ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ದ್ವೇಷ: ಯುವಕನ ಕೊಲೆ

ಕಮಲಾನಗರದಲ್ಲಿ ಘಟನೆ: ಇಬ್ಬರು ವಶಕ್ಕೆ, ವಿಚಾರಣೆ
Last Updated 26 ಜನವರಿ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನನ್ನು ಹಿಂಬಾಲಿಸಿದ ನಾಲ್ಕೈದು ಮಂದಿ ದುಷ್ಕರ್ಮಿಗಳು, ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ ಘಟನೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಕಮಲಾನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ನಗರದ ಸಿದ್ದೇಶ್ವರ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ಪಿಗ್ಮಿ ಮತ್ತು ಚೆಕ್ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಪ್ರಭು ಅಲಿಯಾಸ್ ಅಪ್ಪು (26) ಕೊಲೆಯಾದವರು. ಈ ಸಂಬಂಧ, ಸ್ಥಳೀಯ ನಿವಾಸಿಗಳಾದ ರಾಮಚಂದ್ರ ಮತ್ತು ಕರಿಯಾ ಎಂಬುವವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

‘ಆರೋಪಿಗಳು ಮತ್ತು ಪ್ರಭು ನಡುವೆ ಈ ಹಿಂದೆ ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಆಗಿತ್ತು. ಈ ಕಾರಣಕ್ಕೆ ಕೊಲೆ ನಡೆದಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ರಾತ್ರಿ 10.30ರ ಸುಮಾರಿಗೆ ಸ್ನೇಹಿತ ವಿನಯ್ ಎಂಬುವರ ಜತೆ ಕಮಲಾನಗರದ ಕುವೆಂಪು ವೃತ್ತದ ಬಳಿ ನಡೆದು ಹೋಗುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನಗಳಲ್ಲಿ ತಮ್ಮ ಸಹಚರರ ಜತೆ ಬಂದ ರಾಮಚಂದ್ರ ಮತ್ತು ಕರಿಯ, ಪ್ರಭು ಮತ್ತು ವಿನಯ್‍ನನ್ನು ಅಡ್ಡಗಟ್ಟಿ ಜಗಳ ತೆಗೆದಿದ್ದಾರೆ.

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಆಗ ವಿನಯ್ ಹಾಗೂ ಪ್ರಭು ಅಲ್ಲೇ ಇದ್ದ ಚಾಕುವಿನಿಂದ ಆರೋಪಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅದರಿಂದ ಆಕ್ರೋಶಗೊಂಡ ಆರೋಪಿಗಳು, ಅದೇ ಚಾಕುವನ್ನು ಕಸಿದುಕೊಂಡು ಪ್ರಭುಗೆ ಹಲವು ಬಾರಿ ಇರಿದು ಪರಾರಿಯಾಗಿದ್ದರು. ವಿನಯ್‍ಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದರು.

ವಿಡಿಯೊ ವೈರಲ್: ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಭು ಅವರನ್ನು ಅವರಸಂಬಂಧಿ ಎನ್ನಲಾದ ಇಬ್ಬರು ಮಹಿಳೆಯರು ಆಸ್ಪತ್ರೆಗೆ ಕರೆದೊಯ್ಯುವಂತೆ ಸಾರ್ವಜನಿಕರಲ್ಲಿ ಅಂಗಲಾಚುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಯಾರಾದರೂ ಆಟೊ ಅಥವಾ ಕಾರು ತೆಗೆಯಿರಪ್ಪ, ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂದು ಆ ಮಹಿಳೆಯರು ಗೋಳಾಡಿದ್ದಾರೆ. ಆದರೆ, ಯಾರೂ ನೆರವಿಗೆ ಬಂದಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

‌ಬಸವೇಶ್ವರನಗರ ಠಾಣೆ ಪೊಲೀಸರು ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರ ವಶದಲ್ಲಿರುವ ಆರೋಪಿಗಳು, ಮನೆ ಮುಂದೆ ನಿಲ್ಲಿಸುತ್ತಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳ ಗಾಜುಗಳನ್ನು ಪುಡಿ ಮಾಡಿದ್ದ ಪ್ರಕರಣಗಳಲ್ಲಿಭಾಗಿಯಾಗಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ. ಈ ಸಂಬಂಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT