ಸಾಹಿತ್ಯ ಸಮ್ಮೇಳನ: ಪೂರ್ಣ ಕುಂಭ ಮೆರವಣಿಗೆ ಕೈಬಿಡಲು ಆಗ್ರಹ

7

ಸಾಹಿತ್ಯ ಸಮ್ಮೇಳನ: ಪೂರ್ಣ ಕುಂಭ ಮೆರವಣಿಗೆ ಕೈಬಿಡಲು ಆಗ್ರಹ

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಸಲು ಉದ್ದೇಶಿಸಿರುವ ಮಹಿಳೆಯರ ಪೂರ್ಣ ಕುಂಭ ಮೆರವಣಿಗೆಯನ್ನು ಕೈಬಿಡುವಂತೆ ನಾಡಿನ ಪ್ರಗತಿಪರರು, ಸಾಮಾಜಿಕ ಹಾಗೂ ಮಹಿಳಾ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.

‍‍ಕೆ. ನೀಲಾ, ಕೆ.ಎಸ್‌. ವಿಮಲಾ, ಸತ್ಯಾ ಎಸ್‌., ಮೀನಾಕ್ಷಿ ಬಾಳಿ, ಪುರುಷೋತ್ತಮ ಬಿಳಿಮಲೆ, ಟಿ. ಸುರೇಂದ್ರರಾವ್, ಸಿ. ಬಸವಲಿಂಗಯ್ಯ ಸೇರಿದಂತೆ 170ಕ್ಕೂ ಹೆಚ್ಚು ಜನರು ಈ ಆಗ್ರಹಕ್ಕೆ ಸಹಿ ಹಾಕಿದ್ದು, ಪತ್ರವನ್ನು ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಕಳುಹಿಸಿದ್ದಾರೆ.  

ಇಂತಹ ಮೆರವಣಿಗೆಯು ಮಹಿಳೆಯರ ಶೋಷಣೆಯ ಪ್ರತೀಕವಾಗಿದೆ. ಸ್ವಸಹಾಯ ಸಂಘಗಳ ಸದಸ್ಯರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಹೀಗೆ ಮೆರವಣಿಗೆಯಲ್ಲಿ ಪ್ರದರ್ಶಕ ವಸ್ತುಗಳಂತೆ ಬಳಕೆ ಮಾಡುವುದು ಆಧುನಿಕ ಸಮಾಜದ ಅಣಕವಾಗಿರುತ್ತದೆ. ಸಂಸ್ಕೃತಿ, ಆಚರಣೆಗಳ ಹೆಸರಿನಲ್ಲಿ ಹೀಗೆ ಮೆರವಣಿಗೆ ಮಾಡಿಸುವುದಕ್ಕೂ, ಮಾರುಕಟ್ಟೆ ಸಾಮಗ್ರಿಗಳ ಪ್ರಚಾರಕ್ಕೆ ಜಾಹೀರಾತುಗಳಲ್ಲಿ ಹೆಣ್ಣನ್ನು ಬಳಸುವುದಕ್ಕೂ ಏನೂ ವ್ಯತ್ಯಾಸ ಇರುವುದಿಲ್ಲ ಎಂದು ಪತ್ರ ಪ್ರತಿಪಾದಿಸಿದೆ. 

ಕನ್ನಡ ಸಾಹಿತ್ಯವು ಮಹಿಳೆಯರನ್ನು ಗೌರವದಿಂದ ಕಂಡಿದೆ. ಅಂತಹ ಸಾಹಿತ್ಯಕ ಪರಂಪರೆಯ ಉತ್ಸವದಲ್ಲಿ ಅದಕ್ಕೆ ವಿರುದ್ಧವಾಗಿ ಮಹಿಳೆಯರ ಮೆರವಣಿಗೆ ಮಾಡಿಸಿದರೆ ಅದು ಸಾಹಿತ್ಯಕ್ಕೆ, ಸಾಹಿತ್ಯ ಪರಿಷತ್ತಿನ ಆಶಯಗಳಿಗೆ ಹಾಗೂ ಕನ್ನಡ ಕಟ್ಟಿದ ಧೀಮಂತರ ನಡೆ- ನುಡಿಗೆ ಮಾಡುವ ಅವಮಾನ ಆಗುತ್ತದೆ. ಪೂರ್ಣಕುಂಭ ಮೆರವಣಿಗೆಗೆ ನಾಡಿನ ಪ್ರಜ್ಞಾವಂತರೆಲ್ಲ ವಿರೋಧ ವ್ಯಕ್ತಪಡಿಸಿದ್ದಾರೆ. ಈ ದನಿಯನ್ನು ಕೇಳಿಯಾದರೂ ಮೆರವಣಿಗೆ ರದ್ದು ಮಾಡಬೇಕೆಂದು ಪತ್ರ ಒತ್ತಾಯಿಸಿದೆ.

‘ಮಹಿಳೆಯರು ತಾವಾಗಿಯೇ ಬಂದರೆ ಮೆರವಣಿಗೆ ಮಾಡುತ್ತೇವೆ. ಬರೀ ಮಹಿಳೆಯರಲ್ಲ, ಪುರುಷರು, ಟ್ರಾನ್ಸ್‌ ಜೆಂಡರ್‌ ಹೀಗೆ ಯಾರು ಬಂದರೂ ಅವಕಾಶ ನೀಡಲಾಗುವುದು ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್ ಹೇಳಿದ್ದಾರೆ. ಇಂತಹ ಮಾತು ಪರಿಷತ್ತಿಗೆ ಗೌರವ ತರುವ ವಿಷಯ ಅಲ್ಲ’ ಎಂದು ಪತ್ರ ಪ್ರತಿಪಾದಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !