ಶನಿವಾರ, ಅಕ್ಟೋಬರ್ 31, 2020
25 °C
ಒಳನೋಟ

ಒಳನೋಟ| ಬರಡಾಗುತ್ತಿದೆ ಕರುನಾಡು..

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

‘ದೇಶದ ಎರಡನೇ ಮರುಭೂಮಿಯಾಗುವತ್ತ ಕರ್ನಾಟಕ ದಾಪುಗಾಲಿಟ್ಟಿದೆ’– ಇಂತಹದ್ದೊಂದು ಎಚ್ಚರಿಕೆಯನ್ನು ವಿಜ್ಞಾನಿಗಳು ಕಾಲ ಕಾಲಕ್ಕೆ ನೀಡುತ್ತಲೇ ಬಂದಿದ್ದಾರೆ. ಕಳೆದ 40 ವರ್ಷಗಳಲ್ಲಿ ರಾಜ್ಯದ 20 ರಿಂದ 25 ಜಿಲ್ಲೆಗಳ 100 ರಿಂದ 150 ಕ್ಕೂ ಹೆಚ್ಚು ತಾಲ್ಲೂಕುಗಳು ನಿರಂತರವಾಗಿ ಬರದ ದವಡೆಗೆ ಸಿಲುಕುತ್ತಲೇ ಬಂದಿವೆ. ಅಂತರ್ಜಲ ಬರಿದಾಗಿ ಜನರ ಬದುಕು ದುಸ್ತರವಾಗಿವೆ. ಕೆರೆಗಳು ಒಣಗಿವೆ, ಕೃಷಿ ಭೂಮಿ ಬರಗೆಟ್ಟು ಹೋಗಿದೆ. ಗುಟುಕು ನೀರೂ ಸಿಗದೆ, ಹೊಟ್ಟೆಗೆ ಅನ್ನವೂ ಇಲ್ಲದೆ, ಗುಳೇ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ನೀರಿನ ಪರಿಸ್ಥಿತಿ ಅತಿ ಗಂಭೀರವಾಗಿದೆ ಎಂದು ಕೇಂದ್ರ ಜಲ ಆಯೋಗವು ಕಳೆದ ವರ್ಷವೇ ಎಚ್ಚರಿಕೆ ನೀಡಿತ್ತು. ನೀತಿ ಆಯೋಗದ ವರದಿಯೂ ಈ ಕಳವಳಕ್ಕೆ ಧ್ವನಿಯಾಗಿದೆ. ಅಂತರ್ಜಲ ಕೊರತೆಯಿಂದಾಗಿ ದೇಶದ ಹಲವು ನಗರಗಳಲ್ಲಿ ಹತ್ತು ಕೋಟಿಗೂ ಹೆಚ್ಚು ಜನರು ನೀರಿನ ಬವಣೆ ಅನುಭವಿಸಲಿದ್ದಾರೆ. ಈ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಕೂಡ ಸೇರಿವೆ. 2030ರ ಹೊತ್ತಿಗೆ, ದೇಶದ ಶೇ 40ರಷ್ಟು ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಲಿದ್ದಾರೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ. 

ರಾಜಸ್ಥಾನದ ಬಳಿಕ ಎರಡನೇ ಅತಿ ಹೆಚ್ಚು ಬರಡು ಪ್ರದೇಶ ಹೊಂದಿರುವ ರಾಜ್ಯ ಕರ್ನಾಟಕ. ಜಲಕ್ಷಾಮದಿಂದ ತತ್ತರಿಸಿರುವ ಕೆಲವು ಜಿಲ್ಲೆಗಳಲ್ಲಿ ಅತ್ಯಲ್ಪ ಮಳೆಯಾಗುತ್ತಿದೆ. ನೀರಾವರಿಯಿಂದಲೇ ಕೃಷಿ ಮಾಡಿ ಅನ್ನಕ್ಕೆ ದಾರಿ ಮಾಡಿಕೊಳ್ಳುತ್ತೇವೆ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. ಬರ ನಿರ್ವಹಣೆಗೆಂದು ಹಲವು ದಶಕಗಳಿಂದ ಸಾವಿರಾರು ಕೋಟಿ ಅನುದಾನವೇನೋಬಂದಿದೆ. ಆದರೆ, ನೀರು ಹರಿದಿಲ್ಲ. ಅಂತರ್ಜಲಒಸರಿಲ್ಲ... ಬರಡು ನೆಲ ಗುದ್ದಿ ನೀರುಕ್ಕಿಸುವ ಆಧುನಿಕ ಭಗೀರಥ ಕನ್ನಡನಾಡಿನಲ್ಲಿ ಇನ್ನೂ ಹುಟ್ಟಿಲ್ಲ.

ಈ ವರ್ಷ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ಶೇ 76ರಷ್ಟು ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಆದರೆ, ರಾಜ್ಯದ ಬಹುತೇಕ ಕೆರೆಗಳು ತುಂಬಿಲ್ಲ. ನೀರಿನ ಅತಿಯಾದ ಬಳಕೆಯಿಂದ ಮುಂದಿನ ವರ್ಷದ ವೇಳೆಗೆ ಜಲದ ಒಡಲು ಬರಿದಾದರೆ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು. ಕಳೆದ ಹತ್ತು ವರ್ಷಗಳ ಅಂಕಿ– ಅಂಶ ನೋಡಿದರೆ ಪ್ರತಿ ವರ್ಷದ ಡಿಸೆಂಬರ್‌ ವೇಳೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಣ್ಣ ನೀರಾವರಿಯ ಶೇ 80ರಷ್ಟು ಕೆರೆಗಳು ಒಣಗಿರುತ್ತವೆ.

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ನೇರ ಪರಿಣಾಮಗಳಿಗೆ ಸರ್ಕಾರ ಮತ್ತು ರಾಜ್ಯದ ಜನರು ಕಳೆದ ಕೆಲವು ವರ್ಷಗಳಿಂದ ಸಾಕ್ಷಿಯಾಗುತ್ತಲೇ ಬಂದಿದ್ದಾರೆ. ಡಾ.ಕೆ.ಕಸ್ತೂರಿ ರಂಗನ್‌ ಅಧ್ಯಕ್ಷತೆಯ ಕರ್ನಾಟಕ ಜ್ಞಾನ ಆಯೋಗವೂ ನೀರಿನ ಹಿತಮಿತ ಬಳಕೆಯ ಕುರಿತು ನೀತಿಯೊಂದನ್ನು ರೂಪಿಸಿ ಸರ್ಕಾರಕ್ಕೂ ನೀಡಿದೆ. ಕೃಷಿಗೆ ಬೇಕಾಬಿಟ್ಟಿ ನೀರನ್ನು ಬಳಸುವುದನ್ನು ನಿಲ್ಲಿಸಬೇಕು, ಪರ್ಯಾಯ ನೀರಾವರಿ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ. ಬೆಂಗಳೂರಿನ ನೀರಿನ ರಕ್ಕಸ ದಾಹಕ್ಕೆ ಕಾವೇರಿ ಮಾತ್ರವಲ್ಲದೆ, ಆಲಮಟ್ಟಿ, ಲಿಂಗನಮಕ್ಕಿಯ ಜಲನಿಧಿಯ ಮೇಲೂ ಕಣ್ಣು ಹಾಕಲಾಗಿದೆ. ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ, ಬೆಂಗಳೂರಿಗೆ ತರಿಸುವ ಬಣ್ಣ ಬಣ್ಣದ ಕನಸಿನ ಯೋಜನೆಗಳನ್ನೂ ಹರಿಬಿಟ್ಟರು. ಆದರೆ, ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಹಿತಮಿತವಾಗಿ ಬಳಸುವ, ಹೊಸ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಮಾಡುವುದಕ್ಕೇ ನಾಗರಿಕರು ಉತ್ಸಾಹ ತೋರಿಸುತ್ತಿಲ್ಲ. ಹೀಗಾಗಿ ಮಳೆ ನೀರು ಸಂಗ್ರಹ ಯೋಜನೆ ಕುಂಟುತ್ತಲೇ ಸಾಗಿದೆ. 

ಕೋಲಾರ,ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಅಂತರ್ಜಲ ಬಳಕೆ ಮಿತಿ ಮೀರಿದೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟದ ಏರಿಕೆಯೂ ಆಗುತ್ತಿಲ್ಲ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿಯಲ್ಲೂ ಅಂತರ್ಜಲವು ಅಪಾಯದ ಮಟ್ಟಿಗೆ ಕುಸಿಯುತ್ತಿರುವುದು ಆತಂಕದ ಬೆಳವಣಿಗೆ.

ಕೇಂದ್ರದ ಜಲಾಮೃತ ಯೋಜನೆ, ರಾಜ್ಯದ ಬಹು ಗ್ರಾಮ ಯೋಜನೆ ಮೂಲಕ ನೀರಿಲ್ಲದ ಗ್ರಾಮಗಳಿಗೆ ನೀರನ್ನು ತಲುಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಭವಿಷ್ಯದಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ವಿಶ್ವಾಸದ ಮಾತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು