ಶನಿವಾರ, ಮಾರ್ಚ್ 28, 2020
19 °C
ಕರ್ನಾಟಕ ಭೂಗುತ್ತಿಗೆ ಮಸೂದೆ–2020ಕ್ಕೆ ರೈತರು, ಕಾನೂನು ತಜ್ಞರ ವಿರೋಧ

ಉಳ್ಳವರಿಗೆ ಭೂಮಿ ಕೊಡಿಸುವ ಹುನ್ನಾರ: ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕರ್ನಾಟಕ ಭೂಗುತ್ತಿಗೆ ಮಸೂದೆಯು (2020) ಉಳುವವರಿಂದ ಉಳ್ಳವರಿಗೆ ಕೃಷಿ ಭೂಮಿ ಗುತ್ತಿಗೆ ಕೊಡಿಸುವ ಹುನ್ನಾರ ದಿಂದ ಕೂಡಿದೆ’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆರೋಪಿಸಿದರು.

‘ಭೂ ಗುತ್ತಿಗೆ ಮಸೂದೆ– 2020’ ಬಗ್ಗೆ ಸಹಜ ಬೇಸಾಯ ಶಾಲೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

‘ಉಳುವವನೇ ಭೂಮಿಯ ಒಡೆಯನಾಗಬೇಕೆಂಬ ಆಶಯದೊಂದಿಗೆ ಹಲವು ಕಾನೂನುಗಳನ್ನು 100 ವರ್ಷಗಳಲ್ಲಿ ತರಲಾಗಿದೆ. ಇದರ ಫಲವಾಗಿ ರಾಜ್ಯದಲ್ಲಿ 25 ಲಕ್ಷರಿಂದ 30 ಲಕ್ಷ ಗೇಣಿದಾರರು ಭೂಮಿಯ ಒಡೆಯರಾದರು. ಇಂತಹ ಆಶಯವನ್ನು ಬುಡಮೇಲು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ’ ಎಂದು ಟೀಕಿಸಿ ದರು.

‘ನೆಲ, ಜಲದ ವಿಷಯದಲ್ಲಿ ಕಾನೂನು ರೂಪಿಸುವ ಅಧಿಕಾರ ಆಯಾ ರಾಜ್ಯಗಳಿಗೆ ಮಾತ್ರ ಇದೆ. ಆದರೆ, ಕೇಂದ್ರ ಸರ್ಕಾರವು ನೀತಿ ಆಯೋಗದ ಮೂಲಕ ಒತ್ತಡ ಹೇರಿಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ’ ಎಂದು ಹೇಳಿದರು.

ರಾಷ್ಟ್ರೀಯ ಕಾನೂನು ಶಾಲೆಯ ಪ್ರೊ.ಎಂ.ಕೆ.ರಮೇಶ್, ‘ಭೂಗುತ್ತಿಗೆ ಮಸೂದೆಯು ಭೂಮಿಯನ್ನು ಗುತ್ತಿಗೆ ಪಡೆಯುವವರ ಪರವಾದ ಕಾನೂನು. ಪರಸ್ಪರ ಖಾಸಗಿ ಒಪ್ಪಂದಕ್ಕೆ ಸರ್ಕಾರ ಅನಗತ್ಯವಾಗಿ ಮಧ್ಯಪ್ರವೇಶ ಮಾಡುತ್ತಿದೆ. ಅಸ್ಪಷ್ಟತೆಯಿಂದಲೇ ಕೂಡಿರುವ ಈ ಕಾನೂನು ತರುವ ಔಚಿತ್ಯವಾದರೂ ಏನು’ ಎಂದು ಪ್ರಶ್ನಿಸಿದರು.

ಕಾರ್ಪೊರೇಟ್ ಪರವಾದ ಕಾನೂನು

‘ಭೂಗುತ್ತಿಗೆ ಕಾನೂನಿನ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊರಟಿವೆ. ಇದರ ವಿರುದ್ಧ ಫೆ. 27ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಭೂಗುತ್ತಿಗೆಯನ್ನು ಕಾನೂನುಬದ್ಧಗೊಳಿಸುವ ಮಸೂದೆ ರೈತರನ್ನು ಮತ್ತಷ್ಟು ಅತಂತ್ರರನ್ನಾಗಿಸಲಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ
–ಬಡಗಲಪುರ ನಾಗೇಂದ್ರ, ರೈತ ಮುಖಂಡ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು