70,000 ಮಕ್ಕಳು ಶಾಲೆ ಹೊರಗೆ: ಸಮೀಕ್ಷೆಯಿಂದ ಹೊರಬಿದ್ದ ಮಾಹಿತಿ

7
ಸರ್ವ ಶಿಕ್ಷಣ ಅಭಿಯಾನದಡಿ ನಡೆಸಿದ ಸಮೀಕ್ಷೆ

70,000 ಮಕ್ಕಳು ಶಾಲೆ ಹೊರಗೆ: ಸಮೀಕ್ಷೆಯಿಂದ ಹೊರಬಿದ್ದ ಮಾಹಿತಿ

Published:
Updated:

ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ಎಂಟು ವರ್ಷಗಳಾದರೂ ರಾಜ್ಯದಲ್ಲಿ 70,116 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಶಿಕ್ಷಣ ಇಲಾಖೆಯೇ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ.

ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳು ರಾಜಧಾನಿ ವ್ಯಾಪ್ತಿಯ ಬೆಂಗಳೂರು ನಗರ–ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲೇ ಹೆಚ್ಚಿದ್ದಾರೆ. ಹಿಂದುಳಿದ ಜಿಲ್ಲೆಗಳೆಂಬ ಹಣೆಪಟ್ಟಿ ಹೊಂದಿರುವ ಕಲಬುರ್ಗಿ, ಯಾದಗಿರಿ, ವಿಜಯಪುರ, ಬಳ್ಳಾರಿಯಲ್ಲೂ ಹೆಚ್ಚು ಮಕ್ಕಳು ಶಾಲಾ ಕಲಿಕೆಯಿಂದ ಹೊರಗಿದ್ದಾರೆ. ಇದಕ್ಕೆ ವಲಸೆಯೇ ಕಾರಣವಂತೆ.

ಬಾಲಕಾರ್ಮಿಕ ಸಮಸ್ಯೆ, ವಿದ್ಯಾರ್ಥಿನಿಯರು ಪ್ರೌಢಾವಸ್ಥೆಗೆ ಬರುವುದು, ಮದುವೆ, ಶಾಲಾ ಪರಿಸರ ಆಕರ್ಷಣೀಯ ಆಗಿಲ್ಲದಿರುವುದು ಹಾಗೂ ಶಿಕ್ಷಕರ ಭಯದಿಂದ ಮಕ್ಕಳು ಶಾಲೆಯಿಂದ ವಿಮುಖರಾಗಿ ದ್ದಾರೆ. ತೀವ್ರ ಅಂಗವಿಕಲತೆ, ಮರಣ ಹೊಂದಿರುವುದು,ಅನಾಥ ಆಗಿರುವುದು, ಎಚ್‌ಐವಿ, ಕುಷ್ಠರೋಗದಿಂದ ಬಳಲುವುದು, ಬಾಲಾಪರಾಧದಲ್ಲಿ ಭಾಗಿಯಾಗಿರುವುದು ಅವರನ್ನು ಶಾಲೆಯಿಂದ ದೂರ ಉಳಿಸಿವೆ.

ಈ ಕಾರಣಗಳಿಗೆ ಶೇ 46ರಷ್ಟು ಮಕ್ಕಳು ಓದನ್ನು ನಿಲ್ಲಿಸಿದ್ದಾರೆ.

ಈ ಹಿಂದೆ 13 ವರ್ಷ ವಯೋಮಾನದ ವರೆಗಿನ ಇಂತಹ ಮಕ್ಕಳನ್ನು (8ನೇ ತರಗತಿವರೆಗೆ) ಶಿಕ್ಷಕರೇ ಕ್ಷೇತ್ರಕಾರ್ಯ ನಡೆಸಿ ಗುರುತಿಸುತ್ತಿದ್ದರು. ಈ ಬಾರಿ 15 ವರ್ಷ ವಯೋಮಾನದ ವರೆಗಿನ ಮಕ್ಕಳನ್ನು (10ನೇ ತರಗತಿ ವರೆಗೆ) ಸಮೀಕ್ಷೆಗೆ ಒಳಪಡಿಸಲಾಗಿದೆ. ಹಾಗಾಗಿ ಕಳೆದ ವರ್ಷ 13,507 ಇದ್ದ ಈ ಮಕ್ಕಳ ಸಂಖ್ಯೆ ಈ ಬಾರಿ ಗಣನೀಯವಾಗಿ ಹೆಚ್ಚಾಗಿದೆ.

ಸಮೀಕ್ಷಾ ವಿಧಾನ: ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಮಾಹಿತಿಯು ಮಕ್ಕಳ ಸಾಧನೆ ಗಮನಿಸುವ ಆನ್‌ಲೈನ್‌ ವ್ಯವಸ್ಥೆಯಲ್ಲಿ (ಎಸ್‌ಎಟಿಎಸ್‌) ದಾಖಲಾಗುತ್ತದೆ. ಶೈಕ್ಷಣಿಕ ವರ್ಷ ಮುಗಿದ ಬಳಿಕ ಆ ಮಗು, ಮುಂದಿನ ವರ್ಷದಲ್ಲಿ ಶಿಕ್ಷಣ ಮುಂದುವರಿಸದಿದ್ದರೆ, ಹೊರಗುಳಿದ ಮಗು ಎಂದು ಇಲಾಖೆ ಗುರುತಿಸಿದೆ. ಜತೆಗೆ, ಶಾಲೆಗೆ ದಾಖಲಾಗದ, ಬೀದಿ ಬದಿಯಲ್ಲಿ ಚಿಂದಿ ಆಯುವ, ಭಿಕ್ಷೆ ಬೇಡುವ, ಸಂತ್ರಸ್ತ ಮಹಿಳೆಯರ ಮಕ್ಕಳು, ಅಲೆಮಾರಿಗಳ ಮಕ್ಕಳನ್ನು 2018–19ನೇ ಸಾಲಿನ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ.ಈ ಮಕ್ಕಳನ್ನು ಗುರುತಿಸಲು 2018ರ ನವೆಂಬರ್‌14ರಿಂದ 30ರವರೆಗೆ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸಲಾಗಿತ್ತು.

* ಸ್ನೇಹಿ ವಾತಾವರಣದ ಕೊರತೆ, ಶಿಕ್ಷಕರ ಮತ್ತು ಪರೀಕ್ಷಾ ಭಯದಿಂದ ಹೊರಬಂದರೆ, ಅವರು ಶಾಲೆಬಿಟ್ಟ ಮಕ್ಕಳಲ್ಲ. ಶಾಲೆಯೇ ಹೊರತಳ್ಳಿದ ಮಕ್ಕಳು. ಅವರೆಡೆ ಗಮನ ಕೊಡಲು ಪ್ರತ್ಯೇಕ ವ್ಯವಸ್ಥೆ ಬೇಕು.

-ಜಿ.ನಾಗಸಿಂಹ ರಾವ್‌, ಸಂಚಾಲಕ, ಆರ್‌ಟಿಇ ಕಾರ್ಯಪಡೆ

ಶಾಲೆಗೆ ಕರೆತರಲು ಕೈಗೊಳ್ಳುತ್ತಿರುವ ಕ್ರಮಗಳು

* ವಸತಿ ನಿಲಯಗಳ ವ್ಯವಸ್ಥೆ

* ವಸತಿಸಹಿತ ವಿಶೇಷ ಕಲಿಕೆ (ಚಿಣ್ಣರ ಅಂಗಳ, ಚಿಣ್ಣರ ತಂಗುಧಾಮ)

* ವಸತಿರಹಿತ 6 ತಿಂಗಳ ವಿಶೇಷ ಕಲಿಕೆ (ಟೆಂಟ್‌ ಶಾಲೆಗಳು)

ಅಂಕಿ–ಅಂಶ

* 70,116 ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳು

* 39,059 ಶಾಲೆಬಿಟ್ಟ ಬಾಲಕರು

* 31,054 ಶಾಲೆಯಿಂದ ಹೊರಗುಳಿದ ಬಾಲಕಿಯರು

* 3 ಶಾಲೆಬಿಟ್ಟ ತೃತೀಯಲಿಂಗಿ ಮಕ್ಕಳು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !