ಕರ್ನಾಟಕವೊಂದೇ! ಉತ್ತರದ ಒತ್ತಾಯಕ್ಕೆ ಹೈ.ಕ. ನಿರುತ್ತರ

7
ಪ್ರತ್ಯೇಕತೆಯ ಭಾವ ಕ್ಷೀಣಿಸಲು ಕಾರಣವಾದ 371 (ಜೆ) ಅಡಿ ದೊರೆತಿರುವ ವಿಶೇಷ ಸ್ಥಾನಮಾನ

ಕರ್ನಾಟಕವೊಂದೇ! ಉತ್ತರದ ಒತ್ತಾಯಕ್ಕೆ ಹೈ.ಕ. ನಿರುತ್ತರ

Published:
Updated:

ಕಲಬುರ್ಗಿ: ಸಂವಿಧಾನದ ಕಲಂ 371 (ಜೆ) ಅಡಿ ದೊರೆತಿರುವ ವಿಶೇಷ ಸ್ಥಾನಮಾನ, ಉದ್ಯೋಗ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಸಿಗುತ್ತಿರುವ ಮೀಸಲಾತಿಯು ಹೈದರಾಬಾದ್‌ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಕ್ಷೀಣಿಸುವಂತೆ ಮಾಡಿದೆ.

ಪ್ರಮುಖ ಮಠಾಧೀಶರು, ಬಹುಪಾಲು ರಾಜಕೀಯ ಮುಖಂಡರು ಹಾಗೂ ಈ ಹಿಂದೆ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ನಡೆಸಿದವರೂ ಈಗ ‘ಅಖಂಡ ಕರ್ನಾಟಕ’ದ ಮಂತ್ರ ಜಪಿಸುತ್ತಿದ್ದಾರೆ.

‘ವಿಶೇಷ ಸ್ಥಾನಮಾನ ಸಿಕ್ಕಿದ್ದರೂ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಸಮಾನತೆ ನಿವಾರಣೆಯಾಗಿಲ್ಲ. ಅಭಿವೃದ್ಧಿ, ನೇಮಕಾತಿ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಧಿಕಾರ ನೀಡಿಕೆಯಲ್ಲಿ ನಮ್ಮ ಭಾಗಕ್ಕೆ ಈಗಲೂ ಅನ್ಯಾಯವಾಗುತ್ತಿರುವುದು ನಿಜ. ಆದರೂ, ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ’ ಎನ್ನುವ ನಿಲುವನ್ನು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ತಳೆದಿದೆ.

‘ಹಲವು ದಶಕಗಳ ಹೋರಾಟದ ಫಲವಾಗಿ ದೊರೆತಿರುವ 371 (ಜೆ) ಮೀಸಲಾತಿಯ ಫಲ ಈಗಷ್ಟೇ ದೊರೆಯಲಾರಂಭಿಸಿದೆ. ನಮ್ಮ ಹೋರಾಟ ಏನಿದ್ದರೂ 371 (ಜೆ) ಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕೆ ಮೀಸಲು’ ಎಂದು ಸಮಿತಿ ಹೇಳುತ್ತಿದೆ.

ಅವಕಾಶ ಕಡಿಮೆಯಾಗುವ ಭೀತಿ

ಸ್ಥಳೀಯ ಹುದ್ದೆಗಳ ಜತೆಗೆ (ಶ್ರೇಣಿ ‘ಎ’,‘ಬಿ’ ಯಲ್ಲಿ ಶೇ 75, ‘ಸಿ’ ಶೇ 80, ‘ಡಿ’ 85 ) ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿಯ ಹುದ್ದೆಗಳಲ್ಲಿ ಶೇ 8ರಷ್ಟು ಮೀಸಲಾತಿ ಸಿಗುತ್ತಿದೆ.

ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ಭಾಗದ ಸಂಸ್ಥೆಗಳಲ್ಲಿ ಶೇ 75 ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿಯ ಕಾಲೇಜುಗಳಲ್ಲಿ ಶೇ 8ರಷ್ಟು ಸೀಟುಗಳು
ಈ ಭಾಗದವರಿಗೆ ಮೀಸಲಿವೆ. ಇದು ಅವಕಾಶದ ಹೆಬ್ಬಾಗಿಲನ್ನೇ ತೆರೆದಂತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮಗೆ ಸಿಗುತ್ತಿರುವ ಬಹುದೊಡ್ಡ ಅವಕಾಶಗಳು ಕಡಿಮೆಯಾಗಲಿವೆ ಎಂಬ ಆತಂಕ ಇಲ್ಲಿಯ ಪ್ರಜ್ಞಾವಂತರದ್ದು.

‘ಚಿನ್ನದಮೊಟ್ಟೆ ಇಡುವ ಕೋಳಿ’

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಅನುದಾನ ನೀಡುತ್ತಿದೆ. ಮಂಡಳಿಗೆ ಈ ವರೆಗೆ ₹4,650 ಕೋಟಿ ಅನುದಾನ ಮಂಜೂರು ಮಾಡಿದ್ದು, ಅಭಿವೃದ್ಧಿಯ ಸುಳಿಗಾಳಿ ಬೀಸಲಾರಂಭಿಸಿದೆ.

ವಿಶೇಷ ಸ್ಥಾನಮಾನ ಲಭಿಸುವುದಕ್ಕಿಂತ 10 ವರ್ಷ ಮೊದಲಿನಿಂದ ಇಲ್ಲಿ ವಾಸವಾಗಿರುವ ಎಲ್ಲ ಜಾತಿಯವರಿಗೂ ಉದ್ಯೋಗ–ಶೈಕ್ಷಣಿಕ ಮೀಸಲಾತಿ ಸಿಗುತ್ತಿದೆ. ಐದು ವರ್ಷಗಳಲ್ಲಿ ಈ ಭಾಗದ ಅಂದಾಜು 20 ಸಾವಿರ ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಮೂರು ವರ್ಷಗಳಲ್ಲಿ 30 ಸಾವಿರ ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಹೀಗಾಗಿ 371 (ಜೆ)ಯನ್ನು ‘ಚಿನ್ನದ ಮೊಟ್ಟೆ ಇಡುವ ಕೋಳಿ’ ಎಂದೇ ಕರೆಯಲಾಗುತ್ತಿದೆ.

ಹೈ.ಕ ದವರಿಗೆ ದೊರೆಯುತ್ತಿರುವ ಶೈಕ್ಷಣಿಕ ಸೌಲಭ್ಯ (ಸರಾಸರಿ)

* 750 ವರ್ಷಕ್ಕೆ ಸರ್ಕಾರಿ ವೈದ್ಯಕೀಯ ಸೀಟು

*8,000 ವರ್ಷಕ್ಕೆ ಸರ್ಕಾರಿ ಎಂಜಿನಿಯರಿಂಗ್‌ ಸೀಟು

* ನಮಗೆ 371 (ಜೆ) ಮೀಸಲಾತಿ ಮುಂದುವರೆಸಿ ಪ್ರತ್ಯೇಕ ರಾಜ್ಯ ಮಾಡಿದರೆ ನಮ್ಮ ಬೆಂಬಲ ಇದೆ. ಮೀಸಲಾತಿ ಕಸಿದುಕೊಂಡರೆ ಪ್ರತ್ಯೇಕ ರಾಜ್ಯ ನಮಗೆ ಬೇಡ.

ವೈಜನಾಥ ಪಾಟೀಲ, ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ, ಕಲಬುರ್ಗಿ

* 371 (ಜೆ)ಯಿಂದ ರಾಜ್ಯದ ಇತರೆಡೆಯೂ ಶೈಕ್ಷಣಿಕ–ಉದ್ಯೋಗ ಮೀಸಲಾತಿ ಸಿಗುತ್ತಿದೆ. ಪ್ರತ್ಯೇಕ ರಾಜ್ಯವಾದರೆ ಮೀಸಲಾತಿ ಕಡಿಮೆ<br/>ಯಾಗಿ ಬಾವಿಯ ಕಪ್ಪೆಯಂತಾಗುತ್ತೇವೆ.

ರಜಾಕ್‌ ಉಸ್ತಾದ್, ಹೋರಾಟಗಾರ, ರಾಯಚೂರು

* ಹೋರಾಟ ನಡೆಸಿಯೇ ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದೇವೆ. ಈಗಲೂ ಅನ್ಯಾಯ ಮುಂದುವರೆದಿದೆ. ಪ್ರತ್ಯೇಕ ರಾಜ್ಯಕ್ಕೆ ಅಲ್ಲ, ನಮ್ಮ ಅವಕಾಶ ಪಡೆಯಲು ದನಿ ಎತ್ತುತ್ತೇವೆ.  

ಅಲ್ಲಮಪ್ರಭು ಬೆಟ್ಟದೂರು,  ಸಾಹಿತಿ, ಕೊಪ್ಪಳ

* ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಹೈದರಾಬಾದ್‌ ಕರ್ನಾಟಕದವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ತಾರತಮ್ಯ ಸರಿಪಡಿಸುವ ಬೇಡಿಕೆಗೆ ಸಹಮತ ಇದೆ. ರಾಜ್ಯ ವಿಭಜನೆಗೆ ಅಲ್ಲ.

ಚನ್ನಬಸವಣ್ಣ, ಚಿಂತಕ, ಬಳ್ಳಾರಿ

ಮುಖ್ಯಾಂಶಗಳು
ಎಚ್‌ಕೆಆರ್‌ಡಿಬಿಗೆ ವರ್ಷಕ್ಕೆ ₹1,500 ಕೋಟಿ ಅನುದಾನ

ಈ ಅನುದಾನ ಆ ವರ್ಷ ಖರ್ಚಾಗದಿದ್ದರೆ ಲ್ಯಾಪ್ಸ್‌ ಆಗುವುದಿಲ್ಲ

ಹೈ.ಕ. ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಕಿಲ್ಲ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !