ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಹೂವುಗಳು!

Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಚೆಂಡು ಹೂ

ಚೆಂಡು ಹೂಗಳನ್ನು ಕ್ರಿಮಿನಾಶಕವಾಗಿ ಬಳಸುವುದು ಗೊತ್ತಿದೆ. ಇದನ್ನು ಆಹಾರ ತಯಾರಿಗೂ ಬಳಸಬಹುದು. ಕಹಿಯಾದ ರುಚಿ ಆಹಾರಕ್ಕೆ ವಿಶೇಷ ವಾಸನೆ ಕೊಡುತ್ತದೆ. ಈ ಹೂಗಳಿಂದ ತಯಾರಿಸುವ ವೆನಿಗರ್‌ ಅನ್ನು ಸಲಾಡ್‌ಗಳಿಗೆ ಡ್ರೆಸ್ಸಿಂಗ್ ಆಗಿಯೂ ಬಳಸುತ್ತಾರೆ. ಈ ಹೂವಿನ ದಳಗಳನ್ನು ಒಣಗಿಸಿ ಅದನ್ನು ಟೀ ಪುಡಿಯೊಂದಿಗೆ ಕುದಿಸಿ ವಿಶೇಷ ಟೀ ಕೂಡ ತಯಾರಿಸಬಹುದು.

ಚೆಂಡು ಹೂ

**

ಬಾಳೆ ಹೂ

ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಾಳೆ ಹೂವನ್ನು ಅಡುಗೆಗೆ ಬಳಸುವುದು ಸಾಮಾನ್ಯ.ಇದರಲ್ಲಿ ಕಬ್ಬಿಣಾಂಶ, ನಾರಿನಾಂಶ ಹೆಚ್ಚಾಗಿರುತ್ತದೆ. ಮಲಬಾರ್ ಹೋಟೆಲ್‌ಗಳಲ್ಲಿ ಇದರಿಂದ ತಯಾರಿಸಿದ ಅಡುಗೆಗಳು ಜನಪ್ರಿಯ. ಇದರ ಸಾರು ಆರೋಗ್ಯಕ್ಕೆ ಒಳ್ಳೆಯದು. ರುಚಿಯಾಗಿಯೂ ಇರುತ್ತದೆ.

ಪಪ್ಪಾಯ ಹೂ

ಪಪ್ಪಾಯ (ಪರಂಗಿ) ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಪ್ರದೇಶಗಳಲ್ಲಿ ಇದರ ಎಲೆಗಳನ್ನೂ ಆಹಾರ ಪದಾರ್ಥಗಳ ತಯಾರಿಗೆ ಬಳಸುತ್ತಾರೆ. ತೆಂಗು ಮತ್ತು ಬಾಳೆಯಂತೆ ಪರಂಗಿಯ ಗಿಡದ ಪ್ರತಿಭಾಗವನ್ನೂ ಒಂದಲ್ಲಾ ಒಂದು ರೂಪದಲ್ಲಿ ಬಳಸಿಕೊಳ್ಳಬಹುದು. ಅದ ರೀತಿ ಇದರ ಹೂಗಳನ್ನೂ ಆಹಾರ ಪದಾರ್ಥಗಳ ತಯಾರಿಗೆ ಬಳಸಬಹುದು. ಈ ಹೂಗಳಲ್ಲಿ ಎ,ಸಿ, ವಿಟಮಿನ್‌ಗಳು ಪುಷ್ಕಳವಾಗಿ ಇರುತ್ತವೆ. ಈ ಹೂಗಳು ಕೊಬ್ಬನ್ನು ಕಡಿಮೆ ಮಾಡಿ, ಹಸಿವನ್ನು ಹೆಚ್ಚಿಸುತ್ತವೆ. ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದರ ಪುಟ್ಟ, ಪುಟ್ಟ ಹೂಗಳು ಸ್ವಲ್ಪ ಕಹಿ. ಉಪ್ಪು ನೀರಿನಲ್ಲಿ ತೊಳೆದರೆ ಕಹಿಯ ಅಂಶ ಹೋಗುತ್ತದೆ.

ಲ್ಯಾವೆಂಡರ್‌ ಹೂ

ಈ ಹೂಗಳು ಪರಿಮಳಭರಿತವಾಗಿರುತ್ತವೆ. ಹೂಗಳಿಂದ ತಯಾರಿಸುವ ತೈಲವನ್ನು ಸ್ನಾನಕ್ಕೂ ಬಳಸುತ್ತಾರೆ. ಈ ಎಣ್ಣೆ ರೋಗ ನಿರೋಧಕವೂ ಹೌದು. ಇಂಗ್ಲಿಷ್ ಲ್ಯಾವೆಂಡರ್ ಹೂಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇದರ ಮೊಗ್ಗುಗಳನ್ನು ಹೆಚ್ಚಾಗಿ ಒಣಗಿಸಿ ಇಟ್ಟಷ್ಟೂ ರುಚಿ ಹೆಚ್ಚಾಗುತ್ತದೆ. ಹೀಗಾಗಿ ಪಂಚಾತಾರ ಹೋಟೆಲ್‌ಗಳಲ್ಲಿ ಈ ಹೂಗಳನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಲ್ಯಾವೆಂಡರ್ ಹೂಗಳನ್ನು ಜೇನಿನೊಂದಿಗೆ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಪುದೀನ ಹೂ

ಆಹಾರ ಪದಾರ್ಥಗಳ ಸುವಾಸನೆ ಹೆಚ್ಚಿಸುವುದಕ್ಕಾಗಿ ಪುದೀನ ಎಲೆಗಳನ್ನು ಮಾತ್ರ ನಾವು ಬಳಸುತ್ತೇವೆ. ಆದರೆ ಅದರ ಹೂಗಳ ಉಪಯೋಗ ಹಲವರಿಗೆ ತಿಳಿದಿಲ್ಲ. ಇದರ ಎಲೆಗಳ ರುಚಿಯೇ ಹೂಗಳಿಗೂ ಇರುತ್ತದೆ. ವಿಶೇಷ ಸಿಹಿ ಪದಾರ್ಥಗಳಿಗೆ, ಕೋಲ್ಡ್‌ ಟೀಗೆ ಈ ಹೂಗಳನ್ನು ಅಲಂಕಾರಿಕವಾಗಿ ಬಳಸಿಕೊಳ್ಳಬಹುದು. ಇದು ಸುಸ್ತನ್ನು ಕಡಿಮೆ ಮಾಡುವುದಲ್ಲದೇ, ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ.

ನುಗ್ಗೆ ಹೂ

ದಕ್ಷಿಣ ಭಾರತದಾದ್ಯಂತ ನುಗ್ಗೆಕಾಯಿಗಳನ್ನು ಸಾರಿಗೆ ಬಳಸುವುದು ಸಾಮಾನ್ಯ ಸಂಗತಿ. ಆದರೆ ನುಗ್ಗೆಯ ಹೂಗಳನ್ನೂ ಸಾರಿಗೆ ಬಳಸುತ್ತಾರೆ ಎಂಬುದು ಹಲವರಿಗೆ ಗೊತ್ತಿಲ್ಲ. ಇದರ ಹೂಗಳು ರುಚಿಕರವಾಗಿ ಮತ್ತು ಪರಿಮಳಭರಿತವಾಗಿ ಇರುತ್ತವೆ. ಬಿಸಿನೀರಿನಲ್ಲಿ ಈ ಹೂಗಳನ್ನು ಕುದಿಸಿ ಟೀ ಕೂಡ ತಯಾರಿಸಬಹುದು. ಎಣ್ಣೆಯಲ್ಲಿ ಕರಿದು ಸಂಡಿಗೆಯಂತೆ ತಿಂಡಿಯನ್ನೂ ತಯಾರಿಸಬಹುದು. ಈ ಹೂವಿನಲ್ಲಿ ಪೊಟಾಷಿಯಂ, ಕ್ಯಾಲ್ಸಿಯಂ ಪುಷ್ಕಳವಾಗಿ ಇರುತ್ತದೆ. ಮೈ–ಕೈ ನೋವಿಗೆ ಉತ್ತಮ ಔಷಧಿಯಾಗಿಯೂ ಹೌದು.

ಗುಲಾಬಿ

ಗುಲಾಬಿಯನ್ನು ವಿವಿಧ ಸಿಹಿ ಪದಾರ್ಥಗಳಿಗೆ ಬಳಸುತ್ತಾರೆ. ಗುಲಾಬ್ ಜಾಮೂನ್‌ಗೆ ಗುಲಾಬಿಜಲ ಬಳಸಿದರೆ ವಿಶೇಷ ಪರಿಮಳ ಸಿಗುತ್ತದೆ. ಈ ಹೂವಿನ ಸಿಹಿಯಾದ ರುಚಿಯೇ ಇದಕ್ಕೆ ವಿಶೇಷ ಸ್ಥಾನ ಕಲ್ಪಿಸಿದೆ. ಹೂವಿನ ದಳಗಳಿಂದ ಸಂಗ್ರಹಿಸಿದ ರಸವನ್ನು, ಕೆಲವು ಔಷಧಿಗಳಲ್ಲೂ ಬಳಸುತ್ತಾರೆ. ಶರಬತ್ ತಯಾರಿಗೂ ಗುಲಾಬಿ ದಳಗಳನ್ನು ಬಳಸುವ ರೂಢಿ ಇದೆ. ಇದರಲ್ಲಿ ಸಿ ವಿಟಮಿನ್ ಅಧಿಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT