ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದಿಂದ ಹೊರಕ್ಕೆ: ಸಂಪರ್ಕಕ್ಕೆ ‌ಸಿಗದ ರಮೇಶ ಜಾರಕಿಹೊಳಿ

Last Updated 22 ಡಿಸೆಂಬರ್ 2018, 11:49 IST
ಅಕ್ಷರ ಗಾತ್ರ

ಬೆಳಗಾವಿ: ಸಚಿವ ಸಂಪುಟದಿಂದ ಕೈಬಿಡಲಾಗುತ್ತಿದೆ ಎನ್ನಲಾಗುತ್ತಿರುವ ರಮೇಶ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಬೆಳಿಗ್ಗೆಯಿಂದಲೂ ಮೊಬೈಲ್ಕರೆ ಸ್ವೀಕರಿಸುತ್ತಿರಲಿಲ್ಲ. ಕೆಲವು ನಿಮಿಷಗಳಿಂದ ಅವರ ಫೋನ್ ನಂಬರ್ ಸ್ವಿಚ್ಚ್ಡ್ ಆಫ್ ಎಂದು ಬರುತ್ತಿದೆ.

ಅವರು ಗೋಕಾಕದ ಮನೆಯಲ್ಲಿಯೇ ಇಲ್ಲ. ಬೆಳಿಗ್ಗೆಯೇ ಬೆಂಗಳೂರಿಗೆ ಹೋಗಿದ್ದಾರೆ ಎಂದು ಕುಟುಂಬದವರು ತಿಳಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿದಿದ್ದರು. ನಂತರ ನಡೆದ ಸಚಿವ ಸಂಪುಟ ಸಭೆಗೂ ಬಂದಿರಲಿಲ್ಲ. ಗಂಟಲು ನೋವಿನಿಂದ ಅವರು ಬಂದಿರಲಿಲ್ಲ ಎಂದು ಪಕ್ಷದ ಮುಖಂಡರು ಸಮರ್ಥಿಸಿಕೊಂಡಿದ್ದರು.

ಆದರೆ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರು ಆಯೋಜಿಸಿದ್ದ ಔತಣ ಕೂಟದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಮರುದಿನ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡಿದ್ದ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಚರ್ಚಿಸಿದ್ದರು; ಬಿಜೆಪಿಯವರಿಂದ ಅಂತರ ಕಾಯ್ದುಕೊಳ್ಳುವಂತೆ ಬುದ್ಧಿ ಹೇಳಿದ್ದರು.

ವಾಲ್ಮೀಕಿ ಸಮಾಜದ ಸಭೆಯೊಂದರಲ್ಲಿ ಶಾಸಕ ಸತೀಶ ಜಾರಕಿಹೊಳಿ ಜೊತೆ ಶಾಸಕ, ಬಿಜೆಪಿಯ ಬಿ. ಶ್ರೀರಾಮುಲು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ವಿರೋಧ ಪಕ್ಷವಾದ ಬಿಜೆಪಿಯವರ ಜೊತೆ ಹೊಂದಿದ್ದ ಅತಿಯಾದ ಒಡನಾಟವೇ, ಅವರು ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣವಾಗಿದೆ. ಸಚಿವ ಸಂಪುಟ ಸಭೆಗಳಲ್ಲೂ ಅವರು ಪಾಲ್ಗೊಳ್ಳುತ್ತಿರಲಿಲ್ಲ. ಜಿಲ್ಲೆಯಲ್ಲೂ‌ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಿರಲಿಲ್ಲ. ಕಬ್ಬಿನ ಬಾಕಿ ಕೊಡಿಸುವಂತೆ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಅವಧಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಅಹವಾಲು ಕೂಡ ಆಲಿಸಿರಲಿಲ್ಲ. ಆ ವೇಳೆ ಬೆಂಗಳೂರಿನಲ್ಲಿ ನಡೆದಿದ್ದ ಯಡಿಯೂರಪ್ಪ ಸಂಬಂಧಿಯ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವೆಲ್ಲವೂ ಅವರು ಸಚಿವ ಸ್ಥಾನ ಕಳೆದುಕೊಳ್ಳಲು ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅವರ ಮುಂದಿನ ನಡೆ ಏನು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಪ್ರತಿಕ್ರಿಯೆ ಪಡೆಯಲು ಅವರು ಮಾಧ್ಯಮದವರಿಗೆ ಸಿಗುತ್ತಿಲ್ಲ. ಫೋನ್ ಕರೆಗೂ ಸ್ಪಂದಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT