ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಬೆಳೆಗಾರರಿಗೆ ‘ಕಹಿ’ ಉಣಿಸುವ ವ್ಯವಸ್ಥೆ: ಉಪ ಉತ್ಪನ್ನಗಳೇ ಉಳಿವಿಗೆ ಹಾದಿ!

Last Updated 14 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬಾಗಲಕೋಟೆ: ಜಾಗತಿಕ ಸ್ಪರ್ಧೆಯನ್ನು ಸಮರ್ಥ ವಾಗಿ ಎದುರಿಸಲು ಸಕ್ಕರೆ ಉತ್ಪಾದನೆ ಜತೆಗೆ ಉಪ ಉತ್ಪನ್ನಗಳಿಗೆ ಆದ್ಯತೆ ನೀಡುವುದೇ ದೇಶದ ಸಕ್ಕರೆ ಉದ್ಯಮದ ಉಳಿವಿಗೆ ಇರುವ ದಾರಿ.

ದೇಸಿ ಮಾರುಕಟ್ಟೆಯಲ್ಲಿ ವಾರ್ಷಿಕ 26 ದಶಲಕ್ಷ ಟನ್ ಸಕ್ಕರೆಗೆ ಬೇಡಿಕೆ ಇದೆ. ಆದರೆ 36 ದಶಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಅಂದರೆ, 10 ದಶಲಕ್ಷ ಟನ್‌ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆಯಾಗಿದೆ. ಇದರ ಜತೆಗೆ ಹಿಂದಿನ ವರ್ಷಗಳಲ್ಲಿ ಉತ್ಪಾದನೆಯಾದ ಸುಮಾರು 13 ದಶ ಲಕ್ಷ ಟನ್ ಕಾರ್ಖಾನೆಗಳ ಉಗ್ರಾಣಗಳಲ್ಲಿ ಇದೆ. ಇದು ಬಿಕ್ಕಟ್ಟು ಹೆಚ್ಚಾಗಲು ಕಾರಣವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಈಗ ಕೆ.ಜಿಗೆ ₹21 ಇದೆ. ಆ ಬೆಲೆಗೆ ರಫ್ತು ಸಾಧ್ಯವಿಲ್ಲ. ಹೀಗಾಗಿಯೇ ಸರ್ಕಾರ ದೇಸಿ ಮಾರುಕಟ್ಟೆಯಲ್ಲಿ ಸಕ್ಕರೆ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಿದ್ದು, ಕಾರ್ಖಾನೆಯವರು ಮಾರುಕಟ್ಟೆಗೆ ತಿಂಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆ ಮಾಡಬೇಕಿದೆ. ಕೆ.ಜಿಗೆ ₹31ರ ಒಳಗಾಗಿ ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ. ಈ ನಿಯಂತ್ರಣ ಇಲ್ಲದಿದ್ದರೆ ದೇಸಿ ಮಾರುಕಟ್ಟೆಯಲ್ಲಿ ಸಕ್ಕರೆ ಕೆ.ಜಿಗೆ ₹18ರ ಆಸುಪಾಸಿನಲ್ಲಿ ಇರುತ್ತಿತ್ತು.

ಹೀಗಾಗಿ ನಷ್ಟದಲ್ಲಿರುವ ಸಕ್ಕರೆ ಉದ್ಯಮಕ್ಕೆ ಬೆಲೆ ನಿಯಂತ್ರಣ ಕೃತಕ ಉಸಿರಾಟಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ಇದೆಷ್ಟು ದಿನ ಎಂಬುದು ಉದ್ಯಮದ ನಾಡಿಮಿಡಿತ ಅರಿತವರ ಪ್ರಶ್ನೆ. ದೇಶದಲ್ಲಿ ಉದ್ಯಮಕ್ಕೆ ಕೇಂದ್ರದಿಂದ ಇಷ್ಟೊಂದು ನೆರವು ದೊರಕುತ್ತಿರುವುದು ಸಕ್ಕರೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವಬ್ರೆಜಿಲ್, ಗ್ವಾಟೆಮಾಲಾ, ಆಸ್ಟ್ರೇಲಿಯಾ ದೇಶಗಳ ಕಣ್ಣು ಕೆಂಪಾಗಿಸಿದೆ. ಭಾರತ ಮೂಲ ಒಪ್ಪಂದದ ನಿಯಮ ಉಲ್ಲಂಘಿಸಿದೆ ಎಂದು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ನೀಡಿವೆ.

ಈ ಪರಿಸ್ಥಿತಿಯಲ್ಲಿ ಉಪ ಉತ್ಪನ್ನಗಳತ್ತ ಗಮನ ಹರಿಸುವುದೇ ಸಕ್ಕರೆ ಉದ್ಯಮದ ಸಂಕಷ್ಟಕ್ಕೆ ಪರಿಹಾರ. ಸಕ್ಕರೆ ಬದಲಿಗೆ ಕಬ್ಬಿನಿಂದ ಕಬ್ಬಿನ ಚಿಪ್ಪೆ, ವಿದ್ಯುತ್‌ ಉತ್ಪಾದನೆ, ಕಾಕಂಬಿ, ಇಥೆನಾಲ್ ಹಾಗೂ ಪ್ರೆಸ್‌ಮಡ್ ಉತ್ಪಾದಿಸಬೇಕಿದೆ. ಕೇಂದ್ರ ಸರ್ಕಾರ ಅದಕ್ಕೆ ಬೆಂಬಲ ನೀಡುತ್ತಿದೆ. ಪೆಟ್ರೋಲ್–ಡೀಸೆಲ್‌ನಲ್ಲಿ ಶೇ 10ರಷ್ಟು ಇಥೆನಾಲ್ ಬೆರೆಸಲು ಅವಕಾಶ ನೀಡಿ, ಇಥೆನಾಲ್ ಪ್ಲಾಂಟ್ ಹಾಕಲು ಕಡಿಮೆ ಬಡ್ಡಿ ಹಾಗೂ ಬಡ್ಡಿ ರಹಿತ ಸಾಲ, ಸಬ್ಸಿಡಿ ನೀಡುತ್ತಿದೆ.

ನಿಗದಿತ ದರ ಕೊಡಿ

ಇಥೆನಾಲ್‌ಗೆ ಪ್ರತಿ ಲೀಟರ್‌ಗೆ (ಈಗಿನ ದರ ₹41 ಇದೆ) ಇಂತಿಷ್ಟು ದರ ನಿಗದಿ ಮಾಡಿ ಸತತ ಮೂರು ವರ್ಷ ಅದೇ ಬೆಲೆ ಕೊಡುವಂತೆ ಸಕ್ಕರೆ ಕಾರ್ಖಾನೆಗಳು ಬೇಡಿಕೆ ಇಟ್ಟಿವೆ. ಹೀಗಾಗಿ ಕೇಂದ್ರದ ನೆರವು ಬಳಸಿಕೊಂಡು ಘಟಕ ಆರಂಭಿಸಲು ಇನ್ನೂ ಯಾರೂ ಮುಂದಾಗಿಲ್ಲ. ಅರ್ಜಿ ಕರೆದರೂ ರಾಜ್ಯದ 67 ಕಾರ್ಖಾನೆಗಳ ಪೈಕಿ ಬೆಳಗಾವಿಯ ರೇಣುಕಾ ಶುಗರ್ಸ್ ಮಾತ್ರ ಆಸಕ್ತಿ ತೋರಿದೆ ಎಂದು ರಾಜ್ಯ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಳೆ ರಜೆ ಕೊಡಿ

‘ಸಕ್ಕರೆ ಉದ್ಯಮದ ಬಿಕ್ಕಟ್ಟಿನ ಬಗ್ಗೆ ರೈತರಿಗೂ ವಾಸ್ತವಾಂಶ ತಿಳಿಸಿಕೊಡುವ ಜೊತೆಗೆ ಕನಿಷ್ಠ ಒಂದು ವರ್ಷ ಕಬ್ಬು ಬೆಳೆಗೆ ಪ್ರೋತ್ಸಾಹ ನಿಲ್ಲಿಸಬೇಕಿದೆ. ಹೆಚ್ಚು ಇಳುವರಿ ಕೊಡುವ ಉತ್ತಮ ತಳಿ ಬೆಳೆಯಲು ಹಾಗೂ ಕೊಯ್ಲೋತ್ತರ ನಿರ್ವಹಣೆ ಬಗ್ಗೆ ಅರಿವು ಮೂಡಿಸಬೇಕು. ಉಪ ಉತ್ಪನ್ನಗಳಿಂದ ಬರುವ ಲಾಭಾಂಶದಲ್ಲಿ ಸ್ವಲ್ಪ ಭಾಗವನ್ನು ಬೆಳೆಗಾರನಿಗೂ ಪಾಲು ನೀಡಿದಲ್ಲಿ ರೈತರು – ಕಾರ್ಖಾನೆ ಮಾಲೀಕರ ನಡುವಿನ ಕಂದಕ ಕಡಿಮೆಯಾಗಲಿದೆ’ ಎನ್ನುತ್ತಾರೆ.

ಬರೆ ಹಾಕಿದ ‘ನೆರೆ’

ಹೋದ ವರ್ಷ ರಾಜ್ಯದಲ್ಲಿ 3.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 3.10 ಕೋಟಿ ಟನ್‌ ಇಳುವರಿ ಬಂದಿತ್ತು. ಈ ಬಾರಿ 5 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹವು ಬೆಳೆಗಾರರಿಗೆ ‘ಬರೆ’ ಹಾಕಿದೆ. ಪ್ರಾಥಮಿಕ ಸಮೀಕ್ಷೆ ಪ್ರಕಾರ 2.50 ಲಕ್ಷ ಹೆಕ್ಟೇರ್‌ ಕಬ್ಬು ಬೆಳೆ ಹಾನಿಗೊಳಗಾಗಿದೆ. ಬೆಳಗಾವಿಯೊಂದರಲ್ಲೇ ಈ ಪ್ರಮಾಣ 1.50 ಲಕ್ಷ ಹೆಕ್ಟೇರ್‌. ನೆರೆಯಿಂದಾಗಿ ಈ ಬಾರಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿಯಲಿದೆ.

‌ಬೆಳೆಗಾರರು ಏನು ಮಾಡಬೇಕು?

* ನಿಗದಿತ ಪ್ರದೇಶದಲ್ಲಷ್ಟೇ ಕಬ್ಬು ಬೆಳೆಯಬೇಕು, ಆಗ ಒಳ್ಳೆ ಬೆಲೆ ಸಿಗುತ್ತದೆ

* ಹನಿ ನೀರಾವರಿಯಂತಹ ಸುಧಾರಿತ ಪದ್ಧತಿ ಅಳವಡಿಸಿಕೊಳ್ಳಬೇಕು

* ಕಡಿಮೆ ನೀರು, ರಸಗೊಬ್ಬರ ಬಳಸಬೇಕು

* 5–6 ಅಡಿಗೊಂದು ಸಾಲು ಮಾಡಬೇಕು

* ಒಂಟಿ ಕಣ್ಣಿನ ನಾಟಿ ಪದ್ಧತಿ ಅನುಸರಿಸಬೇಕು

* ಸುಧಾರಿತ ತಳಿಗಳನ್ನು ಬಿತ್ತನೆ ಮಾಡಬೇಕು

* ಅಂತರ ಬೆಳೆ ಬೇಸಾಯ ಪದ್ಧತಿ ಅನುಸರಿಸಬೇಕು

ಸರ್ಕಾರ ಏನು ಮಾಡಬೇಕು?

‘ಕರ್ನಾಟಕ ಕಬ್ಬು ಬೆಳೆ ನಿಯಂತ್ರಣ, ಖರೀದಿ, ಸರಬರಾಜು ಕಾಯ್ದೆ 2013ಕ್ಕೆ ತಿದ್ದುಪಡಿ ತಂದು, 14 ದಿನಗಳಲ್ಲಿ ಹಣ ಪಾವತಿಸದಿದ್ದರೆ ಅಂತಹ ಕಾರ್ಖಾನೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಮತ್ತು ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಸಕಾಲದಲ್ಲಿ ಹಣ ಕೊಡಿಸಬೇಕು. ಕಾರ್ಖಾನೆಗಳಲ್ಲಿ ಎಥೆನಾಲ್‌ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆ ಲಾಭದಲ್ಲಿ ಬೆಳೆಗಾರರಿಗೆ ‘ಪಾಲು’ ಸಿಗುವಂತೆ ನೋಡಿಕೊಳ್ಳಬೇಕು. ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಬೆಲೆ ಕೊಟ್ಟರೆ ಬೆಳೆಗಾರರಿಗೆ ಸಾಲದ ಅಗತ್ಯವೇ ಬೀಳುವುದಿಲ್ಲ’ ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌.

* ಪ್ರವಾಹ ಕಡಿಮೆಯಾದ ಬಳಿಕ ನೀರು ಬೇಗ ಬಸಿದು ಹೋಗುವ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಹಾನಿಯಾಗಿದ್ದಲ್ಲಿ ಕಟಾವು ಮಾಡಿ ಕೂಳೆ ಕಬ್ಬನ್ನಾಗಿ ಬೆಳೆಯಬಹುದು. ರಂಜಕ ಗೊಬ್ಬರ ಹೆಚ್ಚಾಗಿ ಹಾಕಬೇಕು. ಇದರಿಂದ ಬೆಳೆಯಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

–ಡಾ.ಆರ್‌.ಬಿ. ಖಾಂಡಗಾವೆ
ನಿರ್ದೇಶಕರು, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ

* ಕೈಗೆ ಬಂದ ತುತ್ತು ಪ್ರವಾಹದಿಂದಾಗಿ ಬಾಯಿಗೆ ಬಾರದಂತಾಗಿ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಜಮೀನಿನ ಫಲವತ್ತತೆ ಹೆಚ್ಚಿಸುವ ಸವಾಲನ್ನು ಅವರು ಎದುರಿಸಬೇಕಾಗಿದೆ. ಹೀಗಾಗಿ, ಸರ್ಕಾರವು ನೆರವಾಗಬೇಕು.

–ಕುರುಬೂರು ಶಾಂತಕುಮಾರ್
ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT