ಆನ್‌ಲೈನ್‌ ಶಾಪಿಂಗ್‌ ಒಂದಿಷ್ಟು ತಿಳ್ಕೊಳ್ಳಿ

7

ಆನ್‌ಲೈನ್‌ ಶಾಪಿಂಗ್‌ ಒಂದಿಷ್ಟು ತಿಳ್ಕೊಳ್ಳಿ

Published:
Updated:

ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ಹಲವು ಕಾರಣಗಳಿಗೆ ಸುಲಭ ಅನಿಸಬಹುದು. ಸಮಯದ ಉಳಿತಾಯ, ಮಳಿಗೆಯಿಂದ ಮಳಿಗೆಗೆ ಓಡಾಡುವ ಮತ್ತು  ವಾಹನ ಪಾರ್ಕಿಂಗ್‌ ಕಷ್ಟ ಇರುವುದಿಲ್ಲ. ದೀಪಾವಳಿ ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿಯಂತೂ  ಬಯಸದೆಯೇ ಹತ್ತಾರು ಜಾಹೀರಾತುಗಳು, ಉತ್ಪನ್ನಗಳು ಕಣ್ಣಿಗೆ ರಾಚುತ್ತವೆ. ಫೇಸ್‌ಬುಕ್‌ ತೆರೆದರೆ ‘ಹೋಲ್‌ಸೇಲ್‌’ ಪದ ಮತ್ತು ಉತ್ಪನ್ನಗಳ ಬಣ್ಣದ ಬೆರಗಿಗೆ ಮನಸೋತು ಆಯಾ ಫೇಸ್‌ಬುಕ್‌ ಪುಟ ಪ್ರವೇಶಿಸಬೇಕೆನಿಸುತ್ತದೆ.

ನಾವು ಮಾಡುವ ಆನ್‌ಲೈನ್‌ ಶಾಪಿಂಗ್‌ ಎಷ್ಟು ಸುರಕ್ಷಿತ? ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಬನ್ನಿ ಈ ಕ್ಷೇತ್ರದ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳೋಣ.

ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರ ಟೆಕಿ ರಾಜ್‌ಕುಮಾರ್‌, ಆನ್‌ಲೈನ್‌ ಕ್ಷೇತ್ರದ ಬಗ್ಗೆ ಸಾಕಷ್ಟು ತಿಳಿವಳಿಕೆಯುಳ್ಳವರು. ಆನ್‌ಲೈನ್‌ ಶಾಪಿಂಗ್‌ ಮಾಡಿದ ಒಬ್ಬ ಗ್ರಾಹಕನ ಎಲ್ಲಾ ಬಗೆಯ ವಿವರಗಳು ಬೇರೊಬ್ಬನಿಗೆ ಸುಲಭವಾಗಿ ಸಿಗುವುದು ಕಾನೂನು ಬಾಹಿರ. ಮತ್ತು ಇದು ದೊಡ್ಡ ಆತಂಕದ ಸಂಗತಿ ಎಂಬುದು ಅವರ ಅಭಿಪ್ರಾಯ.

ಮೂರು ಶಾಪಿಂಗ್‌ ಬಗೆಗಳನ್ನು ರಾಜ್‌ಕುಮಾರ್‌ ಪ್ರಸ್ತಾಪಿಸುತ್ತಾರೆ. ಬ್ರಿಕ್‌ ಆ್ಯಂಡ್‌ ಮೋರ್ಟರ್ ಮಳಿಗೆಗಳಲ್ಲಿ ಆನ್‌ಲೈನ್‌ನಲ್ಲಿ ಮೊಬೈಲ್‌ ಮೂಲಕ ಶಾಪಿಂಗ್‌ ಮಾಡುತ್ತೀರಿ ಎಂದುಕೊಳ್ಳಿ. ‘ಮೊಬೈಲ್‌ನಲ್ಲಿ ಕ್ರೆಡೆನ್ಷಿಯಲ್‌ಗಳನ್ನು ಟೈಪ್‌ ಮಾಡುವಾಗಲೂ ಎಚ್ಚರದಿಂದಿರಿ. ಅಷ್ಟೇ ಅಲ್ಲ ನೀವೆಷ್ಟು ಖರೀದಿ ಮಾಡುತ್ತೀರಿ ಎಂಬುದ ಬಗ್ಗೆಯೂ ಎಚ್ಚರವಿರಲಿ. ಭಾರತದಲ್ಲಿ ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಬಹಳ ದೊಡ್ಡದು. ಆದರೆ ತಮ್ಮ ಕಂಪ್ಯೂಟರ್‌ಗಳನ್ನು ತಾಂತ್ರಿಕವಾಗಿ ಅಪ್‌ಡೇಟ್‌ ಮಾಡುವಲ್ಲಿ ಭಾರತೀಯರು ಅಷ್ಟಕ್ಕಷ್ಟೇ. ಹಳೆಯ ವರ್ಷನ್‌ಗಳ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಸೈಬರ್‌ ದಾಳಿಯಾಗುವ ಅಪಾಯ ಹೆಚ್ಚು. ಆ್ಯಂಟಿ ವೈರಸ್‌ ಅಪ್ಲಿಕೇಷನ್‌ ಬಳಸುತ್ತಿದ್ದರೆ ಈ ಅಪಾಯದಿಂದ ದೂರವಿರಬಹುದು’ ಎಂದು ರಾಜ್‌ಕುಮಾರ್‌ ಸಲಹೆ ನೀಡುತ್ತಾರೆ.

ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಗಳನ್ನು ಶಾಪಿಂಗ್‌ ವೆಬ್‌ಸೈಟ್‌ಗಳೊಂದಿಗೆ ಹಂಚಿಕೊಳ್ಳಲೇಬೇಡಿ ಎಂದೂ ಅವರು ಕಿವಿಮಾತು ಹೇಳುತ್ತಾರೆ. 16 ಅಂಕಿಗಳನ್ನು ಟೈಪ್‌ ಮಾಡಲು ಅಬ್ಬಬ್ಬಾ ಅಂದರೆ 30 ಸೆಕೆಂಡ್‌ ಬೇಕಾಗಬಹುದು. ಎಷ್ಟೇ ವಿಶ್ವಾಸಾರ್ಹ ವೆಬ್‌ಸೈಟ್‌, ಪೋರ್ಟಲ್‌ಗಳೇ ಆಗಿದ್ದರೂ ಇಂತಹ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಕೊಡಲೇಬಾರದು ಎಂದು ಅವರು ಎಚ್ಚರಿಕೆ ನೀಡುತ್ತಾರೆ.

 ‘ಶಾಪಿಂಗ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡುವ ಮುನ್ನ ಅಲ್ಲಿ ಪ್ರಕಟಿಸಲಾಗಿರುವ ಗ್ರಾಹಕರ ಅಭಿಪ್ರಾಯಗಳ ಮೇಲೆ ಕಣ್ಣಾಡಿಸಿ  ಆ ಆ್ಯಪ್‌ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಿ. ಆನ್‌ಲೈನ್‌ ಹಣ ವರ್ಗಾವಣೆ ಮಾಡುವಾಗಲಂತೂ OTPಗೆ ಅವಕಾಶವಿದೆಯೇ ಎಂದು ನೋಡಿ. ಯಾಕೆಂದರೆ ಪಾಸ್‌ವರ್ಡ್‌ಗಳನ್ನು ಭೇದಿಸುವುದು ತುಂಬಾ ಸರಳ’ ಎಂದು ರಾಜ್‌ಕುಮಾರ್‌ ವಿವರಿಸುತ್ತಾರೆ.

ನೀವು ಬಲ್ಲ ಜಾಲತಾಣಗಳೇ ಸೂಕ್ತ
ಸರ್ವತ್ರ ಟೆಕ್ನಾಲಜೀಸ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿರುವ ಮ್ಯಾಂಡರ್‌ ಅಗಾಶ್‌ ಹೇಳುವ ಪ್ರಕಾರ, ತುಂಬಾ ಚೆನ್ನಾಗಿ ತಿಳಿದಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಜಬಾಂಗ್‌ನಂತಹ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವುದೇ ಸುರಕ್ಷಿತ. 

ಹಣ ಪಾವತಿಯನ್ನು Visa, Mastercard and RuPay ಮೂಲಕ ಮಾಡುವುದೇ ಸೂಕ್ತ. ‘ಹಬ್ಬಗಳ ಕೊಡುಗೆಗಾಗಿ ಅಥವಾ ಪ್ರಯಾಣಕ್ಕಾಗಿ ಹೊಸ ವೆಬ್‌ಸೈಟ್‌ ಮೂಲಕ ಹಣ ಪಾವತಿ ಮಾಡುವ ಸಂದರ್ಭದಲ್ಲಿ ನೀವು ನಿಮ್ಮ ಪಾವತಿ ಸಂಬಂಧಿತ ವಿವರಗಳನ್ನು ನೇರವಾಗಿ ವೆಬ್‌ಸೈಟ್‌ನಲ್ಲಿ ನಮೂದಿಸಬಾರದು. ಅದಕ್ಕಾಗಿ ಪ್ರತ್ಯೇಕ ಕೊಂಡಿ ತೆರೆದುಕೊಳ್ಳುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೊತೆಗೆ ಅದು ವಿಶ್ವಾಸಾರ್ಹವೇ ಎಂಬುದನ್ನೂ ನೋಡಿಕೊಳ್ಳಿ’ ಎಂದು ಮ್ಯಾಂಡರ್‌ ಸಲಹೆ ನೀಡುತ್ತಾರೆ. 

ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವಾಗ, ಮೊದಲ ಸಂಖ್ಯೆಯನ್ನು ನಮೂದಿಸುತ್ತಿದ್ದಂತೆ CVV (ಕಾರ್ಡ್‌ ವೆರಿಫಿಕೇಷನ್‌ ವ್ಯಾಲ್ಯೂ) ಸಂಖ್ಯೆ ಗೋಚರಿಸುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಒಂದು ವೇಳೆ ಸಿವಿವಿ ಇನ್ನೂ ಗೋಚರಿಸುತ್ತಿದ್ದರೆ ಉಳಿದ ಸಂಖ್ಯೆಗಳನ್ನು ತುಂಬಬೇಡಿ.

ಅಲ್ಲದೆ, OTP ತುಂಬುವಂತೆ ನಿರ್ದೇಶನ ಬಾರದಿದ್ದರೆ ಹಣ ವರ್ಗಾವಣೆ ಪ್ರಕ್ರಿಯೆಯನ್ನೇ ನಿಲ್ಲಿಸಿಬಿಡಿ ಎಂದು ಅವರು ಕಿವಿಮಾತು ಹೇಳುತ್ತಾರೆ. 

ಆನ್‌ಲೈನ್‌ನಲ್ಲಿ  ಶಾಪಿಂಗ್ ಮಾಡಿದರೂ ನೀವು ಕೇಳಿದ ಉತ್ಪನ್ನ ನಿಮ್ಮ ಕೈಸೇರುವ ವೇಳೆ ಹಣ ಪಾವತಿ ಮಾಡುವ (COD) ಅಥವಾ ಕಾರ್ಡ್‌ ಮೂಲಕ ಪಾವತಿಸುವ ಅವಕಾಶವಿದ್ದರೆ ಹೆಚ್ಚು ಸುರಕ್ಷಿತ ಎಂಬುದು ಮ್ಯಾಂಡರ್‌ ಅವರ ಸಲಹೆ.

ಬಂದಿದ್ದು ಹರಿದ ಸೀರೆ!
ಕೆಂಗೇರಿ ನಿವಾಸಿ ಮಡಿಕೇರಿ ಮುಖೇಶ್‌ ಇತ್ತೀಚೆಗೆ ತಮ್ಮ ಮಗಳಿಗಾಗಿ ಆನ್‌ಲೈನ್‌ನಲ್ಲಿ ಒಂದು ಉಡುಪು ಆರ್ಡರ್‌ ಮಾಡಿದ್ದರು. ಆದರೆ ಅವರಿಗೆ ಬಂದದ್ದು ಹರಿದೆ ಸೀರೆ! ಈ ಬಗ್ಗೆ ವೆಬ್‌ಸೈಟ್‌ಗೆ ದೂರಿತ್ತಾಗ ‘ಮುಂದಿನ 10 ದಿನಗಳಲ್ಲಿ ನೀವು ಕೇಳಿದ ಉತ್ಪನ್ನ ಕಳುಹಿಸಲಾಗುವುದು’ ಎಂದು ಸಮಜಾಯಿಷಿ ನೀಡಿದರೂ ಇದುವರೆಗೂ ಬಂದಿಲ್ಲ. ಅಲ್ಲದೆ, ವೆಬ್‌ಸೈಟ್‌ನ ವಿಳಾಸದಲ್ಲಿ ‘ಗುಜರಾತ್‌’ ಎಂದಷ್ಟೇ ನಮೂದಿಲಾಗಿದೆ. ಅಧಿಕೃತ ವಿಳಾಸವಿಲ್ಲದ ವೆಬ್‌ಸೈಟ್‌ಗಳ ಮೂಲಕ ವ್ಯವಹಾರ ಮಾಡುವುದೂ ಅಪಾಯಕಾರಿ.

ಸೈಬರ್‌ ದಾಳಿ ತಪ್ಪಿಸಲು...
* ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಯಾವುದೇ ವೆಬ್‌ಸೈಟ್‌ನಲ್ಲಿ ಸೇವ್‌ ಮಾಡಬೇಡಿ. ಪ್ರತಿ ಬಾರಿಯೂ ಹೊಸದಾಗಿಯೇ ವಿವರ ತುಂಬಿಸಿ.
* ನೀವು ಚೆನ್ನಾಗಿ ಬಲ್ಲ ವೆಬ್‌ಸೈಟ್‌ಗಳಲ್ಲೇ ಖರೀದಿ ಮಾಡಿ. ಅಷ್ಟಾಗಿ ಗೊತ್ತಿಲ್ಲದ ಅಥವಾ ಹೊಸ ವೆಬ್‌ಸೈಟ್‌ಗಳನ್ನು ದೂರವಿಡಿ.
* ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಪ್ರತಿ ತಿಂಗಳೂ ಬದಲಾಯಿಸಿ.
* ವಿದೇಶ ಪ್ರಯಾಣದ ವೇಳೆ ಟ್ರಾವೆಲ್‌ಕಾರ್ಡ್‌ಗಳನ್ನೇ ಬಳಸಿ. ಡೆಬಿಟ್‌/ಕ್ರೆಡಿಟ್‌/ಕಾರ್ಡ್‌ ಬೇಡ.
* ಶಂಕಾಸ್ಪದ ಹಣ ವರ್ಗಾವಣೆ ಕಂಡುಬಂದಲ್ಲಿ 48 ಗಂಟೆಯೊಳಗೆ ನಿಮ್ಮ ಬ್ಯಾಂಕ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಕಂಪನಿಗೆ ದೂರು ಕೊಡಿ.
* ಹೀಗೆ ಮಾಡಿದಲ್ಲಿ ಶೇ 100ರಷ್ಟು ಮರುಪಾವತಿ ಸಾಧ್ಯ.
* ಮೊಬೈಲ್‌ ಫೋನ್‌ನಲ್ಲಿ ಬ್ಯಾಂಕ್‌ ಖಾತೆಯ ಮಾಹಿತಿ ಸೇವ್‌ ಮಾಡಬೇಡಿ.
* ಪ್ರಯಾಣದ ವೇಳೆ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಬೇರೆ ಬೇರೆ ಕಡೆ ಇಟ್ಟುಕೊಳ್ಳಿ.
* ವಿದೇಶ ಪ್ರಯಾಣದಿಂದ ವಾಪಸಾದ ಬಳಿಕ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಮರಳಿ ಪಡೆಯಿರಿ

***
ಗ್ರಾಹಕರು ಹೀಗಂತಾರೆ
ಅರ್ಷಾ ಪಿ.ಖುರೇಶ್‌ ಎಂಬ ಶಿಕ್ಷಕಿಗೆ ಹೊಸ ವೆಬ್‌ಸೈಟ್‌ನಲ್ಲಿ ಮೊಬೈಲ್‌ ಖರೀದಿಸಿ ಕೆಟ್ಟ ಅನುಭವವಾಗಿದೆಯಂತೆ. ‘ನನ್ನ ಸಹೋದರಿಗೆ ಮೊಬೈಲ್‌ ಫೋನ್‌ ಉಡುಗೊರೆ ನೀಡಬೇಕಿತ್ತು. ಸಾಮಾಜಿಕ ಮಾಧ್ಯಮದಲ್ಲಿ ನೋಡಿದಾಗ ಯಾವುದೋ ವೆಬ್‌ಸೈಟ್‌ನಲ್ಲಿ ಶೇ 65ರಷ್ಟು ರಿಯಾಯಿತಿ ದರ ಪ್ರಕಟಿಸಲಾಗಿತ್ತು. ಹಿಂದುಮುಂದೆ ಯೋಚಿಸದೆ ಆರ್ಡರ್‌ ಮಾಡಿದೆ. ಆದರೆ ನನಗೆ ಬಂದ ಫೋನ್‌, ಸಾಮಾನ್ಯವಾಗಿ ಮಳಿಗೆಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ಡಮ್ಮಿ ಫೋನ್‌ನಂತಿತ್ತು. ವೆಬ್‌ಸೈಟ್‌ನ್ನು ಸಂಪರ್ಕಿಸೋಣವೆಂದರೆ ಅಲ್ಲಿ ಅದರ ಸಂಪರ್ಕ ಸಂಖ್ಯೆಯಾಗಲಿ, ವಿಳಾಸವಾಗಲಿ ಇರಲಿಲ್ಲ! ಹಾಗಾಗಿ, ಕಣ್ಸೆಳೆಯುವ ಆಕರ್ಷಕ ಪದಗಳಿಗೆ ಮೋಸ ಹೋಗಬೇಡಿ ಎಂದು ಅವರು ಸ್ವಾನುಭವದಿಂದ ಹೇಳುತ್ತಾರೆ.

***
ಜಾಹೀರಾತಿಗೆ ಮರುಳಾಗಬೇಡಿ
‘ನಮಗೆ ಯಾವ್ಯಾವುದೋ ರಿಯಾಯಿತಿ ದರದ ಮಾರಾಟದ ಬಗ್ಗೆ ಇಮೇಲ್‌ಗಳು ಬರುತ್ತಿರುತ್ತವೆ. ಹಾಗಂತ ಅದನ್ನು ಕ್ಲಿಕ್‌ ಮಾಡಿದರೆ ನಮ್ಮ ಕಂಪ್ಯೂಟರ್‌ನ ಡೇಟಾಗಳಿಗೆ ನಾವೇ ನೇರ ಪ್ರವೇಶಕ್ಕೆ ಅವಕಾಶ ನೀಡಿದಂತಾಗುತ್ತದೆ. ಹಾಗೊಂದು ವೇಳೆ ಅಂತಹ ಜಾಹೀರಾತುಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸಿದರೆ ಜಾಹೀರಾತಿನ ಮೇಲೆ ರೈಟ್‌ ಕ್ಲಿಕ್‌ ಮಾಡಿ ಹೈಪರ್‌ಲಿಂಕ್‌ನ್ನು ನಕಲು ಮಾಡಿ ಪ್ರತ್ಯೇಕವಾಗಿ ವೆಬ್‌ಸೈಟ್‌ಗೆ ಭೇಟಿ ಕೊಡಿ. ಅಲ್ಲದೆ ಅವರು ನೀಡಿದ ಲಿಂಕ್‌ನಲ್ಲಿ ‘https’ ಎಂಬುದು ಇದ್ದರೆ ಅದಕ್ಕೆ ಅಧಿಕೃತತೆ ಇದೆ ಎಂದು ಅರ್ಥ.
–ರಾಜ್ ಕುಮಾರ್‌, ಬಹುರಾಷ್ಟ್ರೀಯ ಕಂಪನಿಯಲ್ಲಿ ಟೆಕಿ

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !