ಬುಧವಾರ, ಏಪ್ರಿಲ್ 1, 2020
19 °C
ಅತ್ಯಾಧುನಿಕ ಸೌಲಭ್ಯವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸರ್ಕಾರಿ ಶಾಲೆ ‘ಹೈಟೆಕ್‌’ ಮಾಡಿದ ಹಳೆ ವಿದ್ಯಾರ್ಥಿ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕು ರಂಗಾಪುರ ಕ್ಯಾಂಪ್‌ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣ ಗುಡಿಸಲಿನಲ್ಲಿ ನಡೆಯುತ್ತಿದ್ದಾಗ ವಿದ್ಯಾಭ್ಯಾಸ ಮಾಡಿದ್ದ ಪಿ.ವಿ.ರಾವ್‌ ಅವರು ಈಗ ಉದ್ಯಮಿ. ತಾವು ಕಲಿತ ಶಾಲೆಗೆ ನಿವೇಶನ ಖರೀದಿಸಿ ಹೈಟೆಕ್‌ ಸೌಲಭ್ಯ ಹೊಂದಿರುವ ಕಟ್ಟಡವನ್ನೂ ನಿರ್ಮಿಸಿಕೊಟ್ಟಿದ್ದಾರೆ.

ಹಳೆ ವಿದ್ಯಾರ್ಥಿಯ ಔದಾರ್ಯ ದಿಂದ ನಿರ್ಮಾಣವಾಗಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನೋಡಲು ಜನ ಬರುತ್ತಿದ್ದಾರೆ. 22 ಗುಂಟೆ ವಿಸ್ತಾರದಲ್ಲಿರುವ ಶಾಲೆಗೆ ಸುಂದರ ಆವರಣ ಗೋಡೆ, ಸ್ವಾಗತ ಕಮಾನು, 10 ಕೊಠಡಿ ಗಳಿರುವ ‘ಎಲ್‌’ ಆಕಾರದ ಕಟ್ಟಡ, ಅದಕ್ಕೆ ಹೊಂದಿಕೊಂಡು ಬಾಲಕ, ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.

ಆವರಣ ಮಧ್ಯೆ ಬಯಲು ವೇದಿಕೆ, ಮಧ್ಯಾಹ್ನ ಬಿಸಿಯೂಟಕ್ಕಾಗಿ ಪ್ರತ್ಯೇಕ ಭೋಜನಾಲಯ, ಗ್ರಂಥಾಲಯ, ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಕೈ ತೊಳೆಯಲು ಸೆನ್ಸರ್‌ ನಲ್ಲಿಗಳಿವೆ. ಶಾಲಾ ಕೊಠಡಿಗಳಲ್ಲಿ ಪೂರಕ
ವಾಗಿ ಕಲಾಕೃತಿಗಳನ್ನೂ ಬಿಡಿಸಲಾಗಿದೆ.

ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ 122 ವಿದ್ಯಾರ್ಥಿಗಳು ಓದು ತ್ತಿದ್ದಾರೆ. ಆರು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಕ್ಕಟ್ಟಾಗಿದ್ದ ಶಾಲಾ ಕೋಣೆಗಳಿಂದ ಅತ್ಯಾಧುನಿಕ ಶಾಲೆಗೆ ಸ್ಥಳಾಂತರವಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂತೋಷ ಇಮ್ಮಡಿಸಿದೆ.

‘ಅಂದಾಜು ₹2 ಕೋಟಿ ವೆಚ್ಚದಲ್ಲಿ ಒಂದೇ ವರ್ಷದಲ್ಲಿ ಶಾಲೆ ಕಟ್ಟಿಸಿಕೊಟ್ಟಿದ್ದಾರೆ. ಗುಣಮಟ್ಟದಲ್ಲಿ ರಾಜಿಮಾಡಿಕೊಂಡಿಲ್ಲ. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಹುಸೇನಪ್ಪ, ಮುಖ್ಯ ಶಿಕ್ಷಕ ಭೀಮನಗೌಡ ಮೋಕಾಶಿ.

ಪಿ.ವಿ.ರಾವ್‌ ಓದುತ್ತಿದ್ದ 1968ರ ಅವಧಿಯಲ್ಲಿ ರಂಗಾಪುರ ಕ್ಯಾಂಪ್‌ ಸರ್ಕಾರಿ ಶಾಲೆ ಗುಡಿಸಲಿನಲ್ಲಿ ಇತ್ತು. ನಂತರ 5 ಕೊಠಡಿ ನಿರ್ಮಿಸಿದ್ದು, ಅದು ಇಕ್ಕಟ್ಟಾಗಿತ್ತು. ಗಾಳಿ, ಬೆಳಕಿಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತಿದ್ದರು.

ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಶೇಖ ಸಾಹೇಬ್‌ ಹಾಗೂ ಗ್ರಾಮಸ್ಥರು ಒಟ್ಟಾಗಿ ಸರ್ಕಾರಿ ಶಾಲೆಯ ಸಮಸ್ಯೆಯನ್ನು ಪಿ.ವಿ. ರಾವ್‌ ಗಮನಕ್ಕೆ
ತಂದಿದ್ದರು. ಸಮಸ್ಯೆ ಆಲಿಸುತ್ತಿದ್ದಂತೆ ತಾವೇ ಕೊಠಡಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದ ರಾವ್‌, ಅದರಂತೆ ಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ.

*
ನಮ್ಮೂರಿನ ಬಡ ಮಕ್ಕಳು ಉತ್ತಮ ಕಟ್ಟಡವಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿ ಎಂದು ಹೊಸ ಕಟ್ಟಡ ನಿರ್ಮಿಸಿ ಕೊಟ್ಟಿದ್ದೇನೆ.
-ಪಿ.ವಿ.ರಾವ್‌, ಅಮೃತಾ ಫೌಂಡೇಷನ್‌ ಮುಖ್ಯಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು