ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಪ‍್ರವೇಶ, ಪರೀಕ್ಷೆಗೆ ಏಕರೂಪ ಪದ್ಧತಿ: ಜಿ.ಟಿ. ದೇವೇಗೌಡ

ಅತಿಥಿ ಉಪನ್ಯಾಸಕರಿಗೆ ಶೇ 50ರಷ್ಟು ಹುದ್ದೆ
Last Updated 24 ಜನವರಿ 2019, 17:46 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪ‍್ರವೇಶ ಹಾಗೂ ಪರೀಕ್ಷೆಗಳಲ್ಲಿ ಏಕರೂಪ ಪದ್ಧತಿ ಜಾರಿಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ತಮ್ಮದೇ ಆದ ರೀತಿಯಲ್ಲಿ ಪ್ರವೇಶ ಕ್ರಮ, ಶುಲ್ಕ, ಪರೀಕ್ಷಾ ಪದ್ಧತಿ ಹಾಗೂ ನೇಮಕಾತಿ ವಿಧಾನಗಳನ್ನು ಹೊಂದಿವೆ. ಪರೀಕ್ಷೆ ಮತ್ತು ಪ್ರವೇಶ ವ್ಯವಸ್ಥೆ ಬೇರೆ ಬೇರೆ ರೀತಿಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಇದನ್ನು ತಪ್ಪಿಸಲು ಒಂದೇ ಮಾದರಿಯ ವ್ಯವಸ್ಥೆಯನ್ನು ತರಲಾಗುವುದು ಎಂದು ತಿಳಿಸಿದರು.

ಪದವಿ ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಆಗಬೇಕಿದೆ. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಸಮಿತಿ ವರದಿ ಆಧರಿಸಿ ಪರಿಷ್ಕೃತ ಪಠ್ಯಕ್ರಮ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ರೈಲ್ವೆ ಇಲಾಖೆಯು ನೇಮಕಾತಿಗಾಗಿ ಅರ್ಜಿ ಕರೆದಿದೆ. ಕರ್ನಾಟಕದಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತರು ಇದ್ದರೂ ಪರೀಕ್ಷೆ ಎದುರಿಸುವ ಬಗ್ಗೆ ಸೂಕ್ತ ತರಬೇತಿ ಹಾಗೂ ತಯಾರಿ ಇಲ್ಲದೇ ಇರುವುದರಿಂದ ಹಿಂದೆ ಬಿದ್ದಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ತರಬೇತಿ ನೀಡಲು ನಿಶ್ಚಯಿಸಲಾಗಿದೆ ಎಂದು ದೇವೇಗೌಡ ಹೇಳಿದರು.

ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳನ್ನು ಬರೆಯಲು ಹೆಚ್ಚಿನ ಸಿದ್ಧತೆ ಮತ್ತು ತರಬೇತಿ ಅಗತ್ಯ. ಪದವೀಧರರು ಉದ್ಯೋಗ ಪಡೆಯಲು ನೆರವಾಗುವ ಉದ್ದೇಶದಿಂದ ತರಬೇತಿ ನೀಡುವ ಬಗ್ಗೆ ಇಲಾಖೆ ಗಂಭೀರ ಆಲೋಚನೆ ನಡೆಸಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕೌಶಲಾಭಿವೃದ್ಧಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ ಎಂದರು.

ಅತಿಥಿ ಉಪನ್ಯಾಸಕರಿಗೆ ಶೇ 50ರಷ್ಟು ಹುದ್ದೆ: ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವಾಗ ಶೇ 50ರಷ್ಟು ಹುದ್ದೆಗಳನ್ನು ಹಾಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ನೀಡಲಾಗುವುದು ಎಂದು ಸಚಿವರು ಹೇಳಿದರು.

395 ಪ್ರಿನ್ಸಿಪಾಲರು ಹಾಗೂ 3,800 ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಮೆರಿಟ್ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬಡ್ತಿಗೆ ಕ್ರಮ:ಕಾಲೇಜುಗಳಲ್ಲಿರುವ ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕ ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಸೇವಾ ಹಿರಿತನ ಆಧರಿಸಿ ಪ್ರಿನ್ಸಿಪಾಲ್ ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆಯೂ ಆಲೋಚನೆ ಇದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮಾರ್ಗಸೂಚಿ ಆಧರಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT