ಶನಿವಾರ, ಸೆಪ್ಟೆಂಬರ್ 18, 2021
28 °C
ಸರ್ಕಾರಕ್ಕೆ ತಜ್ಞರ ಸಮಿತಿ ಶಿಫಾರಸು

ಎಲ್‌ಕೆಜಿಯಿಂದಲೇ ಆನ್‌ಲೈನ್‌ ಪಾಠ: ಚಿಣ್ಣರಿಗೆ ವಾರಕ್ಕೆ 3 ಗಂಟೆ ಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಲ್‌ಕೆಜಿಯಿಂದಲೇ ಆನ್‌ಲೈನ್‌ ಶಿಕ್ಷಣ ನೀಡಬಹುದು. ಅಲ್ಲಿ ಪಾಠಕ್ಕಿಂತ ಆಟ, ಹೊಸ ರೀತಿಯ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು. 9–10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುವ ಆನ್‌ಲೈನ್‌ ಶಿಕ್ಷಣ ದಿನಕ್ಕೆ  ಗರಿಷ್ಠ ಮೂರು ಗಂಟೆ ಮೀರುವಂತಿಲ್ಲ.....’

ಕೋವಿಡ್ ಕಾಲದಲ್ಲಿ ಶಾಲಾ ಶಿಕ್ಷಣದಲ್ಲಿ ತಂತ್ರಜ್ಞಾನ ಆಧರಿತ ಕಲಿಕೆ ಮುಂದುವರಿಸುವ ಬಗ್ಗೆ ಸಲಹೆ ನೀಡಲು ರಚಿಸಲಾದ ಪ್ರೊ.ಎಂ.ಕೆ.ಶ್ರೀಧರ್ ಅಧ್ಯಕ್ಷತೆಯ ತಜ್ಞರ ಸಮಿತಿ ಸರ್ಕಾರಕ್ಕೆ ಮಂಗಳವಾರ ಸಲ್ಲಿಸಿದ ವರದಿಯ ಮುಖ್ಯಾಂಶಗಳಿವು.

3 ರಿಂದ 6 ವರ್ಷ ವಯಸ್ಸಿನ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟದ ಜತೆಗೆ ಕಥೆ, ಹಾಡು ಸೇರಿದಂತೆ ನವೀನ ಚಟುವಟಿಕೆಗಳ ಮೂಲಕ ಪಾಠ ಮಾಡಬೇಕು. ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ/ ಮುದ್ರಿತ ಬೋಧನಾ ವಿಧಾನಗಳಲ್ಲಿ ಪ್ರತಿದಿನ 30 ನಿಮಿಷದ ಒಂದು ಅವಧಿಯಂತೆ ವಾರಕ್ಕೆ ಮೂರು ದಿನ ಮಾತ್ರ ಕಲಿಸಬಹುದು. 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ಪ್ರತಿದಿನ 30 ನಿಮಿಷದ ಎರಡು ಅವಧಿಯಂತೆ ವಾರಕ್ಕೆ ಮೂರು ದಿನ ಕಲಿಕೆಗೆ ಅವಕಾಶ ನೀಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5 ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಬೋಧನೆಗೆ ನಿಗದಿಸಬಹುದು.  ಪಠ್ಯಕ್ಕೆ ಪೂರಕವಾದ ಬೋಧನೆಯನ್ನು ಅಳವಡಿಸಿಕೊಳ್ಳಬಹುದು. 6ರಿಂದ 8ನೇ ತರಗತಿಗೆ 30 ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ
ತರಗತಿಗೆ 30ರಿಂದ 45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಶಿಫಾರಸು ಮಾಡಲಾಗಿದೆ.

‘ವರದಿಯ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಆನ್‍ಲೈನ್ ಶಿಕ್ಷಣ ಕುರಿತ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡುವ ತೀರ್ಪಿನ ಅನುಸಾರವಾಗಿ ನಿಯಮಗಳನ್ನು ಸಿದ್ಧಪಡಿಸಲಾಗುವುದು’ ಎಂದು ವರದಿ ಸ್ವೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ತಿಳಿಸಿದರು.

‘ಸಮಿತಿಯಲ್ಲಿ ಸಮಾಜದ ಹಲವಾರು ಸ್ತರಗಳನ್ನು ಪ್ರತಿನಿಧಿಸುವ ಸದಸ್ಯರಿದ್ದರು. ಮಕ್ಕಳ ಹಿತವನ್ನೇ ಎಲ್ಲರೂ ಗಮನದಲ್ಲಿಟ್ಟುಕೊಂಡಿದ್ದರಿಂದ ಉತ್ತಮ ವರದಿಯನ್ನು ತಯಾರು ಮಾಡಲು ಸಾಧ್ಯವಾಯಿತು’ ಎಂದು ಸಮಿತಿ ಅಧ್ಯಕ್ಷ ಪ್ರೊ.ಎಂ.ಕೆ. ಶ್ರೀಧರ್ ಹೇಳಿದರು.

ಟಿಇಟಿ ಪರೀಕ್ಷೆ ಮುಂದೂಡಿಕೆ

ಇದೇ 12ರಂದು ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ಮುಂದೂಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಭಾನುವಾರಗಳಂದು ಲಾಕ್‌ಡೌನ್‌ ಘೋಷಿಸಿರುವುದು ಹಾಗೂ ತಾಂತ್ರಿಕ ಕಾರಣಗಳಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಪರಿಸ್ಥಿತಿ ನೋಡಿ ಪರಿಷ್ಕೃತ ದಿನಾಂಕ ಪ್ರಕಟಿಸಲಾಗುವುದು ಎಂದು ಸಚಿವ ಎಸ್‌.ಸುರೇಶ್‌ ಕುಮಾರ್ ತಿಳಿಸಿದ್ದಾರೆ.

ನೇಮಕಾತಿ ಕೌನ್ಸೆಲಿಂಗ್ ರದ್ದುಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿಡಿಯೊ ಸಂವಾದ ಮೂಲಕ ಬುಧವಾರದಿಂದ ನಡೆಸಲು ನಿಗದಿಯಾಗಿದ್ದ ಕೌನ್ಸೆಲಿಂಗ್ ಅನ್ನು ತಾಂತ್ರಿಕ ಕಾರಣಗಳಿಂದ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು