ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಹಂತದಿಂದ ಆನ್‌ಲೈನ್‌ ಶಿಕ್ಷಣ

ಪರಿಶೀಲನೆಗೆ ಮುಖ್ಯಮಂತ್ರಿ ಸೂಚನೆ* ಮಹಿಳಾ ವಿ.ವಿ. ವ್ಯಾಪ್ತಿ ಮೊಟಕು?
Last Updated 26 ಮೇ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ಆನ್‌ಲೈನ್ ತರಗತಿಗಳು ಯಶಸ್ವಿಯಾಗುತ್ತವೆ ಎಂಬುದಕ್ಕೆ ಸರ್ಕಾರದ ಸಿಇಟಿ ಕೋಚಿಂಗ್‌ ಸಾಕ್ಷಿಯಾಗಿದೆ. ಕಡಿಮೆ ವೆಚ್ಚದ ಈ ವ್ಯವಸ್ಥೆಯೇ ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಅಂದಾಜಿದ್ದು, ಇದನ್ನು ಪದವಿಪೂರ್ವ ಹಂತದಿಂದಲೇ ಪ್ರಾರಂಭಿಸುವ ಬಗ್ಗೆ ಪರಿಶೀಲಿಸಿ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್–19 ಹಿನ್ನೆಲೆಯಲ್ಲಿ ಸಿಇಟಿ ಕೋಚಿಂಗ್‌ ಅನ್ನು ಏಕಾಏಕಿಯಾಗಿ ಆನ್‌ಲೈನ್‌ನಲ್ಲಿ ನೀಡಬೇಕಾಯಿತು. ಇದು ಉಂಟುಮಾಡಿರುವ ಪರಿಣಾಮ ಆಶಾದಾಯಕ. ಮುಂದಿನ ದಿನಗಳಲ್ಲಿ ಪದವಿಪೂರ್ವ ಮತ್ತು ಪದವಿ ತರಗತಿಗಳನ್ನು ಯಶಸ್ವಿಯಾಗಿ ಆನ್‌ಲೈನ್‌ನಲ್ಲಿ ನಡೆಸುವ ವಿಶ್ವಾಸ ಮೂಡಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕು. ಗುಣಮಟ್ಟದ ಬೋಧನೆ ಇದರಿಂದ ಸಾಧ್ಯವಾಗಲಿದೆ’ ಎಂದು ಪ್ರತಿ‍‍ಪಾದಿಸಿದರು.

ಮಹಿಳಾ ವಿ.ವಿ ಅಧಿಕಾರ ಮೊಟಕು: ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ರಾಜ್ಯದ ಎಲ್ಲಾ ಭಾಗಗಳ ಮಹಿಳಾ ಕಾಲೇಜುಗಳನ್ನು ಸಂಯೋಜಿಸುವುದಕ್ಕೆ ಇರುವ ತೀವ್ರ ವಿರೋಧ ಸಭೆಯಲ್ಲಿ ಚರ್ಚೆಗೆ ಬಂದಿತು.

‘ಮಹಿಳಾ ವಿಶ್ವವಿದ್ಯಾಲಯ ತನ್ನ ಸುತ್ತಮುತ್ತಲಿನ ಕಾಲೇಜುಗಳನ್ನು ಸಂಯೋಜಿಸಿಕೊಳ್ಳಲಿ, ದೂರದ ಜಿಲ್ಲೆಗಳ ಕಾಲೇಜುಗಳನ್ನು ಸಂಯೋಜಿಸುವುದು ಬೇಡ. ಅಗತ್ಯ ಇದ್ದರೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಮುಖ್ಯಮಂತ್ರಿ ಸೂಚಿಸಿದರು.

ಕಾಲೇಜುಗಳ ಸ್ಥಳಾಂತರ: ‘ರಾಜ್ಯದ 13 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಲ್ಲ. ಹೆಚ್ಚುವರಿ ಕಾಲೇಜುಗಳು ಇರುವ ಮತ್ತು ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿರುವ ಆರು ಕಾಲೇಜುಗಳನ್ನು ಈ ಭಾಗಗಳಿಗೆ ಸ್ಥಳಾಂತರ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗಿರುವ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆ ಅನುಷ್ಠಾನಕ್ಕೆ ಬರಲಿದೆ. ಕೋವಿಡ್ –19ರ ಪರಿಸ್ಥಿತಿಯಲ್ಲಿ ಡಿಜಿಟಲ್ ಕಲಿಕೆಗೆ ಹೆಚ್ಚಿನ ಮಹತ್ವ ಬಂದಿದೆ‘ ಎಂದರು.

‘ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಜೂನ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಬಾರಿ ಬೇಸಿಗೆ ರಜೆಯನ್ನು ಮೊಟಕುಗೊಳಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಒಂದೇ ಸೂರಿನಡಿ ಸಮಗ್ರ ಮಾಹಿತಿ‌: ‘ಯುವ ಸಬಲೀಕರಣ ಕೇಂದ್ರಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪೋರ್ಟಲ್‍ ಮೂಲಕ ಒಂದೇ ಸೂರಿನಡಿ ಸಮಗ್ರ ಮಾಹಿತಿಯನ್ನು ಒದಗಿಸಲಾಗುವುದು. ಈ ಕೇಂದ್ರಕ್ಕೆ ಪ್ರೌಢಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳ ನೊಂದಣಿ ಪ್ರಾರಂಭಿಸಲಾಗುವುದು. ಶಾಲೆ/ ಕಾಲೇಜಿನಿಂದ ಹೊರಗುಳಿಯುವ ವಿದ್ಯಾರ್ಥಿಗಳನ್ನು ಈ ಮೂಲಕ ಪತ್ತೆ ಹಚ್ಚಸಲು ಸಾಧ್ಯವಾಗಲಿದೆ. ಕೈಗಾರಿಕೆಗಳನ್ನು ಇದರೊಂದಿಗೆ ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಹಾಗೂ ಉದ್ಯೋಗ ದೊರಕಿಸುವ ಅವಕಾಶವನ್ನು ಕಲ್ಪಿಸಲಾಗುವುದು' ಎಂದೂ ಅಶ್ವತ್ಥನಾರಾಯಣ ತಿಳಿಸಿದರು.

ಜುಲೈ 1ರಿಂದ ಶಾಲೆ ಆರಂಭ?

ಇದೇ 31ರಂದು ಲಾಕ್‌‌ಡೌನ್‌ ತೆರವಾದರೆ ಜುಲೈ 1ರಿಂದ ಶಾಲೆಗಳನ್ನು ಪುನರಾರಂಭಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಕ್ಕೆ ವ್ಯಕ್ತವಾಗುತ್ತಿರುವ ವಿರೋಧ ಹಾಗೂ ಪುಟಾಣಿಗಳಿಗೆ ಆನ್‌ಲೈನ್‌ ತರಗತಿ ಬೇಡ ಎಂದು ನಿಮ್ಹಾನ್ಸ್ ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಡೆ ನಿರ್ಧರಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಮಂಗಳವಾರ ಇಲ್ಲಿ ನಡೆಯಿತು.

ಈ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ಚರ್ಚೆ ನಡೆದಿದ್ದು, ಜುಲೈನಿಂದ ತರಗತಿ ಆರಂಭಿಸಲು ಒಲವು ವ್ಯಕ್ತವಾಯಿತು ಎಂದು ಗೊತ್ತಾಗಿದೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಮಕ್ಕಳಿಗೆ ಆನ್‌ಲೈನ್ ತರಗತಿಗೆ ಅವಕಾಶ ನೀಡುವ ಬಗ್ಗೆ ಕೈಗೊಂಡ ನಿರ್ಧಾರವನ್ನು ಇಲಾಖೆ ಬಹಿರಂಗ ಪಡಿಸಿಲ್ಲ.

ಮುಖ್ಯಮಂತ್ರಿ ಅವರನ್ನು ಸೋಮವಾರ ಭೇಟಿ ಮಾಡಿದ್ದ ಸುರೇಶ್‌ಕುಮಾರ್, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿರೋಧ ಇರುವುದರ ಕುರಿತು ಚರ್ಚಿಸಿದ್ದರು. ಸಭೆಯಲ್ಲಿ ಅದರ ಬಗ್ಗೆ ವಿವರ ನೀಡಿದ ಸಚಿವರು, ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವುದಕ್ಕೆ ಸರ್ಕಾರ ತೀರ್ಮಾನಿಸಿದ್ದನ್ನು ತಿಳಿಸಿದರು. ಎರಡು ದಿನದಲ್ಲಿ ಈ ಬಗ್ಗೆ ಹೇಳಿಕೆ ನೀಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ.

ಶಿಕ್ಷಕರ ವರ್ಗ: ಸದ್ಯ ಯಥಾಸ್ಥಿತಿಗೆ ಸೂಚನೆ

‘ಶಿಕ್ಷಕರ ನೂತನ ವರ್ಗಾವಣಾ ನಿಯಂತ್ರಣಾ ಕಾಯ್ದೆಯ ನಿಯಮಗಳು ರೂಪುಗೊಳ್ಳುತ್ತಿದ್ದು, ಈ ನಿಯಮಗಳ ಆಧಾರದಲ್ಲಿ ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಬೇಕಾಗಿದೆ. ವಿವಿಧ ಸರ್ಕಾರಿ ಶಾಲೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಹಾಗೂ ಕಳೆದ ಬಾರಿ ಕಡ್ಡಾಯವಾಗಿ ವರ್ಗಾವಣೆಗೊಳಗಾದ ಮತ್ತು ವರ್ಗಾವಣೆ ಹಿನ್ನೆಲೆಯಲ್ಲಿ ಸೇವೆಯಿಂದ ಬಿಡುಗಡೆ ಹೊಂದದಿರುವ ಶಿಕ್ಷಕರನ್ನು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದಿನ ಆದೇಶದವರೆಗೆ ಮುಂದುವರಿಸಬೇಕು’ ಎಂದು ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT