ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ 5, 6ನೇ ಘಟಕಕ್ಕೆ ವಿರೋಧ

Last Updated 29 ನವೆಂಬರ್ 2018, 20:37 IST
ಅಕ್ಷರ ಗಾತ್ರ

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದೆ. ಸ್ಥಾವರದ ಸಮೀಪದಲ್ಲಿರುವ ಕುರ್ನಿಪೇಟೆಯಿಂದ ಮಲ್ಲಾಪುರದವರೆಗೆ ಗುರುವಾರ ಹಮ್ಮಿಕೊಳ್ಳಲಾದ ಪಾದಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.

ಒಟ್ಟುನಾಲ್ಕು ಕಿ.ಮೀ ದೂರದ ಪಾದಯಾತ್ರೆಯುದ್ದಕ್ಕೂ ಪ್ರತಿಭಟನಾಕಾರರು ಕೈಗಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವೃಕ್ಷಲಕ್ಷ ಆಂದೋಲನ ಸಂಘಟನೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ,‘ಈ ಭಾಗದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿರುವುದನ್ನು ಹಲವು ಸಂಸ್ಥೆಗಳ ಅಧ್ಯಯನ ವರದಿಗಳು ಸಾಬೀತುಪಡಿಸಿವೆ. ಕೈಗಾದಿಂದ ಪರಿಸರ ಹಾಗೂ ಜನರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಕ್ಯಾನ್ಸರ್ ಪ್ರಕರಣಗಳ ಬಗ್ಗೆ ಟಾಟಾ ಮೆಮೋರಿಯಲ್ ಸೆಂಟರ್‌ ಸಿದ್ಧಪಡಿಸಿದ ವರದಿ ಪ್ರಕಟವಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಆದರೆ, ಸೋರಿಕೆಯಾದ ವರದಿಯ ಅಂಶಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೂ ವರದಿಯನ್ನು ಯಾಕೆ ಮುಚ್ಚಿಡಲಾಗಿದೆ’ ಎಂದು ಪ್ರಶ್ನಿಸಿದರು.

‘ತಲಾ 700 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಎರಡು ಘಟಕಗಳ ಸ್ಥಾಪನೆಯಿಂದ ಕಾಡು ನಾಶವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಉತ್ಪಾದನೆಯಾದ ವಿದ್ಯುತ್ ಪ್ರಸರಣಕ್ಕೆ ತಂತಿ ಎಳೆಯಬೇಕಾಗುತ್ತದೆ. ಇದಕ್ಕೆ ಲಕ್ಷ ಲಕ್ಷ ಮರಗಳನ್ನು ಕತ್ತರಿಸಬೇಕಾಗುತ್ತದೆ’ ಎಂದು ತಿಳಿಸಿದರು.

ವಕೀಲ ನಾಗರಾಜ ನಾಯಕ ಮಾತನಾಡಿ, ‘ಕೈಗಾ ಸ್ಥಾವರದಿಂದ ಸ್ಥಳೀಯವಾಗಿ ಎಷ್ಟು ವಿದ್ಯುತ್ ಹಂಚಿಕೆಯಾಗಿದೆ? ಸ್ಥಳೀಯರಿಗೆ ನೀಡಿದ ಉದ್ಯೋಗವೆಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ಕೈಗಾ ಯೋಜನೆಗೆ ಭೂಮಿ ಕಳೆದುಕೊಂಡವರ ಸಂಘ, ಕೈಗಾ ಕಾಳಿ ಸಂತ್ರಸ್ಥರ ಸಂಘ, ಕದ್ರಾ ಅಣೆಕಟ್ಟು ನಿರಾಶ್ರಿತರ ಸಂಘ, ಶ್ರೀದೇವಿ ಯುವಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

**

ಡಿ.6ರಂದು ಶಿರಸಿಯಲ್ಲಿ ಸಭೆ

‘ನಮ್ಮ ಹೋರಾಟಕ್ಕೆಶಿರಸಿಯ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಬೆಂಬಲ ವ್ಯಕ್ತಪಡಿಸಿದ್ದಾರೆ. ‌ಅವರ ನೇತೃತ್ವದಲ್ಲಿ ಡಿ.6ರಂದು ಶಿರಸಿಯಲ್ಲಿ ಸಭೆ ನಡೆಯಲಿದೆ. ಹಲವಾರು ವಿಜ್ಞಾನಿಗಳು, ಪರಿಸರ ತಜ್ಞರು ಭಾಗವಹಿಸಲಿದ್ದಾರೆ’ ಎಂದು ಅನಂತ ಹೆಗಡೆ ಅಶೀಸರ ಹೇಳಿದರು.

‘ನೂತನ ಘಟಕಗಳಸ್ಥಾಪನೆ ಸಂಬಂಧ ಪರಿಸರ ಇಲಾಖೆಯು ಮಲ್ಲಾಪುರದಲ್ಲಿ ಡಿ.15ರಂದು ‌ಸಾರ್ವಜನಿಕಸಭೆ ಆಯೋಜಿಸಿದೆ. ಅಲ್ಲಿ ನಮ್ಮವಿರೋಧವನ್ನು ದಾಖಲಿಸುವ ಬಗ್ಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT