1 ಲಕ್ಷ ಬಟ್ಟೆ ಚೀಲ ವಿತರಣೆ

7
ಹುಕ್ಕೇರಿ ಹಿರೇಮಠದ ‘ಪ್ಲಾಸ್ಟಿಕ್‌ ಮುಕ್ತ’ ಅಭಿಯಾನ

1 ಲಕ್ಷ ಬಟ್ಟೆ ಚೀಲ ವಿತರಣೆ

Published:
Updated:
Deccan Herald

ಬೆಳಗಾವಿ: ರಾಜ್ಯೋತ್ಸವದ ಮೆರವಣಿಗೆ ವೇಳೆ 50,000ಕ್ಕೂ ಹೆಚ್ಚು ಜನರಿಗೆ ಹೋಳಿಗೆ ಊಟ ಹಾಕಿಸುವ ಮೂಲಕ ಗಮನ ಸೆಳೆದಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀಗಳು, ಇದೀಗ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಅಭಿಯಾನ ಹಮ್ಮಿಕೊಂಡಿದ್ದಾರೆ. 

ಹತ್ತಿ ಬಟ್ಟೆಯಿಂದ ತಯಾರಿಸಿದ 1 ಲಕ್ಷಕ್ಕೂ ಹೆಚ್ಚು ಕೈಚೀಲಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ.

ಮಾರುಕಟ್ಟೆಯಿಂದ ವಸ್ತುಗಳನ್ನು ತರಲು ಜನರು ಪ್ಲಾಸ್ಟಿಕ್‌ ಚೀಲ ಬಳಸುತ್ತಾರೆ. ನಂತರ ಅವುಗಳನ್ನು ಎಸೆದುಬಿಡುತ್ತಾರೆ. ಇವು ನಾಶವಾಗದೆ, ಮಣ್ಣಿನಲ್ಲಿ, ಜಲಮೂಲಗಳಲ್ಲಿ, ಚರಂಡಿಗಳಲ್ಲಿ ಸಿಲುಕಿಕೊಂಡು ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಇವುಗಳ ಬಳಕೆ ತಡೆದರೆ ಮಾತ್ರ ‘ಪ್ಲಾಸ್ಟಿಕ್‌ ಮುಕ್ತ ಭಾರತ’ ನಿರ್ಮಿಸಲು ಸಾಧ್ಯ ಎನ್ನುವುದು ಸ್ವಾಮೀಜಿ ಅವರ ಸ್ಪಷ್ಟನುಡಿ.

ಮಠದ ಭಕ್ತರು, ಅನುಯಾಯಿಗಳಿಂದ ಆರ್ಥಿಕ ಸಹಾಯ ಪಡೆದು ಬೆಂಗಳೂರಿನಿಂದ ಕೈಚೀಲ ಖರೀದಿಸಿದ್ದು, ಸಾರ್ವಜನಿಕರಿಗೆ ಹಂಚುತ್ತಿದ್ದಾರೆ. ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ , ಮಠಕ್ಕೆ ಬರುವ ಭಕ್ತರಿಗೆ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆಲ್ಲರಿಗೆ ಡಿಸೆಂಬರ್‌ವರೆಗೂ ಹಂತ ಹಂತವಾಗಿ ವಿತರಿಸುವ ಯೋಜನೆ ಇದೆ ಎನ್ನುತ್ತಾರೆ ಅವರು.

‘ಬಟ್ಟೆಯ ಕೈಚೀಲವನ್ನು ಜತೆಯಲ್ಲಿ ಇಟ್ಟುಕೊಳ್ಳುವುದನ್ನು ಜನರು ರೂಢಿ ಮಾಡಿಕೊಳ್ಳಬೇಕು. ಮಾರುಕಟ್ಟೆಯಿಂದ ವಸ್ತುಗಳನ್ನು ಖರೀದಿಸಿದಾಗ ಅದರಲ್ಲಿ ಕೊಂಡೊಯ್ಯಬೇಕು. ಈ ರೀತಿ ಮಾಡಿದರೆ ಪ್ಲಾಸ್ಟಿಕ್‌ ಚೀಲ ಬಳಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದು’ ಎನ್ನುತ್ತಾರೆ ಸ್ವಾಮೀಜಿ. 

ಚೀಲದ ಮೇಲೆ ಲಾಂಛನ: ಉತ್ತಮ ಗುಣಮಟ್ಟದ ಹತ್ತಿ ಬಟ್ಟೆಯಿಂದ ಚೀಲಗಳನ್ನು ತಯಾರಿಸಲಾಗಿದ್ದು, ಅವುಗಳ ಮೇಲೆ ಮಠದ ಲಾಂಛನ ಹಾಗೂ ‘ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನ, ಹುಕ್ಕೇರಿ ಹಿರೇಮಠ’ ಎಂದು ಮುದ್ರಿಸಲಾಗಿದೆ. 

ಜೋಳಿಗೆ ಹಣದಲ್ಲಿ ಖರೀದಿ: ದೀಕ್ಷೆ ಪಡೆದ ಹಲವು ಭಕ್ತರು ನೀಡಿದ ಕಾಣಿಕೆ, ಭಿಕ್ಷಾಟನೆ ಮೂಲಕ ಸಂಗ್ರಹಿಸಿದ ಹಣವನ್ನೂ ಈ ಕಾರ್ಯಕ್ಕೆ ವಿನಿಯೋಗಿಸಲಾಗಿದೆ ಎನ್ನುತ್ತಾರೆ ಸ್ವಾಮೀಜಿ. ಜನಪ್ರತಿನಿಧಿಗಳು, ಮಠದ ಭಕ್ತರು ಹಾಗೂ ಸಾರ್ವಜನಿಕರು ಸಹ ಸಹಾಯ ಮಾಡಿದ್ದಾರೆ ಎಂದು ಸ್ಮರಿಸುತ್ತಾರೆ.

ಕೈಚೀಲ ಖರೀದಿಸಲು ಅಮೆರಿಕ, ಆಸ್ಟ್ರೇಲಿಯಾ ಹಾಗೂ ಕತಾರ್‌ನಲ್ಲಿರುವ ಕನ್ನಡಿಗರೂ ಆರ್ಥಿಕ ಸಹಾಯ ಮಾಡಿದ್ದಾರೆ. ಅವರಿಗೂ ಕೈಚೀಲಗಳನ್ನು ಕಳುಹಿಸಿಕೊಡಲಾಗುವುದು ಎಂದು ಚಂದ್ರಶೇಖರ ಶ್ರೀಗಳು ಹೇಳಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !