ಸೋಮವಾರ, ನವೆಂಬರ್ 18, 2019
23 °C
‘ಸಿ‘ ಕೆಟಗರಿಯ 18 ಗಣಿಗಳ ಪೈಕಿ 4ರಲ್ಲಷ್ಟೇ ಗಣಿಗಾರಿಕೆ ಆರಂಭ

ಗಣಿಗಾರಿಕೆಗೆ ಅನುಮತಿ ವಿಳಂಬಕೆಲಸವಿಲ್ಲದೆ ಜನರ ಪರದಾಟ

Published:
Updated:
Prajavani

ಹೊಸಪೇಟೆ: ‘ಸಿ‘ ಕೆಟಗರಿಯ ಒಟ್ಟು 18 ಗಣಿ ಪ್ರದೇಶಗಳ ಹರಾಜು ಪ್ರಕ್ರಿಯೆ ಮುಗಿದರೂ ಗಣಿಗಾರಿಕೆಗೆ ಅನುಮತಿ ಸಿಗದ ಕಾರಣ ಸಾವಿರಾರು ಜನರಿಗೆ ಕೆಲಸ ಇಲ್ಲದೇ ಸುಮ್ಮನೆ ಕೂರುವಂತಾಗಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದ ಪ್ರಕಾರ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಚಿತ್ರದುರ್ಗದ ಎರಡು, ಬಳ್ಳಾರಿ ಜಿಲ್ಲೆಯ 16 ಗಣಿಗಳನ್ನು ಹರಾಜು ಮಾಡಲಾಗಿದೆ. ಆದರೆ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಸಿಗದ ಕಾರಣ ಗಣಿಗಾರಿಕೆ ಆರಂಭಿಸಲು ಸಾಧ್ಯವಾಗುತ್ತಿಲ್ಲ.

ಅನುಮತಿ ಸಿಕ್ಕ ನಾಲ್ಕೂ ಗಣಿಗಳು ಜೆ.ಎಸ್‌.ಡಬ್ಲ್ಯೂ ಕಂಪನಿಗೆ ಸೇರಿವೆ. ಅವುಗಳಲ್ಲಿ ಹೊತೂರ್‌ ಟ್ರೇಡರ್ಸ್‌, ವಿ.ಎಸ್‌. ಲಾಡ್‌ ಅಂಡ್‌ ಸನ್ಸ್‌, ತುಂಗಾ ಮತ್ತು ಭದ್ರಾ ಮಿನರಲ್ಸ್‌ ಸೇರಿವೆ. ಮಿಕ್ಕುಳಿದ ಕಂಪನಿಗಳು ಹರಾಜಿನಲ್ಲಿ ಗಣಿ ತನ್ನದಾಗಿಸಿಕೊಂಡರೂ ಗಣಿಗಾರಿಕೆಗೆ ಅನುಮತಿ ಸಿಕ್ಕಿಲ್ಲ. ‘ಇದರಿಂದ ಉದ್ಯೋಗ ಸೃಷ್ಟಿಗೆ ಹಿನ್ನಡೆ ಆಗಿದೆ. ಸರ್ಕಾರದ ರಾಜಧನಕ್ಕೆ ಪೆಟ್ಟು ಬೀಳುತ್ತಿದೆ. ಬ್ಯಾಂಕುಗಳಲ್ಲಿ ಹಣಕಾಸಿನ ವ್ಯವಹಾರ ಕಡಿಮೆಯಾಗಿದೆ’ ಎನ್ನುತ್ತಾರೆ ಗಣಿ ತಜ್ಞ ಶಿವಕುಮಾರ ಮಾಳಗಿ.

‘ಯಾವುದಾದರೂ ಒಂದು ಗಣಿ ಪ್ರದೇಶದಲ್ಲಿ ನೇರವಾಗಿ ಸಾವಿರ ಜನ ಕೆಲಸ ಮಾಡುತ್ತಿದ್ದರೆ, ಅಪರೋಕ್ಷವಾಗಿ ಹತ್ತು ಸಾವಿರ ಜನ ಬೇರೆ ಬೇರೆ ಕೆಲಸ ಮಾಡುತ್ತಾರೆ. ಸುಪ್ರೀಂಕೋರ್ಟ್‌ ಸೂಚನೆ ಪ್ರಕಾರ ಹರಾಜಿನ ಮೂಲಕ ಗಣಿ ಹಂಚಿಕೆ ಮಾಡಲಾಗಿದೆ. ಆದರೆ, ಗಣಿಗಾರಿಕೆಗೆ ಅನುಮತಿ ಕೊಡಲು ಅನಗತ್ಯ ವಿಳಂಬ ಮಾಡುತ್ತಿರುವುದರಿಂದ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ‘ ಎಂದು ಹೇಳಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ವರ್ಷಕ್ಕೆ 50 ಮಿಲಿಯನ್‌ ಟನ್‌ ಅದಿರು ತೆಗೆಯಲಾಗುತ್ತಿತ್ತು. ಈಗ ಅದನ್ನು 30 ಮಿಲಿಯನ್‌ ಟನ್‌ಗೆ ಸೀಮಿತಗೊಳಿಸಲಾಗಿದೆ. ಆದರೆ, 18ರಲ್ಲಿ ಕೇವಲ ನಾಲ್ಕೇ ಗಣಿಗಳಲ್ಲಿ ಕೆಲಸ ನಡೆಯುತ್ತಿರುವ ಕಾರಣ ಆ ಗುರಿ ತಲುಪುವ ಸಾಧ್ಯತೆ ಕಡಿಮೆ. ಹೀಗೆಯೇ ಮುಂದುವರಿದರೆ ಉಕ್ಕಿನ ಕಾರ್ಖಾನೆಗಳಿಗೆ ಕಚ್ಚಾ ವಸ್ತು ಪೂರೈಸಲು ಆಗುವುದಿಲ್ಲ. ಅವುಗಳು ಕೂಡ ಬಾಗಿಲು ಮುಚ್ಚಿ, ಇನ್ನಷ್ಟು ಜನ ಉದ್ಯೋಗ ಕಳೆದುಕೊಳ್ಳಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಈಗಾಗಲೇ ಹರಾಜಾದ ಗಣಿಗಳಲ್ಲಿ ಕೆಲಸ ನಡೆಯುತ್ತಿಲ್ಲ. 2020ರಲ್ಲಿ 48 ಗಣಿಗಳಲ್ಲಿ ಗಣಿಗಾರಿಕೆಗೆ ಕೊಟ್ಟಿರುವ ಅನುಮತಿಯ ಸಮಯ ಮುಗಿದು ಹೋಗುತ್ತದೆ. ಆಗ ಸಮಸ್ಯೆ ಮತ್ತಷ್ಟು ಉದ್ಭವಿಸಬಹುದು. ಇದೇ ಧೋರಣೆ ಮುಂದುವರೆದರೆ ಈ ಕ್ಷೇತ್ರಕ್ಕೆ ಹೊಸಬರು ಬರುವುದಿಲ್ಲ’ ಎಂದು ವರ್ಷದಿಂದ ಗಣಿಗಾರಿಕೆಯ ಅನುಮತಿ ನಿರೀಕ್ಷೆಯಲ್ಲಿರುವ ಹೊತೂರ್‌ ಇಸ್ಪಾತ್‌ ಕಂಪನಿಯ ಗಣಿ ಮಾಲೀಕ ಮೊಹಮ್ಮದ್‌ ಇಕ್ಬಾಲ್‌ ಹೊತೂರ್‌ ಪ್ರತಿಕ್ರಿಯಿಸಿದರು.

‘ಕೆಲವರು ಅನೇಕ ವರ್ಷಗಳಿಂದ ಗಣಿಗಾರಿಕೆ ಮಾಡುತ್ತಿದ್ದಾರೆ. ಅವರ ಗಣಿಗಾರಿಕೆಯ ಅವಧಿ ಪೂರ್ಣಗೊಂಡು ಹರಾಜಿನಲ್ಲಿ ಮತ್ತೆ ಹೊಸದಾಗಿ ಗಣಿ ಪಡೆದರೂ ಎಲ್ಲ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಅದಕ್ಕಾಗಿ ವರ್ಷಗಳೇ ಉರುಳಿ ಹೋಗುತ್ತಿವೆ. ಈ ಕ್ಷೇತ್ರಕ್ಕೆ ಹೊಸಬರು ಬಂದರೆ ಈ ನಿಯಮ ಇರಬೇಕು ಹೊರತು ಹಳಬರಿಗಲ್ಲ’ ಎಂದರು.

* ಗಣಿ ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶೀಘ್ರದಲ್ಲಿ ಗಣಿಗಾರಿಕೆ ಅನುಮತಿ ಕೊಡಲು ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧಾರ.

–ಮೊಹಮ್ಮದ್‌ ಇಕ್ಬಾಲ್‌ ಹೊತೂರ್‌, ಗಣಿ ಮಾಲೀಕ

* ಬಳ್ಳಾರಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಹರಾಜುಗೊಂಡಿರುವ ಗಣಿಗಳಲ್ಲಿ ಕೆಲಸ ಆರಂಭಗೊಂಡರೆ ಅದು ಬಗೆಹರಿಯಬಹುದು.

–ಶಿವಕುಮಾರ ಮಾಳಗಿ, ಗಣಿ ತಜ್ಞ

ಪ್ರತಿಕ್ರಿಯಿಸಿ (+)