ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಆಧಾರಿತ ಯೋಜನೆ ‘ಪಾಲಿಸಿದರೆ ಪಾಲು’ಗೆ ಪೋಷಕರ ನಿರ್ಲಕ್ಷ್ಯ

Last Updated 1 ಜೂನ್ 2019, 20:05 IST
ಅಕ್ಷರ ಗಾತ್ರ

ಶಿರಸಿ: ಗ್ರಾಮ ಅರಣ್ಯ ಸಮಿತಿಗಳಿಗೆ ಆದಾಯ ಗಳಿಕೆಯ ಮೂಲವಾಗಿದ್ದ ‘ಪಾಲಿಸಿದರೆ ಪಾಲು’ ಯೋಜನೆಯು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾತಾಯನ ಸ್ಥಿತಿಗೆ ತಲುಪಿದೆ. ಶೇಕಡಾ 80ರಷ್ಟು ಅರಣ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರ ಪಟ್ಟಾ ಯೋಜನೆ ಅಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.

ಆದರೆ, ಸಮುದಾಯ ಆಧಾರಿತ, ಪಾಲಿಸಿದರೆ ಪಾಲು ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಕ್ರಾಂತಿ ಮಾಡಿವೆ. ಕ್ರಿಯಾಶೀಲ ವಿಎಫ್‌ಸಿಗಳು ಬರಡು ಅರಣ್ಯಭೂಮಿಯಲ್ಲಿ ಗಿಡ ಬೆಳೆದು 50:50 ಅನುಪಾತದಲ್ಲಿ ಆದಾಯ ಗಳಿಸಿದವು. 2014–15ರಲ್ಲಿ ಕೆನರಾ ವೃತ್ತದಲ್ಲಿ ವಿಎಫ್‌ಸಿಗಳು ಪಡೆದ ಪಾಲು ₹18.85 ಕೋಟಿ. ಅದರಲ್ಲಿ ₹ 16 ಕೋಟಿ ಪಡೆದ ಶಿರಸಿ ವಿಭಾಗಕ್ಕೆ ಸಿಂಹಪಾಲು.

ನಂತರ ಬದಲಾದ ಅಧಿಕಾರಿಗಳ ಆಡಳಿತದಲ್ಲಿ ಈ ಯೋಜನೆ ನೆಲಕಚ್ಚಿದೆ. 2018–19ರಲ್ಲಿ ಯೋಜನೆಯಡಿ ಜಿಲ್ಲೆಯಲ್ಲಿ ವಿತರಣೆಯಾದ ಹಣ ಕೇವಲ ₹ 1.38 ಕೋಟಿ. ಪಾವತಿಸಬೇಕಾಗಿರುವ ಹಣ ಸುಮಾರು ₹5 ಕೋಟಿ. ‘ಅಕೇಶಿಯಾ ಬೆಳೆದು ಗಳಿಸಿದ ಆದಾಯದಲ್ಲಿ ಸಮುದಾಯ ಭವನ ನಿರ್ಮಾಣ, ಕೃಷಿ ಉತ್ಪನ್ನ ಒಣಗಿಸಲು ಡ್ರೈಯರ್, ಸಮಾರಂಭಗಳಿಗೆ ಅಗತ್ಯವಿರುವ ಮಂಟಪ, ಅಡುಗೆ ಪಾತ್ರೆಗಳನ್ನು ಖರೀದಿಸಿದ್ದೇವೆ. ವರ್ಷಕ್ಕೆ ₹ 50ಸಾವಿರ ಬಾಡಿಗೆ ಬರುತ್ತದೆ’ ಎನ್ನುತ್ತಾರೆ ಯೋಜನೆಯ ಗರಿಷ್ಠ ಲಾಭಪಡೆದಿರುವ ಖೂರ್ಸೆ ವಿಎಫ್‌ಸಿ ಅಧ್ಯಕ್ಷ ಸತೀಶ ಭಟ್ಟ.

‘ಕರ್ನಾಟಕದಲ್ಲಿ ಹೊಸ ಅರಣ್ಯ ನೀತಿ ಅನುಷ್ಠಾನಗೊಂಡರೆ, ಪರಿಸರ ಹೋರಾಟಕ್ಕೆ ಹೆಸರಾದ ಉತ್ತರ ಕನ್ನಡದಲ್ಲಿ ಇದರ ಮೊದಲ ಚರ್ಚೆ ಆರಂಭವಾಗುತ್ತದೆ. 1994ರಲ್ಲಿ ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆ, ನಂತರ ಜಪಾನ್ ನೆರವಿನ ಯೋಜನೆ ಬಂದಾಗ ಜಿಲ್ಲೆಯಲ್ಲಿ ಜನರ ಸಹಭಾಗಿತ್ವದಲ್ಲಿ ಅವು ಅನುಷ್ಠಾನಗೊಂಡವು. ಸಹ್ಯಾದ್ರಿ ಪರಿಸರ ವರ್ಧಿನಿ ಸಂಘಟನೆ ಇವುಗಳ ಮಾದರಿಗಳ ಮಾಹಿತಿ ಹಂಚಿಕೆ ಮಾಡಿತು. ಆದರೆ, ಅಧಿಕಾರಿಗಳ ಯೋಜನೆ ರೂಪುರೇಷೆಯಲ್ಲಿ ಅಕೇಶಿಯಾ ನೆಡುತೋಪು ಪ್ರಚಲಿತಕ್ಕೆ ಬಂತು. ಜನ ಸಹಭಾಗಿತ್ವದಲ್ಲಿ ಗಿಡ ಬೆಳೆಸಿದರೆ ಲಾಭಾಂಶ ಕೊಡುವ ಒಪ್ಪಂದ ಆಗಿದ್ದು ಸಿದ್ದಾಪುರ ತಾಲ್ಲೂಕು ಕಾನಗೋಡಿನಲ್ಲಿ. ಅಂಕೋಲಾದ ಹೊನ್ನೆಬೈಲು ವಿಎಫ್‌ಸಿ ಮೊದಲ ಫಲಾನುಭವಿ’ ಎಂದು ಯೋಜನೆ ಇತಿಹಾಸವನ್ನು ಪರಿಸರ ಬರಹಗಾರ ಶಿವಾನಂದ ಕಳವೆ ತಿಳಿಸಿದರು.

‘ಅಧಿಕ ಅರಣ್ಯವಿರುವ ಇಲ್ಲಿ ಮರ ಪಟ್ಟಾ ಪ್ರಮಾಣ ಕಡಿಮೆ. ಕಟಾವಾಗಿರುವ ಮರಗಳು ಡಿಪೊದಲ್ಲಿ ಮಾರಾಟವಾದ ಮೇಲೆ ಹಣ ಜಮಾ ಆಗುತ್ತದೆ. ಇದರ ಪಾಲನ್ನು ವಿಎಫ್‌ಸಿಗಳಿಗೆ ಶೀಘ್ರ ವಿತರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ.ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT