ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಾಯನಪುರ ದಾಂದಲೆ ಪ್ರಕರಣ: 67 ಜನ ಸೆರೆ

ಕ್ವಾರಂಟೈನ್‌ಗೆ ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ
Last Updated 20 ಏಪ್ರಿಲ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಪಾದರಾಯನಪುರದಲ್ಲಿ ಕೋವಿಡ್ ಸೋಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಮುಂದಾಗಿದ್ದ ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿ ಬ್ಯಾರಿಕೇಡ್ ಹಾಗೂ ಪೆಂಡಾಲ್ ಧ್ವಂಸ ಮಾಡಿದ್ದ ಆರೋಪದ ಮೇಲೆ 67 ಜನರನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಸೋಂಕಿತರ ಜೊತೆ ದ್ವಿತೀಯ ಸಂಪರ್ಕವಿಟ್ಟುಕೊಂಡಿದ್ದ ಶಂಕಿತರನ್ನು ಕ್ವಾರಂಟೈನ್‌ಗಾಗಿ ಕರೆದೊಯ್ಯಲು ಸಿಬ್ಬಂದಿ, ಪಾದರಾಯನಪುರದ ಗುಡ್ಡದಹಳ್ಳಿಯ ಅರ್ಫತ್ ನಗರಕ್ಕೆ ಭಾನುವಾರ ರಾತ್ರಿ ಹೋಗಿದ್ದರು. ಆಗ ಹಲ್ಲೆ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದರು.

‘ಘಟನೆ ಸಂಬಂಧ ಐದು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ವಾಜೀದ್, ಇರ್ಫಾನ್, ಇರ್ಷಾದ್ ಅಹ್ಮದ್ ಹಾಗೂ ಫರ್ಜೂವಾ ಎಂಬ ಮಹಿಳೆ ಸೇರಿ 70 ಮಂದಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಈ ಪೈಕಿ ಫರ್ಜೂವಾ ಮಾತ್ರ ಸಿಕ್ಕಿಬಿದ್ದಿದ್ದಾಳೆ. ಉಳಿದವರು ಸದ್ಯಕ್ಕೆ ತಲೆಮರೆಸಿಕೊಂಡಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ತಿಳಿಸಿದರು.

‘ಕೊಂದು ಬಿಡಿ’ ಎಂದು ಪ್ರಚೋದನೆ: ಕ್ವಾರಂಟೈನ್‌ಗೆ ಕರೆದೊಯ್ಯಲು ಶಂಕಿತರ ಮನವೊಲಿಸುವನ್ನು ಸಿಬ್ಬಂದಿ ಮಾಡುತ್ತಿದ್ದರು. ಆಗಸ್ಥಳಕ್ಕೆ ಬಂದಿದ್ದ ಆರೋಪಿಗಳು, ‘ವೈದ್ಯರು, ಸಿಬ್ಬಂದಿ ಹಾಗೂ ಪೊಲೀಸರಿಗೆ ಹೊಡೆಯಿರಿ. ಅವರೆಲ್ಲರನ್ನು ಇವತ್ತು ಸಾಯಿಸಿಯೇ ಬಿಡೋಣ’ ಎಂದು ಪ್ರಚೋದಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಂಧಿತ ಫರ್ಜೂವಾ ಗಾಂಜಾ ಮಾರಾಟ ಮಾಡುತ್ತಿದ್ದಾಳೆ. ಆಕೆ ಜತೆ ಸೇರಿದ್ದ ಕೆಲ ಯುವಕರು ಗಾಂಜಾ ಮತ್ತಿನಲ್ಲಿ ಕೃತ್ಯ ಎಸಗಿದ್ದು, ಅವರೆಲ್ಲ ತಪ್ಪೊಪ್ಪಿಕೊಂಡಿದ್ದಾರೆ.’

‘ಗಲಾಟೆಯ ಪ್ರಮುಖ ಆರೋಪಿ ಇರ್ಫಾನ್, ಕೆಎಫ್‌ಡಿ ಇರ್ಫಾನ್‌ ಎಂದೇ ಗುರುತಿಸಿಕೊಂಡಿದ್ದ. ಆತ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಬೊಮ್ಮಾಯಿ ತರಾಟೆ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಭದ್ರತೆ ಬಿಗಿಗೊಳಿಸದೆ ಇರುವುದಕ್ಕಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ಹಾಗೂ ಡಿಸಿಪಿ ಬಿ.ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪಾದರಾಯನಪುರದಲ್ಲಿ ನಡೆದಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕಾದರೆ ದುಷ್ಕೃತ್ಯದಲ್ಲಿ ತೊಡಗಿರುವವರನ್ನು ಗುರುತಿಸಿ ಕಠಿಣವಾಗಿ ಶಿಕ್ಷಿಸಬೇಕು’ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಗೂಂಡಾವರ್ತನೆ ತೋರಿದವರ ಬಗ್ಗೆ ಮೃದು ಧೋರಣೆ ಇಲ್ಲ. ಕರ್ತವ್ಯಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಬಲ ಪ್ರಯೋಗಕ್ಕೆ ಪೊಲೀಸರಿಗೆ ಮುಕ್ತ ಅವಕಾಶ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT