ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ತ್ಯಾಜ್ಯಗಳ ವಿಲೇವಾರಿ: ಕರ್ನಾಟಕ ಸೇರಿ 25 ರಾಜ್ಯಗಳಿಗೆ ದಂಡ?

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಉಲ್ಲಂಘನೆ
Last Updated 26 ಮೇ 2019, 19:30 IST
ಅಕ್ಷರ ಗಾತ್ರ

ನವದೆಹಲಿ:ಪ್ಲಾಸ್ಟಿಕ್ ತ್ಯಾಜ್ಯಗಳ ವ್ಯವಸ್ಥಿತ ವಿಲೇವಾರಿಗೆ ಕ್ರಿಯಾ ಯೋಜನೆಗಳನ್ನು ಸಲ್ಲಿಸದೆ ಇರುವುದಕ್ಕಾಗಿ ಕರ್ನಾಟಕ ಸೇರಿದಂತೆ 25 ರಾಜ್ಯ ಸರ್ಕಾರಗಳು ಭಾರಿ ದಂಡ ತೆರಬೇಕಾಗಬಹುದು.

‘ಆಂಧ್ರಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ಹೊರತುಪಡಿಸಿ ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ– 2016 (ಪಿಡಬ್ಲ್ಯುಎಂ) ನಿಯಮಗಳ ಅನುಸಾರ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು.ಏ.30ರ ಒಳಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ಇವುಗಳನ್ನು ಸಲ್ಲಿಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ನೀಡಿತ್ತು.

‘ಕ್ರಿಯಾ ಯೋಜನೆಗಳನ್ನು ಸಲ್ಲಿಸಲುವಿಫಲವಾದಲ್ಲಿ, ಮೇ 1ರ ನಂತರ ತಿಂಗಳಿಗೆ ತಲಾ ₹1 ಕೋಟಿಯಂತೆ ಸಿಪಿಸಿಬಿಗೆ ದಂಡ ಪಾವತಿಸಬೇಕು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಅನುಸರಿಸದ ರಾಜ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದ ಸಿಪಿಸಿಬಿ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್.ಕೆ. ನಿಗಮ್ ಈ ಕುರಿತು ಪ್ರತಿಕ್ರಿಯಿಸಿ, ‘ಸಿಪಿಸಿಬಿ ನೀಡಿದ ಆದೇಶಗಳನ್ನು ರಾಜ್ಯಗಳು ಪಾಲಿಸಲಿಲ್ಲ. ಆದ್ದರಿಂದ ನಾವು ಎನ್‌ಜಿಟಿ ಮೊರೆ ಹೋದೆವು. ಈಗ ಎನ್‌ಜಿಟಿ ಆದೇಶವನ್ನು ಸಹ ರಾಜ್ಯಗಳು ಉಲ್ಲಂಘಿಸುತ್ತಿವೆ. ಹಾಗಾಗಿ ಇದಕ್ಕೆ ಬೆಲೆ ತೆರಲೇಬೇಕಾಗುತ್ತದೆ. ಶಿಕ್ಷೆ ಎಂದರೆ ಕೇವಲ ದಂಡ ಕಟ್ಟುವುದಷ್ಟೆ ಅಲ್ಲ. ಕೆಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಸಹ ವಿಧಿಸಲಾಗುತ್ತದೆ’ ಎಂದು ಹೇಳಿದ್ದಾರೆ.

‘ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ರಾಜ್ಯಗಳು ಆದ್ಯತೆ ನೀಡದೆ ಹೋಗಿದ್ದರಿಂದ ಪರಿಸ್ಥಿತಿ ಶೋಚನೀಯವಾಗಿತ್ತು. ಮುನ್ಸಿಪಲ್‌ ಕಾರ್ಪೊರೇಷನ್‌ಗಳ ಆದ್ಯತೆಯ ಪಟ್ಟಿಯಲ್ಲಿ ತ್ಯಾಜ್ಯ ನಿರ್ವಹಣೆ ಕೊನೆಯದಾಗಿರುತ್ತದೆ’ ಎಂದು ಅವರು ತಿಳಿಸಿದ್ದಾರೆ.

ನಿಷೇಧ ಪರಿಣಾಮ ಕಾರಿಯಾಗಿಲ್ಲ:‘ಕರ್ನಾಟಕ, ತಮಿಳುನಾಡು, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಆದರೆ ಸೂಕ್ತ ನಿಯಮಗಳನ್ನು ಅನುಸರಿಸದೆ ಇರುವುದರಿಂದ ನಿಷೇಧ ಪರಿಣಾಮಕಾರಿಯಾಗಿಲ್ಲ. ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವುದು ಇನ್ನೂ ಮುಂದುವರಿದಿದೆ’ ಎಂದು ಎನ್‌ಜಿಟಿ ಹೇಳಿತ್ತು.

ಸಂವಹನ ಕೊರತೆ
‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳುಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ ಅನುಸರಿಸದೆ ಇರಲು ಮುಖ್ಯ ಕಾರಣ,ಈಚೆಗಿನ ಬೆಳವಣಿಗೆಗಳ ಕುರಿತು ಗಮನ ವಹಿಸದೆ ಇರುವುದು ಹಾಗೂ ಮಾಹಿತಿ ಕೊರತೆ. ರಾಜ್ಯ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳು ಹಾಗೂಪರಿಸರ ಸಚಿವಾಲಯದ ಅಧಿಕಾರಿಗಳ ನಡುವೆ ಸಂವಹನ ಕೊರತೆ ಇದೆ’ ಎಂದು ಭಾರತೀಯ ಮಾಲಿನ್ಯ ನಿಯಂತ್ರಣ ಸಂಘ (ಐಪಿಸಿಎ) ಎನ್‌ಜಿಒದ ಮುಖ್ಯಸ್ಥ ಆಶಿಷ್ ಜೈನ್ ಹೇಳಿದ್ದಾರೆ.

**

ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳುವ ಕುರಿತು ರಾಜ್ಯಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
-ಆಶಿಷ್ ಜೈನ್, ಐಪಿಸಿಎ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT