ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷಾಟನೆಗೆ ಬೇಯುತಿವೆ ಕೂಸುಗಳು: ಯಾರದ್ದೋ ಮಗು, ಯಾರೋ ತಾಯಿ, ಮುಗ್ದತೆಯೇ ಬಂಡವಾಳ

ಭಿಕ್ಷಾಟನೆ ಮಾಫಿಯಾ
Last Updated 20 ಏಪ್ರಿಲ್ 2019, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಭವತಿ ಭಿಕ್ಷಾಂದೇಹಿ’ ಎಂಬ ಸಪ್ತಾಕ್ಷರಿ ಮಂತ್ರ ಒಂದು ಕಾಲದಲ್ಲಿ ಭಕ್ತಿಮಾರ್ಗದ ದಾರಿಯಾಗಿತ್ತು. ಗುರುಕುಲದ ವಿದ್ಯಾರ್ಥಿಗಳು ಭಿಕ್ಷಾನ್ನ ಸಂಗ್ರಹಿಸಿ, ಗುರುಗಳಿಗೆ ಒಪ್ಪಿಸಿ, ಎಲ್ಲರಿಗೂ ಹಂಚಿ ಉಣ್ಣುವ ಧಾರ್ಮಿಕ ಪದ್ಧತಿಯೂ ಆಗಿತ್ತು. ಆದರೀಗ ದುಡ್ಡು ಎನ್ನುವ ಮಾಯಾಂಗನೆ ‘ಭಿಕ್ಷಾಟನೆ’ಯ ಸ್ವರೂಪವನ್ನೇ ತಿರುಚಿ ಅದನ್ನು ದೊಡ್ಡ ದಂಧೆಯಾಗಿ ಬದಲಾಯಿಸಿದೆ. ಈ ಮಾಫಿಯಾದ ಸೂತ್ರಧಾರರು ಬಾಡಿಗೆ ತಾಯಂದಿರು–ಅಮಾಯಕ ಮಕ್ಕಳನ್ನೇ ಬಳಸಿಕೊಂಡು ಕೋಟಿ–ಕೋಟಿ ನುಂಗುತ್ತಿದ್ದಾರೆ!

ಹಣ ಗಳಿಕೆಯ ವ್ಯಾಮೋಹಕ್ಕೆ ಬಿದ್ದಿರುವ ಪಾತಕಿಗಳು, ಮನುಷ್ಯತ್ವವನ್ನೇ ಮರೆತು ವ್ಯವಹರಿಸುತ್ತಿದ್ದಾರೆ. ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾರದ್ದೋ ಕೂಸನ್ನಿಟ್ಟು ಭಿಕ್ಷೆಗೆ ತಳ್ಳುತ್ತಿದ್ದಾರೆ. 4 ರಿಂದ 10 ವರ್ಷದ ಮಕ್ಕಳ ಮೈ–ಕೈಗಳಿಗೆ ಆ್ಯಸಿಡ್ ಸುರಿದು ತಾವೇ ಗಾಯ ಮಾಡುತ್ತಿದ್ದಾರೆ. ಕೈ–ಕಾಲುಗಳನ್ನು ಊನಗಳಿಸುತ್ತಿದ್ದಾರೆ. ಕಲಬುರ್ಗಿಯಲ್ಲಿ ಇತ್ತೀಚೆಗೆ ಬಾಲಕರ ಕಿರುನಾಲಗೆಯನ್ನೇ ಕತ್ತರಿಸಿರುವ ನಿದರ್ಶನವಿದೆ... ಇವೆಲ್ಲ ‘ಅನುಕಂಪ’ಕ್ಕಾಗಿ. ಅದೇ ಅವರ ಬಂಡವಾಳ. ಅನುಕಂಪ ಹೆಚ್ಚಾದಷ್ಟು, ತಮ್ಮ ಜೇಬೂ ಹೆಚ್ಚು ತುಂಬುತ್ತದೆ ಎಂಬುದು ಅವರ ‘ಸಿದ್ಧಾಂತ’.

ಎಲ್ಲಿ ಜನದಟ್ಟಣೆ ಇರುತ್ತದೆ? ಯಾವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ? ಯಾವ ಊರಿನಲ್ಲಿ ಜಾತ್ರೆ–ಉತ್ಸವಗಳಿವೆ? ಯಾವ ಪ್ರವಾಸಿ ತಾಣಗಳಿಗೆ ವಿದೇಶಿಗರು ಹೆಚ್ಚಾಗಿ ಬರುತ್ತಾರೆ.. ಹೀಗೆ, ರಾಜ್ಯದ ಮೂಲೆ–ಮೂಲೆಯ ವಿದ್ಯಾಮಾನಗಳ ಬಗ್ಗೆಯೂ ದಂಧೆಕೋರರು ಅಧ್ಯಯನ ನಡೆಸಿರುತ್ತಾರೆ. ತಮ್ಮ ಏಜೆಂಟ್‌ಗಳ ಮೂಲಕ ಮಹಿಳೆಯರು–ಮಕ್ಕಳನ್ನು ಆ ಭಾಗಗಳಲ್ಲಿ ಬಿಡುತ್ತಾರೆ.

ಟ್ರಾಫಿಕ್ ಸಿಗ್ನಲ್‌ಗಳಲ್ಲಂತೂ ವಾಹನಗಳನ್ನು ನಿಲ್ಲಿಸಿದ ತಕ್ಷಣ ಮಹಿಳೆಯರು ಎಳೆ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಸಂಧಿ–ಗೊಂದಿ ಗಳಿಂದ ನುಗ್ಗಿಬಿಡುತ್ತಾರೆ. ‘ಒಮ್ಮೆ ಸಿಗ್ನಲ್ ಬಿಡುವಷ್ಟರಲ್ಲಿ ಒಬ್ಬೊಬ್ಬರು ₹ 40 ರಿಂದ ₹ 60ರವರೆಗೆ ಸಂಗ್ರಹಿಸುತ್ತಾರೆ. ಬೆಂಗಳೂರು ಮಾತ್ರವಲ್ಲದೆ ಕಲಬುರ್ಗಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಮೈಸೂರಿನಲ್ಲೂ ಈ ಮಾಫಿಯಾ ಸಕ್ರಿಯವಾಗಿದೆ’ ಎನ್ನುತ್ತವೆ ಸರ್ಕಾರೇತರ ಸಂಸ್ಥೆಗಳ ಸಮೀಕ್ಷಾ ವರದಿಗಳು.

ಭಿಕ್ಷಾಟನೆಯ ಸ್ವರೂಪ: ‘ಇಟ್ಟಿಗೆ ಗೂಡುಗಳಲ್ಲಿ, ಬ್ಯಾಗ್ ತಯಾರಿಕಾ ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಏಜೆಂಟ್‌ಗಳು ಒಡಿಶಾ, ಬಿಹಾರ, ಜಾರ್ಖಂಡ್, ಉತ್ತರಪ್ರದೇಶ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಮಹಿಳೆಯರು ಹಾಗೂ ಮಕ್ಕಳನ್ನು ರಾಜ್ಯಕ್ಕೆ ಕರೆತರುತ್ತಾರೆ. ಹಾಗೆಯೇ ಕಡುಬಡವರೇ ನೆಲೆಸಿರುವ ಒಡಿಶಾದ ಬಲಾಂಗೀರ್‌ ಜಿಲ್ಲೆಯ ಗ್ರಾಮಗಳಲ್ಲಿ, ಪೋಷಕರಿಗೆ ಹಣ ಕೊಟ್ಟು ಹಸುಗೂಸುಗಳನ್ನು ಬಾಡಿಗೆಗೆ ತರುತ್ತಾರೆ’ ಎಂದು ‘ಚೈಲ್ಡ್ ಲೈನ್’ನ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮೀಪತಿ ವಿವರಿಸಿದರು.

‘ನಂತರ ನಗರಗಳ ಹೊರವಲಯದಲ್ಲಿ ಶೆಡ್‌ಗಳನ್ನು ಹಾಕಿ ಅವರಿಗೆ ವಸತಿ ಕಲ್ಪಿಸುತ್ತಾರೆ. ಅಲ್ಲಿ ನಾಲ್ಕೈದು ತಿಂಗಳು ಭಿಕ್ಷಾಟನೆಯ ಬಗ್ಗೆಯೇ ತರಬೇತಿ ಇರುತ್ತದೆ. ಯಾರ ಜತೆ ಹೇಗೆ ವರ್ತಿಸಬೇಕು? ಹೇಗೆ ಹಣ ಕೀಳಬೇಕು? ಪೊಲೀಸರು ಬಂದರೆ ಹೇಗೆ ತಪ್ಪಿಸಿಕೊಳ್ಳಬೇಕು... ಎಂಬುದು ಕಲಿಕೆಯ ವಿಷಯಗಳಾಗಿರುತ್ತವೆ.’

‘ಅದರಲ್ಲಿ ಅವರು ಪಕ್ವವಾದ ನಂತರ ಭಿಕ್ಷಾಟನೆಗೆ ಬೀದಿಗೆ ತಳ್ಳುತ್ತಾರೆ. ಇದು ತುಂಬ ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಈಗ ಭಿಕ್ಷಾಟನೆಯ ಆಯಾಮ ಸ್ವಲ್ಪ ಬದಲಾಗಿದೆ. ಹೂವು, ಪೆನ್ನು, ಬಲೂನು, ಕೀ ಚೈನ್‌, ಆಟಿಕೆಗಳನ್ನು ಮಾರುವ ನೆಪದಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿದ್ದಾರೆ. ಅವರನ್ನು ಬಾಲಕಾರ್ಮಿಕರು ಎಂದು ಪರಿಗಣಿಸಬೇಕೋ? ಭಿಕ್ಷುಕರು ಎನ್ನಬೇಕೋ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸುವ ಚಿಂತನೆಯೇ ಯಾರಿಗೂ ಇಲ್ಲ.’

‘ಹಸುಗೂಸುಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಕೆಮ್ಮಿನ ಸಿರಪ್ ಹಾಕಿಯೋ, ಗಾಂಜಾ ಸೊಪ್ಪಿನ ಹೊಗೆ ಅಥವಾ ಮದ್ಯ ಕುಡಿಸಿಯೋ ಪ್ರಜ್ಞೆ ತಪ್ಪಿಸುತ್ತಾರೆ. ಇದರಿಂದ ಸಂಜೆಯಾದರೂ ಅವು ಎಚ್ಚರಗೊಳ್ಳುವುದೇ ಇಲ್ಲ. ಭಿಕ್ಷೆಗೆ ತೆರಳುವ ಹೆಂಗಸಿನ ಜೋಳಿಗೆಯಲ್ಲಿ ಕೈ–ಕಾಲುಗಳು ಸ್ವಾಸ್ಥ್ಯ ಕಳೆದುಕೊಂಡಂತೆ ನೇತಾಡುತ್ತಿರುತ್ತವೆ. ಮಹಿಳೆಯರು ಆ ಮಗುವಿನ ಮುಖವನ್ನೇ ತೋರಿಸಿ ಹಣ ಬೇಡುತ್ತಾರೆ’ ಎಂದು ಲಕ್ಷ್ಮೀಪತಿ ಮಾಹಿತಿ ನೀಡಿದರು.

ಮಕ್ಕಳನ್ನು ಬಾಡಿಗೆಗೆ ತಂದು ಭಿಕ್ಷಾಟನೆಗೆ ದೂಡುವುದರ ಜತೆಗೆ ಮನೆಯಿಂದ ತಪ್ಪಿಸಿ ಕೊಂಡ ಹಾಗೂ ಅಪಹರಿಸಲಾದ ಮಕ್ಕಳನ್ನೂ ದಂಧೆಗೆ ಬಳಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಪೈಕಿ, ಇನ್ನು 1589 ಮಕ್ಕಳ ಸುಳಿವು ಈವರೆಗೂ ಸಿಕ್ಕಿಲ್ಲ. ಅವರೆಲ್ಲ ಭಿಕ್ಷಾಟನೆಯಂತಹ ದೊಡ್ಡ ದೊಡ್ಡ ಜಾಲಗಳಲ್ಲಿ ಸಿಲುಕಿರಬಹುದು ಎಂಬುದು ಪೊಲೀಸರ ಸಂಶಯ. ಹೀಗಾಗಿಯೇ, ಅವರ ಹುಡುಕಾಟದ ಹೊಣೆಯನ್ನು ಹೊಸದಾಗಿ ಸ್ಥಾಪಿಸಲಾಗಿರುವ ‘ಸಿಇಎನ್’ ಠಾಣೆಗಳಿಗೆ ವಹಿಸಿದ್ದಾರೆ.

₹60 ಕೋಟಿ ಆದಾಯ: ಭಿಕ್ಷಾಟನೆ ಮಾಫಿಯಾ ದಿಂದಲೇ ಮೂರು ರಾಜ್ಯಗಳಿಂದ (ಕರ್ನಾಟಕ, ಹೈದರಾಬಾದ್, ಮುಂಬೈ) ವಾರ್ಷಿಕ ₹ 60 ಕೋಟಿವರೆಗೆ ಸಂಗ್ರಹವಾಗುತ್ತಿದೆ. ಇದು ಭೂಗತ ಪಾತಕಿಗಳು, ಸ್ಥಳೀಯ ರೌಡಿಗಳು, ಕೆಲ ರಾಜಕಾರಣಿಗಳು ಹಾಗೂ ಪೊಲೀಸರ ಅಲಿಖಿತ ಒಪ್ಪಂದದ ನಡುವೆ ವ್ಯವಸ್ಥಿತವಾಗಿ ನಡೆಯುತ್ತಿರುವ ‘ಸಂಘಟಿತ ಅಪರಾಧ’ ಎಂಬ ಮಾತುಗಳೂ ಇವೆ.

ನಾಲಿಗೆ ಕತ್ತರಿಸಿದ ಕಿರಾತಕರು!

2018ರ ಜೂನ್‌ನಲ್ಲಿ ಕಲಬುರ್ಗಿ ಪೊಲೀಸರು ಭಿಕ್ಷಾಟನೆ ದಂಧೆ ನಡೆಸುತ್ತಿದ್ದ ಸ್ಥಳೀಯ ಸುದ್ದಿ ಪತ್ರಿಕೆಯೊಂದರ ನೌಕರ ಬಷೀರ್ ಆಲಂ ಹಾಗೂ ಉತ್ತರ ಪ್ರದೇಶದ ಮೂವರು ಮಹಿಳೆಯರನ್ನು ಬಂಧಿಸಿದ್ದರು. ಜಂಜಂ ಕಾಲೊನಿಯಲ್ಲಿ ಮನೆ ಬಾಡಿಗೆ ಪಡೆದಿದ್ದ ಆತ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ 15 ಮಕ್ಕಳಿಂದ ಭಿಕ್ಷಾಟನೆ ಮಾಡಿಸುತ್ತಿದ್ದ. ಆ ಮಕ್ಕಳನ್ನು ವೈದ್ಯಕೀಯ ತಪಾಸಣೆ ಮಾಡಿಸಿದಾಗ, ಕಿರುನಾಲಗೆ ತುಂಡಾಗಿತ್ತು. ಅವರ ಮಾತು ಸ್ಪಷ್ಟವಾಗಿ ಆಡಬಾರದೆಂದು ಹಾಗೆ ಮಾಡಲಾಗಿತ್ತು.

ಸರ್ಕಾರ ಏನು ಮಾಡಬೇಕು?

ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸುವುದು

ಭಿಕ್ಷಾಟನೆ ವಿರುದ್ಧ ಕಾರ್ಯಾಚರಣೆಗೆ ಸಮಿತಿ ರಚಿಸುವುದು

ರಕ್ಷಿಸಿದ ಮಕ್ಕಳ ಆರೈಕೆಗೆ ಪ್ರತ್ಯೇಕ ‘ಸ್ವೀಕಾರ’ ಕೇಂದ್ರಗಳನ್ನು ಸ್ಥಾಪಿಸುವುದು

ಮಾಫಿಯಾ ‘ಸೂತ್ರಧಾರ’ರ ಪತ್ತೆಗೆ ಕ್ರಮ ಜರುಗಿಸುವುದು

ಭಿಕ್ಷಾಟನೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು

* ಭಿಕ್ಷಾಟನೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ರಕ್ಷಣೆ ಕಾರ್ಯಾಚರಣೆಗೆ ಕರೆದರೆ ಪೊಲೀಸರು ಹೋಗುತ್ತಾರೆ. ಅದರ ಹಿಂದೆ ಮಾಫಿಯಾ ಕೈವಾಡವಿದ್ದರೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ

- ಎಂ.ಎ.ಸಲೀಂ, ಅಪರಾಧ ವಿಭಾಗದ ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT