ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರಂಜನೆಯ ಭವಿಷ್ಯ ಒಟಿಟಿ ವೇದಿಕೆಗಳೇ?

ಸಿನಿಮೋತ್ಸವದ ಗೋಷ್ಠಿಯಲ್ಲಿ ಕೇಳಿದ ಪ್ರಶ್ನೆ
Last Updated 23 ಫೆಬ್ರುವರಿ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ಫೋನ್‌ ಮೂಲಕ ಮನರಂಜನೆ ಒದಗಿಸುವ ಅಮೆಜಾನ್‌ ಪ್ರೈಂ, ಜೀ5, ನೆಟ್‌ಫ್ಲಿಕ್ಸ್‌ನಂತಹ (ಒಟಿಟಿ) ವೇದಿಕೆಗಳ ಪರಿಣಾಮವಾಗಿ ಟಿ.ವಿ. ಕಾರ್ಯಕ್ರಮಗಳಿಗೆ ಸಾವು ಬರಲಿದೆಯೇ?

ಇಂಥದ್ದೊಂದು ಪ್ರಶ್ನೆ ಕೇಳಿಬಂದಿದ್ದು ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ವೇದಿಕೆಯಲ್ಲಿ. ‘ಸ್ಮಾರ್ಟ್‌ಫೋನ್‌ ಹಾಗೂ ಇತರ ಸ್ಮಾರ್ಟ್‌ ಡಿಜಿಟಲ್‌ ಸಾಧನಗಳ ಮೂಲಕ ಮನರಂಜನಾ ಹೂರಣ ಒದಗಿಸುವ ವೇದಿಕೆಗಳನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಮನರಂಜನೆಯ ಭವಿಷ್ಯ ಇದೇ’ ಎಂದರು ‘ಜೀ5’ ಸಂಸ್ಥೆಯ ಪ್ರತಿನಿಧಿ ಆರ್. ಸೂರ್ಯನಾರಾಯಣ್.

‘ಅಧ್ಯಯನವೊಂದರ ಪ್ರಕಾರ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಶೇಕಡ 16ರಷ್ಟು ಸಮಯವನ್ನು ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಕಳೆಯುತ್ತಿದ್ದಾನೆ. ನಮಗೆ ಈಗ ಸಿನಿಮಾ ಮಂದಿರಗಳಿಗೆ ಹೋಗುವಷ್ಟೂ ಸಮಯ ಇಲ್ಲ. ಒಟಿಟಿ ವೇದಿಕೆಗಳಿಗೆ ಸಣ್ಣ ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದ ಗ್ರಾಹಕರು ಇದ್ದಾರೆ. ಮುಂದಿನ ವರ್ಷಗಳಲ್ಲಿ ಟಿ.ವಿ. ಕಾರ್ಯಕ್ರಮಗಳು ಇಲ್ಲವಾಗಬಹುದು’ ಎಂದರು ಸೂರ್ಯನಾರಾಯಣ್.

ಭಾರತದಲ್ಲಿ ಈಗ 30 ಒಟಿಟಿ ವೇದಿಕೆಗಳು ಇವೆ. ದೇಶದ ಒಟ್ಟು 50 ಕೊಟಿ ಜನ ಈ ವೇದಿಕೆಗಳ ಮೂಲಕ ಮನರಂಜನಾ ಕಾರ್ಯಕ್ರಮ ವೀಕ್ಷಿಸುವ ದಿನಗಳು ಹತ್ತಿರದಲ್ಲಿವೆ. ಈ ವೇದಿಕೆಗಳ ಇಂದಿನ ವಾರ್ಷಿಕ ಆದಾಯ ₹ 3 ಸಾವಿರ ಕೋಟಿ. ಅದು 2023ರ ಹೊತ್ತಿಗೆ ₹ 13 ಸಾವಿರ ಕೋಟಿಗೆ ಹೆಚ್ಚುವ ಅಂದಾಜು ಇದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಗಂಗಾಧರ ಸಾಲಿಮಠ ಹೇಳಿದರು.

‘ಇಂತಹ ವೇದಿಕೆಗಳನ್ನು ಬಳಕೆ ಮಾಡುತ್ತಿರುವವಲ್ಲಿ ಶೇಕಡ 63ರಷ್ಟು ಜನ ಹಿಂದಿ ಕಾರ್ಯಕ್ರಮಗಳನ್ನು, ಶೇಕಡ 7ರಷ್ಟು ಜನ ಇಂಗ್ಲಿಷ್ ಕಾರ್ಯಕ್ರಮಗಳನ್ನು, ಇತರ ಶೇಕಡ 30ರಷ್ಟು ಜನ ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳಿಗೆ ಇಲ್ಲಿ ದೊಡ್ಡ ಅವಕಾಶ ಇದೆ’ ಎಂದರು ಪರ್ಪಲ್ ಆ್ಯರೊ ಫಿಲಂಸ್ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಶ್ರೀಭಕ್ತ.

‘ಕನ್ನಡ ಏಕಿಲ್ಲ? ’: ದೇಶದಲ್ಲಿ ಅತಿಹೆಚ್ಚು ಜನ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಏಳನೆಯ ಸ್ಥಾನದಲ್ಲಿದೆ. ಹೀಗಿದ್ದರೂ ಒಟಿಟಿ ವೇದಿಕೆಗಳಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಿಲ್ಲದಿರುವುದು ಏಕೆ ಎಂಬ ಪ್ರಶ್ನೆ ಕಾರ್ಯಕ್ರಮದಲ್ಲಿ ಕೇಳಿಬಂತು. ಇದಕ್ಕೆ ಉತ್ತರವಾಗಿ ಶ್ರೀನಿವಾಸ್ ಅವರು, ‘ಕನ್ನಡದ ವೆಬ್ ಸಿರೀಸ್‌ಗಳನ್ನು ಹಾಗೂ ಒಟಿಟಿ ವೇದಿಕೆಗಳಿಗಾಗಿಯೇ ಸಿದ್ಧಪಡಿಸಿದ ಕನ್ನಡದ ಸಿನಿಮಾಗಳನ್ನು ವೀಕ್ಷಿಸುವ ಕಾಲ ಹತ್ತಿರ ಬರುತ್ತಿದೆ’ ಎಂದರು.

‘ಕನ್ನಡದ ಪ್ರಾತಿನಿಧ್ಯ ಗಣನೀಯ’

ಬೆಂಗಳೂರು:‘ಸಿನಿಮಾ ಸಂಸ್ಕೃತಿಯ ಶಿಕ್ಷಣ ನೀಡುವ ಕೆಲಸವನ್ನು ರಾಜಸ್ಥಾನ ಸಿನಿಮೋತ್ಸವ ಮಾಡುತ್ತಿದೆ’ ಎಂದು ಆ ಸಿನಿಮೋತ್ಸವದ ನಿರ್ದೇಶಕ ಸೌಮೇಂದ್ರ ಹರ್ಷ್ ಹೇಳಿದರು.

‘ಸಿನಿಮಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಿನಿಮೋತ್ಸವಗಳ ಪಾತ್ರ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಾನು ಆಯೋಜಿಸಿದ್ದ ಸಿನಿಮೋತ್ಸವದಲ್ಲಿ ಕನ್ನಡ ಭಾಷೆಯ ಬಿಂಬ, ರಾಮ ಸೇರಿದಂತೆ ಹಲವು ಚಿತ್ರಗಳು ಪ್ರದರ್ಶನ ಕಂಡಿವೆ. ನಮ್ಮಲ್ಲಿ ಕನ್ನಡ ಸಿನಿಮಾಗಳ ಪ್ರಾತಿನಿಧ್ಯ ಗಣನೀಯವಾಗಿ ಇತ್ತು’ ಎಂದರು.

‘ಸಿಡ್ನಿ ಫಿಲಂ ಫೆಸ್ಟಿವಲ್ ಹೆಸರಿನಲ್ಲಿ ಪ್ರತಿ ವರ್ಷ ಆಸ್ಟ್ರೇಲಿಯಾದ ಬೇರೆ ಬೇರೆ ಊರುಗಳಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ಬೇರೆ ಬೇರೆ ಊರುಗಳಲ್ಲಿ ನಡೆದರೂ ಅದು ಸಿಡ್ನಿ ಫಿಲಂ ಫೆಸ್ಟಿವಲ್ ಎಂದೇ ಖ್ಯಾತ. ಬೆಂಗಳೂರು ಸಿನಿಮೋತ್ಸವವನ್ನೂ ಬೆಳಗಾವಿ, ಧಾರವಾಡದಂತಹ ಊರುಗಳಲ್ಲಿ ನಡೆಸಬೇಕು’ ಎಂದು ಆಸ್ಟ್ರೇಲಿಯಾ ವಾಸಿ ಕನ್ನಡಿದ ಸುದರ್ಶನ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT