ ಇಲಾಖೆ ಮೂಲಕ ಆದ ಕೊಲೆ’ ಎಂದು ಅವರು ಆರೋಪಿಸಿದರು.

ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಶಿವಕುಮಾರ್‌ ಯಾವುದೇ ತರಹದ ಕಾನೂನು ಬಾಹಿರವಾಗಿ ಹಣ ಸಂಪಾದಿಸಿಲ್ಲ ಎಂದರು.

ಬೆಳಿಗ್ಗೆ 10.30ರ ವೇಳೆಗೇ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಪ್ರತಿಭಟನಾ ಪ್ರದರ್ಶನ ಆರಂಭವಾಯಿತು. ಒಕ್ಕಲಿಗ ವಿರೋಧಿ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಎಂಬುದೇ ಘೋಷಣೆಯ ಮುಖ್ಯ ವಿಷಯವಾಗಿತ್ತು. 12.30ರ ಸುಮಾರಿಗೆ ಆರಂಭವಾದ ಮೆರವಣಿಗೆ 2 ಗಂಟೆ ಹೊತ್ತಿಗೆ ಸ್ವಾತಂತ್ರ್ಯ ಉದ್ಯಾನ ತಲುಪಿತು. ಕೊನೆಗೆ ರಾಜಭವನಕ್ಕೆ ತೆರಳಿರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಡಿಕೆಶಿ ಟೊಪ್ಪಿ, ಮುಖವಾಡ, ಭಾವಚಿತ್ರ

ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಿಂದ ತಂಡೋಪತಂಡವಾಗಿ ಬಂದ ಶಿವಕುಮಾರ್‌ ಅಭಿಮಾನಿಗಳ ತಲೆಯಲ್ಲಿ ‘ಡಿಕೆಎಸ್‌’ ಎಂದು ಇಂಗ್ಲಿಷ್‌ನಲ್ಲಿ ಬರೆದ ಟೋಪಿಗಳಿದ್ದವು. ಹಲವರು ಡಿಕೆಶಿ ಅವರ ಮುಖವಾಡ ಧರಿಸಿದ್ದರು. ಬಹುತೇಕ ಎಲ್ಲರ ಕೈಯಲ್ಲಿ ಡಿಕೆಶಿ ಭಾವಚಿತ್ರ ಇತ್ತು.

ಶಿವಕುಮಾರ್‌ ಜತೆಗೆ ಉದ್ಯಮಿ ಸಿದ್ಧಾರ್ಥ ಅವರ ಆತ್ಮಹತ್ಯೆ ಪ್ರಸಂಗವನ್ನೂ ಕೆಲವರು ಉಲ್ಲೇಖಿಸಿದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಅವರನ್ನೂ ಮುಂದೆ ಬಂಧಿಸಬಹುದು ಎಂದು ಹೇಳಿ ಪ್ರಧಾನ ವೇದಿಕೆಯ ಬ್ಯಾನರ್‌ನಲ್ಲಿ ಕುಮಾರಸ್ವಾಮಿ ಅವರ ಭಾವಚಿತ್ರವನ್ನೂ ಅಳವಡಿಸಲಾಗಿತ್ತು. ಆದರೆ ಪ್ರತಿಭಟನೆಯ ಉದ್ದಕ್ಕೂ ಕುಮಾರಸ್ವಾಮಿ ವಿಚಾರ ಪ್ರಸ್ತಾಪವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT