ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗೆ ಇಂದಿನಿಂದ ಸಮೀಕ್ಷೆ

ಶಾಲೆ ಬಿಡಲು ಕಾರಣ ಹುಡುಕಿ ಹೊರಡುತ್ತಿದೆ ಶಿಕ್ಷಕರ ನೇತೃತ್ವದ ತಂಡ
Last Updated 13 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಧಾರವಾಡ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಹಾಗೂ ಅವರು ಶಾಲೆಗೆ ಹೋಗದಿರಲು ಇರುವ ಕಾರಣವನ್ನು ಪತ್ತೆ ಮಾಡಲು, ಮಕ್ಕಳ ದಿನವಾದ ನ.14ರಿಂದ ಸಮೀಕ್ಷೆಯೊಂದು ಆರಂಭವಾಗುತ್ತಿದೆ.

ಶಾಲಾ ಮುಖ್ಯವಾಹಿನಿಗೆ ಬಂದ ಮಕ್ಕಳಲ್ಲಿ ಒಟ್ಟು 82,713 ಮಕ್ಕಳು ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಿ, ಶಾಲೆ ಬಿಡಲು ಕಾರಣವಾದ ಅಂಶಗಳನ್ನು ಅರಿಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

6ರಿಂದ 16ರ ವಯೋಮಾನದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯಲು ಇರುವ ಕಾರಣಗಳನ್ನು ತಿಳಿಯಲು, ವಿವರವಾದ ಮತ್ತು ಪರಿಣಾಮಕಾರಿಯಾದ ಸಮೀಕ್ಷೆ ನಡೆಸಲು ಇಲಾಖೆಯು ಈಗಾಗಲೇ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿ ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆ ಜತೆಗೂಡಿ ಸಮೀಕ್ಷೆ ನಡೆಸಲಿವೆ.

ಸಮೀಕ್ಷೆಯಲ್ಲಿ ಸಂಗ್ರಹವಾಗುವ ಮಾಹಿತಿಯು, ಮಕ್ಕಳ ಸಾಧನೆ ಗಮನಿಸುವ ವ್ಯವಸ್ಥೆ (ಎಸ್‌ಎಟಿಎಸ್‌)ಯಲ್ಲಿ ದಾಖಲಾಗಲಿದೆ. ಈ ಕಾರ್ಯದಲ್ಲಿ ಪಂಚಾಯ್ತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಎನ್‌ಎಸ್‌ಎಸ್‌ ಸ್ವಯಂ ಸೇವಕರನ್ನು ಒಳಗೊಂಡ ತಂಡ ರಚಿಸುವಂತೆ ಇಲಾಖೆ ಸೂಚಿಸಿದೆ. ಮೇಲುಸ್ತುವಾರಿಗೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಯನ್ನು ಇಲಾಖೆ ರಚಿಸಿದೆ.

ನ.17ರಿಂದ 28ರವರೆಗೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ನೇತೃತ್ವದ ತಂಡಗಳನ್ನು ರಚಿಸಿ, ಮನೆ–ಮನೆ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಬೇಕು ಹಾಗೂ ನಮೂನೆಗಳನ್ನು ತುಂಬಬೇಕು. ನ.29ರಿಂದ ಡಿ.15ರವರೆಗೆ ಸಂಗ್ರಹಿಸಲಾದ ಮಾಹಿತಿಯನ್ನು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಇಲಾಖೆ ವೇಳಾಪಟ್ಟಿ ನೀಡಿದೆ.

ಶಾಲಾ ಮುಖ್ಯ ಶಿಕ್ಷಕರು ಗ್ರಾಮ ಸಭೆ ನಡೆಸಿ ಶಾಲೆಯಿಂದ ಹೊರಗುಳಿದ, ಶಾಲೆಗೆ ದಾಖಲಾಗದ ಹಾಗೂ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಪರಿಷ್ಕರಿಸಲಾಗದ ಮಕ್ಕಳ ಮಾಹಿತಿಯನ್ನು ಗ್ರಾಮ ಸಭೆಯಲ್ಲಿ ಹಂಚಿಕೊಳ್ಳಬೇಕು. ಇದಕ್ಕೆ ಗ್ರಾಮಸ್ಥರ ಸಹಕಾರವನ್ನೂ ಪಡೆಯುವಂತೆ ಸೂಚಿಸಲಾಗಿದೆ.

**

ಜಿಲ್ಲೆಯಲ್ಲಿ 1,689 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರ ಸಮೀಕ್ಷೆ ಕಾರ್ಯ ನ.14ರಿಂದ ಆರಂಭಗೊಳ್ಳಲಿದೆ.
– ಆರ್‌.ಎಸ್‌. ಮುಳ್ಳೂರ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT