ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿಗೆ ಎಲೆ ಚುಕ್ಕೆ, ಕೋತಿ ರೋಗ; ಅವಧಿಗೆ ಮುನ್ನ ಬಿತ್ತಿ ಕಂಗಾಲಾದ ರೈತರು

ಲಾಭದಾಸೆಗೆ ಅವಧಿಗೆ ಮುನ್ನ ಬಿತ್ತಿ ಕಂಗಾಲಾದ ರೈತರು
Last Updated 26 ಜನವರಿ 2020, 3:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಿನ್ನದ ಬೆಲೆ ಕಂಡ ಈರುಳ್ಳಿಗೆ ಮಾರುಹೋದ ರೈತರು ಅವಧಿಗೂ ಮುನ್ನವೇ ಬಿತ್ತನೆ ಮಾಡಿ ಪರಿತಪ್ಪಿಸುತ್ತಿದ್ದಾರೆ. ಎಲೆ ಚುಕ್ಕೆ ಹಾಗೂ ಕೋತಿ ರೋಗಕ್ಕೆ ಈರುಳ್ಳಿ ಇಳುವರಿ ಅರ್ಧದಷ್ಟು ಕಡಿಮೆಯಾಗುವ ಭೀತಿ ಬೆಳೆಗಾರರನ್ನು ಕಾಡತೊಡಗಿದೆ.

ಹುಲುಸಾಗಿ ಬೆಳೆದಿದ್ದ ಈರುಳ್ಳಿ ಗೆಡ್ಡೆ ಆಗುವ ಸಂದರ್ಭದಲ್ಲಿ ರೋಗಕ್ಕೆ ತುತ್ತಾಗಿದೆ. ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬಾರುತ್ತಿಲ್ಲ. ಹಿಂಗಾರು ಬೆಳೆಯಲ್ಲಿ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ರೈತರು ಕೈಚೆಲ್ಲಿದ್ದಾರೆ.

ಈರುಳ್ಳಿ ಬೆಲೆ ಕೆ.ಜಿ.ಗೆ ₹ 150ರ ಗಡಿ ದಾಟಿದ್ದು ಬೆಳೆಗಾರರಲ್ಲಿ ಹೊಸ ಆಸೆಯನ್ನು ಚಿಗುರಿಸಿತ್ತು. ಚಿತ್ರದುರ್ಗ ಸೇರಿ ಹಲವೆಡೆ ವಾಡಿಕೆಗಿಂತ ಹೆಚ್ಚು ಹಿಂಗಾರು ಈರುಳ್ಳಿ ಬಿತ್ತನೆ ಮಾಡಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಬಿತ್ತನೆ ಮಾಡಿದ ಈರುಳ್ಳಿಗೆ ಮಾತ್ರ ಈ ರೋಗ ಕಾಣಿಸಿಕೊಂಡಿದೆ.ಸಾಮಾನ್ಯವಾಗಿ ಹಿಂಗಾರು ಈರುಳ್ಳಿ ಬಿತ್ತನೆ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ನಡೆಯುತ್ತದೆ. ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದ ಈರುಳ್ಳಿ ಈಗಲೂ ಚೆನ್ನಾಗಿದೆ. ತಿಂಗಳು ಮೊದಲೇ ಬಿತ್ತನೆ ಮಾಡಿದ ಬೆಳೆಗೆ 60 ದಿನಗಳ ಬಳಿಕ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಕಾಲಕ್ರಮೇಣ ಕೋತಿ ರೋಗವೂ ಅಂಟಿಕೊಂಡಿದೆ.

ತೇವಾಂಶ ಹೆಚ್ಚಳ ಹಾಗೂ ವಾತಾವರಣದಲ್ಲಿ ಉಂಟಾಗುವ ಏರುಪೇರು ಈ ರೋಗಕ್ಕೆ ಕಾರಣವಾಗಿದೆ. ನವೆಂಬರ್‌ ಅಂತ್ಯದಲ್ಲಿ ಚಂಡಮಾರುತ ಬೀಸಿದ ಪರಿಣಾಮದಿಂದ ಮಳೆ ಸುರಿದು ವಾತಾವರಣ ತಂಪಾಗಿತ್ತು. ಹಲವು ದಿನ ಮೋಡ ಮುಸುಕಿದ ವಾತಾವರಣವಿದ್ದರಿಂದ ಎಲೆ ಚುಕ್ಕೆ ರೋಗ ಅಂಟಿಕೊಂಡಿತು. ಇದು ಈರುಳ್ಳಿ ಗೆಡ್ಡೆಯ ಬಣ್ಣದ ಮೇಲೆ ಪರಿಣಾಮ ಬೀರಿದೆ. ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆ 90ರಿಂದ 110 ದಿನಗಳಲ್ಲಿ ಕೈಗೆ ಸಿಗುತ್ತದೆ. ಹಿಂಗಾರು ಹಂಗಾಮಿನಲ್ಲಿ ಕನಿಷ್ಠ 120 ದಿನಗಳಾದರೂ ಬೇಕಾಗುತ್ತದೆ. ನೀರಿನ ಅಭಾವದ ಕಾರಣಕ್ಕೆ ಚಿತ್ರದುರ್ಗದಲ್ಲಿ ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬಿತ್ತನೆ ಮಾಡುವುದು ಕಡಿಮೆ. ಆದರೆ, ಈ ವರ್ಷ ಈರುಳ್ಳಿಗೆ ನಿರೀಕ್ಷೆ ಮೀರಿದ ಬೆಲೆ ಸಿಕ್ಕಿದ್ದರಿಂದ ಹೆಚ್ಚು ರೈತರು ಈರುಳ್ಳಿಯತ್ತ ಒಲವು ತೋರಿದ್ದಾರೆ.

‘ನಾಲ್ಕೂವರೆ ಎಕರೆಯಲ್ಲಿ ಈರುಳ್ಳಿ ಹಾಕಿದ್ದೇನೆ. ಸುಮಾರು 800 ಚೀಲ ಈರುಳ್ಳಿ ಬೆಳೆಯುವ ನಿರೀಕ್ಷೆ ಇತ್ತು. ಆದರೆ ರೋಗದಿಂದಾಗಿ ಅರ್ಧದಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಹೆಚ್ಚು ದಿನ ದಾಸ್ತಾನು ಮಾಡಿದರೆ ಈರುಳ್ಳಿ ಕೊಳೆತು ಹೋಗುತ್ತದೆ’ ಎಂದು ದೊಡ್ಡಸಿದ್ದವ್ವನಹಳ್ಳಿ ರೈತ ಮಲ್ಲಿಕಾರ್ಜುನ.

‘ಪ್ರತಿ ವರ್ಷ ಅದೇ ಭೂಮಿಗೆ ಈರುಳ್ಳಿ ಬಿತ್ತನೆ ಮಾಡುವುದರಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಬೆಳೆ ಬದಲಾವಣೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ
ವಿದೆ. ರೈತರ ಜಮೀನಿನಲ್ಲಿ ಈ ರೋಗ ಕಾಣಿಸಿಕೊಂಡಿದೆ’ ಎಂದು ತೋಟಗಾರಿಕೆ ಸಹಾಯಕ ಉಮೇಶ್‌ ತಿಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT